ಚಿಕ್ಕಮಗಳೂರು

ಬೇಡ ಜಂಗಮರಿಗೆ ಸಂವಿಧಾನದತ್ತ ಸೌಲಭ್ಯ ನೀಡಿ

Published On :

ಕ.ಪ್ರ.ವಾರ್ತೆ  ತರೀಕೆರೆ  ಜೂ. 12 ಆರ್ಥಿಕವಾಗಿ ಹಿಂದುಳಿದ ಬೇಡಜಂಗಮರಿಗೆ ಸಂವಿಧಾನದತ್ತ ಸೌಲಭ್ಯ  ದೊರಕಿಸಿಕೊಡಬೇಕು ಎಂದು ಬಾಳೆಹೊನ್ನೂರು ಪ್ರಸನ್ನರೇಣುಕಾ ವೀರ ಸೋಮೇಶ್ವರ ಶ್ರೀ ತಿಳಿಸಿದ್ದಾರೆ.
ಅವರು ತರೀಕೆರೆ ತಾಲೂಕು ಬೇಡ ಜಂಗಮ ಸಮಾಜ ಸಂಘ ತರೀಕೆರೆ ವತಿಯಿಂದ ಸಮೀಪದ ಹುಣಸಘಟ್ಟ  ಗುರುಹಾಲುಸ್ವಾಮಿ ಮಠದ ಆವರಣದಲ್ಲಿ ಏರ್ಪಡಿಸಲಾಗಿದ್ದ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ತರೀಕೆರೆ ತಾಲೂಕು ಬೇಡ ಜಂಗಮರ ಗಣತಿ ಜಂಗಮದರ್ಶನ ಪುಸ್ತಕ ಬಿಡುಗಡೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಗಣತಿ ಶ್ಲಾಘನೀಯ: ಜಂಗಮ ಸಮಾಜ ಹೆಚ್ಚು ಸಂಘಟಿತರಾಗಿ ಸೌಲಭ್ಯ ಪಡೆಯಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಬೇಡ ಜಂಗಮ ಗಣತಿ ಕಾರ್ಯ ಶ್ಲಾಘನೀಯವಾಗಿದೆ ಎಂದು ತಿಳಿಸಿದ ಅವರು ಬದುಕಿ ಬಾಳುವ ಪ್ರತಿಯೊಬ್ಬ ಮಾನವನು ಧರ್ಮ ಪರಿಪಾಲಿಸಲೇಬೇಕು. ಆದರ್ಶ ಜೀವನ ಮೌಲ್ಯ ಎತ್ತಿ ಹಿಡಿಯುವ ಜೀವನ ವಿಧಾನವೇ ಧರ್ಮ ಎಂದು ಅವರು ತಿಳಿಸಿದರು.
ಸಂಸ್ಕಾರ ಮತ್ತು ಸದ್ವಿಚಾರಗಳನ್ನು ಉಂಟುಮಾಡುವುದೇ ಧರ್ಮದ ಮೂಲ ಗುರಿಯಾಗಿದ್ದು, ಧರ್ಮದ ದಿಕ್ಸೂಚಿ ಇಲ್ಲದೇ ಹೋದರೆ ಬದುಕಿಗೆ ಅರ್ಥವೇ ಇಲ್ಲ. ಜಗದ್ಗುರು ರೇಣುಕಾಚಾರ್ಯರು ಮಾನವ ಕಲ್ಯಾಣಕ್ಕಾಗಿ ಬೋಧಿಸಿದ ದಶಧರ್ಮದ ಸೂತ್ರಗಳನ್ನು ಪ್ರತಿಯೊಬ್ಬರೂ ಇಂದು ಪಾಲಿಸಬೇಕಾದ ಅಗತ್ಯ ಇದೆ ಎಂದರು.
ಧರ್ಮ ಕಾರ್ಯದಲ್ಲಿ ತೊಡಗಿಸಿಕೊಂಡು ಅನ್ಯರ ಹಿತಕ್ಕಾಗಿ ಪರಿಶ್ರಮಿಸುತ್ತಿರುವ ಜಂಗಮರು ವಾಸ್ತವವಾಗಿ ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ, ಸಂವಿಧಾನದತ್ತವಾಗಿ ಅವರಿಗೆ ಲಭ್ಯವಿರುವ ಸವಲತ್ತುಗಳು ದೊರಕಬೇಕಾಗಿದೆ ಎಂದು ಅವರು ತಿಳಿಸಿದರು.
ರೈತರ ಹಿತ ಕಾಯಲು ಬದ್ಧ: ಸಂಸದ ಜಯಪ್ರಕಾಶ್ ಹೆಗ್ಡೆ ಅವರು ಸಮಾರಂಭ ಉದ್ಘಾಟಿಸಿ, ಗುಟ್ಕಾ ನಿಷೇಧದಿಂದ ಅಡಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದರೆ ಅವರಿಗೆ ಸಹಾಯ ಹಸ್ತ ಚಾಚಲು, ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ಇಂತಹ ಧಾರ್ಮಿಕ ಕಾರ್ಯಗಳಿಂದ ಸಮಾಜದ ಸಂಘಟನೆ ಸಾಧಿಸಿದಂತಾಗುತ್ತದೆ ಎಂದು ಅವರು ತಿಳಿಸಿದರು.
