ಹೊರಗೆ ಮಳೆ- ಚಳಿ: ಒಳಗೆ ನೀರಿನ ಬಿಸಿ ಚರ್ಚೆ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜೂ.13
ಕಳೆದ ಬೇಸಿಗೆಯಲ್ಲಿ ಬಂದ ಕುಡಿಯುವ ನೀರಿನ ಹಾಹಾಕಾರ ಮಳೆಗಾಲ ಆರಂಭವಾದರೂ ಕೊನೆಗೊಂಡಿಲ್ಲ.
ಜಿಪಂ ಸಭಾಂಗಣದಲ್ಲಿ ಗುರುವಾರದಂದು ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಕುಡಿಯುವ ನೀರಿನದ್ದೆ ಚರ್ಚೆ ನಡೆಯಿತು.
ಹೊರಗೆ ಮಳೆ- ಚಳಿ, ಒಳಗೆ ನೀರಿನ ಬಿಸಿ ಬಿಸಿ ಚರ್ಚೆ ನಡೆಯಿತು. ಆದರೆ, ಫಲಿತಾಂಶ ಮಾತ್ರ ಶೂನ್ಯ. ಹಿಂದಿನ ಸಭೆಯಲ್ಲಿ ಪ್ರಸ್ತಾಪವಾಗಿರುವ ವಿಷಯಗಳು ಪುನಃ ಸಭೆಯ ಮುಂದೆ ಬಂದವು.
ಬೆಳಿಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ಸಭೆ, ಸುಮಾರು 50 ನಿಮಿಷಗಳ ಕಾಲ ತಡವಾಗಿ ಪ್ರಾರಂಭವಾಯಿತು. ಆರಂಭದಲ್ಲಿ ಜಿಪಂ ಸದಸ್ಯ ಕಲ್ಮರಡಪ್ಪ ಅವರು ಬರಗಾಲದ ಬಗ್ಗೆ ಚರ್ಚೆ ನಡೆಸಬೇಕು. ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ ಇದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ನಮ್ಮಿಂದ ಸಾಧ್ಯವಾಗಿಲ್ಲ ಎಂದು ಹೇಳುತ್ತಿದ್ದಂತೆ, ಅವರಿಗೆ ಬೆಂಬಲವಾಗಿ ಸವಿತಾ ರಮೇಶ್ ಮಾತನಾಡಿ, ಟಾಸ್ಕ್ಪೋರ್ಸ್ನಲ್ಲಿ ತಹಸೀಲ್ದಾರ್ಗಳು ಇರುವುದರಿಂದ ಅವರನ್ನು ಇಲ್ಲಿಗೆ ಕರೆಸಿ ಎಂದು ಸಲಹೆ ನೀಡಿದರು. ಆದರೆ, ತಕ್ಷಣಕ್ಕೆ ಅವರನ್ನು ಕರೆಸಲು ಸಾಧ್ಯವಿಲ್ಲ ಎಂದು ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಹೇಳಿದಾಗ, ಕುಡಿಯುವ ನೀರಿಗಾಗಿ ಸರ್ಕಾರ ಟಾಕ್ಕ್ ಪೋರ್ಸ್ಗೆ ಹಣ ಬಿಡುಗಡೆ ಮಾಡುತ್ತದೆ.
ಇಲ್ಲಿ ನಾವುಗಳೇ ಚರ್ಚೆ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಸವಿತಾ ರಮೇಶ್ ಹೇಳುತ್ತಿದ್ದಂತೆ, ಸಭೆಗೆ ಜಿಲ್ಲಾಧಿಕಾರಿಗಳು ಆಗಮಿಸಲಿದ್ದಾರೆ ಅವರಿಂದಲೇ ಉತ್ತರ ಪಡೆಯೋಣ ಎಂದು ಅಧ್ಯಕ್ಷರು ಹೇಳಿದರು.
560 ದರ ನಿಗಧಿ: ಜಿಲ್ಲೆಯಲ್ಲಿ 1232 ಬಾವಿಗಳನ್ನು ಕೊರೆಸಲಾಗಿದೆ. ಇವುಗಳಲ್ಲಿ 190 ಬಾವಿಗಳು ವಿಫಲವಾಗಿವೆ. ಅವುಗಳನ್ನು ಇನ್ನಷ್ಟು ಆಳಪಡಿಸಲು ಹಣ ಬಿಡುಗಡೆ ಮಾಡಬೇಕು ಎಂದು ಶೃಂಗೇರಿ ಶಿವಣ್ಣ ಆಗ್ರಹಿಸಿದಾಗ ಕೆಲವೆಡೆ ಬಂಡೆಗಳು ಬಂದಿದ್ದರಿಂದ ನೀರು ಬಂದಿಲ್ಲ.