ಶಾಸಕ ಜಿ.ಎಚ್. ಶ್ರೀನಿವಾಸ್ ಮಾತನಾಡಿ, ಬೇಡ ಜಂಗಮರಿಗೆ ಸರ್ಕಾರದಿಂದ ದೊರೆಯುವ ಎಲ್ಲಾ  ರೀತಿಯ ಸೌಲಭ್ಯ ದೊರಕಿಸಿಕೊಡಲು ತಾವು ಪ್ರಯತ್ನಿಸುವುದಾಗಿ ತಿಳಿಸಿದರು. ಶಿವಗಂಗೆ ಮೇಲಣ ಗವಿಮಠದ ಮಲಯ ಶಾಂತಮುನಿ ಶಿವಾಚಾರ್ಯ ಶ್ರೀ ಅವರು ರೇಣುಕಾಚಾರ್ಯರ ಭೋದನೆ ಮತ್ತು ಸಾಧನೆ ಬಗ್ಗೆ ಉಪನ್ಯಾಸ ನೀಡಿದರು.
ಪರಿಚಯ: ಅಖಿಲ ಭಾರತ ಬೇಡಜಂಗಮ ಪ್ರಧಾನ ಕಾರ್ಯದರ್ಶಿ ಜಿ.ಎಸ್. ಹುಣಶೀಕಟ್ಟಿಮಠ ಮಾತನಾಡಿ, ಜಂಗಮರ ಅವಿಭಾಜ್ಯ ಅಂಗವಾದ ಬೇಡ ಜಂಗಮರ ಪರಿಚಯವನ್ನು, ಐತಿಹಾಸಿಕ ವಾಸ್ತವಿಕವನ್ನು ಕಾನೂನಿನ ಘಟನಾಂಶಗಳನ್ನು ತಿಳಿಸಿದರು.
ಬೆಂಗಳೂರು ಕರ್ನಾಟಕ ಬೇಡ ಜಂಗಮ ಸಂಘದ ಪ್ರಧಾನ ಕಾರ್ಯದರ್ಶಿಜಿ.ಎಂ.ವಿಶ್ವನಾಥಸ್ವಾಮಿ ಮಾತನಾಡಿದರು.
 ಹುಣಸಘಟ್ಟ ಗುರುಹಾಲುಸ್ವಾಮಿ ಮಠದ ಗುರುಮೂರ್ತಿ ಶಿವಾಚಾರ್ಯ ಶ್ರೀ ಸಮಾರಂಭದ ನೇತೃತ್ವ ವಹಿಸಿದ್ದರು. ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷರು ರೇಣುಕಾ ಶಿವಾಚಾರ್ಯ ಶ್ರೀ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  
ಗುರುರಕ್ಷೆ: ನೀರಾವರಿ ತಜ್ಞ ಜಿ.ಎಸ್. ಪರಮಶಿವಯ್ಯ ಅವರಿಗೆ ಗುರುರಕ್ಷೆ ನೀಡಲಾಯಿತು. ತಾಲೂಕು ಬೇಡಜಂಗಮರ ಗಣತಿ ಜಂಗಮದರ್ಶನ ಪುಸ್ತಕ ಬಿಡುಗಡೆ ನೆರವರಿಸಲಾಯಿತು. ತಾವರೆಕೆರೆ ಶಿಲಾಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಶ್ರೀ, ಬೀರೂರು ರುದ್ರಮುನಿ ಶಿವಾಚಾರ್ಯ ಶ್ರೀ, ತರೀಕೆರೆ ಕುಂಬಾರಗುಂಡಿ ಮಠದ ಜಗದೀಶ ಶಿವಾಚಾರ್ಯ ಶ್ರೀ, ಗ್ರಾಪಂ ಅಧ್ಯಕ್ಷೆ ಗೌರಮ್ಮ ಜಯ್ಯಣ್ಣ, ತಾಲೂಕು ಬೇಡಜಂಗಮ ಸಮಾಜ ಸಂಘದ ಅಧ್ಯಕ್ಷ ಬಿ.ವಿ. ಯೋಗೀಶ್, ಗೌರವಾಧ್ಯಕ್ಷರು ಮಹೇಶ್ವರ ಮೂರ್ತಿ, ಬಿ.ಪಿ. ಶಿವಮೂರ್ತಿ, ಗ್ರಾಮಸ್ಥರು, ಸಂಘದ ಪದಾದಿಕಾರಿಗಳು, ಸದಸ್ಯರು ಮೊದಲಾದವರು ಭಾಗವಹಿಸಿದ್ದರು.
ಮಹೇಶ್ವರಮೂರ್ತಿ ಸ್ವಾಗತಿಸಿದರು. ಬಿ.ಪಿ. ಶಿವಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.