ಬಾವಿ ತೋಡಲು ಒಂದು ಕ್ಯೂಬಿಕ್ಸ್ ಮೀಟರ್ಗೆ ಸರ್ಕಾರ 560 ದರ ನಿಗಧಿ ಮಾಡಿದೆ. ಆದರೆ, ಅದು ಸಾಕಾಗುತ್ತಿಲ್ಲ ಅದುದರಿಂದ ಮುಂದಿನ ಕ್ರಿಯಾ ಯೋಜನೆಯಲ್ಲಿ ಹೆಚ್ಚುವರಿ ಹಣ ನಿಗದಿಪಡಿಸಿದರೆ ಅನುಕೂಲವಾಗಲಿದೆ ಎಂದು ಜಿಪಂನ ಕಾರ್ಯಪಾಲಕ ಅಭಿಯಂತರರು ತಿಳಿಸಿದರು.
ಟ್ಯಾಂಕರ್ ಮೂಲಕ ನೀರು: ಜಿಲ್ಲೆಯ ಮೂರು ತಾಲೂಕುಗಳಲ್ಲಿ ಬರಗಾಲ ಬಂದಿದ್ದು, ತೀವ್ರ ನೀರಿನ ಅಭಾವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿರುವ ಬಗ್ಗೆ ಸದಸ್ಯರು ಮಾಹಿತಿ ಕೇಳಿದಾಗ
ಕಡೂರು ತಾಲೂಕಿನಲ್ಲಿ 37, ತರೀಕೆರೆ ತಾಲೂಕಿನಲ್ಲಿ 28 ಹಾಗೂ ಚಿಕ್ಕಮಗಳೂರು ತಾಲೂಕಿನಲ್ಲಿ 18 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿದೆ ಎಂದು ಕಾರ್ಯಪಾಲಕ ಅಭಿಯಂತರರು ಮಾಹಿತಿ ನೀಡಿದರು.
ಇದೇ ವೇಳೆಗೆ ಜಿಲ್ಲಾಧಿಕಾರಿ ವಿ. ಯಶವಂತ್ ಅವರು ಸಭೆಗೆ ಆಗಮಿಸಿ, ಬರ ನಿರ್ವಹಣೆಯಲ್ಲಿ ಜಿಲ್ಲೆಯಲ್ತಿ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರ ನೀಡಿದರು.
ಬರ ನಿರ್ವಹಣೆಗೆ 35.43 ಕೋಟಿ: 2012-13ನೇ ಸಾಲಿನಲ್ಲಿ ತರೀಕೆರೆ, ಕಡೂರು, ಚಿಕ್ಕಮಗಳೂರು ಹಾಗೂ ಮೂಡಿಗೆರೆ ತಾಲೂಕಿನ 2 ಹೋಬಳಿಗಳನ್ನು ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ್ದು, ಈವರೆಗೆ ಬರ ನಿರ್ವಹಣೆಗೆ 35.43 ಕೋಟಿ ಬಿಡುಗಡೆಯಾಗಿದ್ದು, ಇದರಲ್ಲಿ 19.67 ಕೋಟಿ ಖರ್ಚು ಮಾಡಲಾಗಿದೆ. ಇನ್ನು 15.75 ಕೋಟಿ ಉಳಿದುಕೊಂಡಿದೆ ಎಂದು ಹೇಳಿದರು.
ಜಿಲ್ಲೆಯ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಪರಿಹಾರ ನೀಡಲು ಸರ್ಕಾರ 17.61 ಕೋಟಿ ಬಿಡುಗಡೆ ಮಾಡಿದ್ದು, ಈ ಸಂಬಂಧ ಫಲಾನುಭವಿಗಳ ಪಟ್ಟಿಯನ್ನು ಸಹ ಸಿದ್ಧಪಡಿಸಲಾಗಿದೆ ಎಂದರು.
ಪ್ರಸ್ತಾವನೆ ಬಂದಿಲ್ಲ: ವಿದ್ಯುತ್ ಸಂಪರ್ಕ ಇಲ್ಲದೆ ಕೆಲವೆಡೆ ಕುಡಿಯುವ ನೀರು ಸರಬರಾಜು ಕಾಮಗಾರಿಗಳು ಅರ್ಧ ನಿಂತಿದ್ದರೆ ಅವುಗಳ ಠೇವಣಿ ಇಡಲು ಒಂದು ಕೋಟಿ ರುಪಾಯಿ ಮೀಸಲಿಡಲಾಗಿದೆ. ಆದರೆ, ಈ ಹಣದ ಬಳಕೆಗಾಗಿ ಜಿಲ್ಲಾ ಪಂಚಾಯ್ತಿಯಿಂದ ಈವರೆಗೆ ಒಂದೂ ಪ್ರಸ್ತಾವನೆ ಬಂದಿಲ್ಲ. ಕುಡಿಯುವ ನೀರು ಸರಬರಾಜಿಗೆ ಹಣದ ಕೊರತೆ ಇಲ್ಲ ಎಂದು ಹೇಳಿದರು.
ತರೀಕೆರೆ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರು ಸಿಗುವುದಿಲ್ಲವೆಂದು ಹಲವು ಮಂದಿ ವಾರಗಟ್ಟಲೆ ನೀರು ಸಂಗ್ರಹ ಮಾಡುತ್ತಿದ್ದಾರೆ. ಅದೇ ನೀರನ್ನು ಕುಡಿಯಲು ಬಳಸುತ್ತಿದ್ದಾರೆ. ಹೀಗೆ ಮಾಡಿದ್ದರಿಂತ ತರೀಕೆರೆ ತಾಲೂಕಿನಲ್ಲಿ ಇಬ್ಬರು ಮಕ್ಕಳು ಡೆಂಘೀ ಜ್ವರದಿಂದ ಮೃತಪಟ್ಟಿದ್ದಾರೆ. ಅಧಿಕಾರಿಗಳು ಗ್ರಾಮಾಂತರ ಪ್ರದೇಶಗಳಿಗೆ ಹೋಗುತ್ತಿಲ್ಲ. ಕಚೇರಿಯಲ್ಲಿಯೇ ಕುಳಿತು ವರದಿ ಸಿದ್ದಪಡಿಸಿ ಕೊಡುತ್ತಿದ್ದಾರೆ ಎಂದು ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದರು.
ಅದಕ್ಕೆ ಉತ್ತರ ನೀಡಿದ ಜಿಲ್ಲಾಧಿಕಾರಿಗಳು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ತಾವು ಕಡೂರು ಮತ್ತು ತರೀಕೆರೆ ತಾಲೂಕುಗಳಲ್ಲಿ 3-4 ಬಾರಿ ಈ ಸಂಬಂಧ ಸಭೆಯನ್ನು ನಡೆಸಿದ್ದೇವೆ. ಆದರೆ, ತಾಲೂಕು ಮಟ್ಟದಲ್ಲಿ ಅಧಿಕಾರಿಗಳ ನಡುವೆ ಪರಸ್ಪರ ಹೊಂದಾಣಿಕೆಯ ಕೊರತೆ ಕಂಡು ಬಂದಿದೆ ಎಂದು ತಿಳಿಸಿದರು.
ಚಿಕ್ಕಮಗಳೂರು ತಾಲೂಕಿನ ಕೆಳಗೂರಿನಲ್ಲಿ 150 ಹಾಗೂ ಸತ್ತಿಹಳ್ಳಿ ಗ್ರಾಮದಲ್ಲಿ 84 ಟ್ಯಾಂಕರ್ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗಿದೆ. ನೀರು ಕೊಟ್ಟವರಿಗೆ ಹಣ ಬಿಡುಗಡೆಯಾಗಿಲ್ಲ ಎಂದು ಸವಿತಾ ರಮೇಶ್ ಹೇಳಿದರು.
ಅನುಮತಿ ಪಡೆಯದೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದ್ದರಿಂದ ಹಣ ಬಿಡುಗಡೆಗೆ ವಿಳಂಬವಾಗುತ್ತಿದೆ ಎಂದು ರೇಖಾ ಹುಲಿಯಪ್ಪಗೌಡ ಹೇಳಿದರು. ಬಾಕಿ ಇರುವ ಬಿಲ್ಗಳನ್ನು ಸಹ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕಡೂರು ಶಾಸಕ ವೈಎಸ್ವಿ ದತ್ತ ಮಾತನಾಡಿ, ಕುಡಿಯುವ ನೀರಿಗೆ ಜಿಲ್ಲೆಯಲ್ಲಿ ಹಣದ ಕೊರತೆ ಇಲ್ಲ. ಅಗತ್ಯವಿರುವ ಕಡೆಗಳಲ್ಲಿ ಬೋರ್ವೆಲ್ ಕೊರೆಸಲು ಜಿಲ್ಲಾಧಿಕಾರಿಗಳು ಅನುಮತಿ ನೀಡಬೇಕು. ಕುಡಿಯುವ ನೀರು ಸಂಪರ್ಕಕ್ಕೆ ಸಿಂಗಲ್ ಫೇಸ್ ಮೋಟಾರ್ ಅಳವಡಿಸಲು ಅವಕಾಶ ನೀಡಬೇಕು. ಹೀಗೆ ಮಾಡುವುದರಿಂದ ಶೇ. 50 ರಷ್ಟು ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಸಲಹೆ ನೀಡಿದರು.
ಅರ್ಧ ದಿನ ಜಿಪಂ ಸಭೆಯಲ್ಲಿ ಕುಡಿವ ನೀರಿನ ಚರ್ಚೆ ನಡೆಯಿತು. ವಿರಾಮದ ನಂತರ ಅಜೆಂಡದ ಮೇಲೆ ಸಭೆ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

