'ಸಾರ್ವಜನಿಕರ ಮೇಲೆ ಕಾಂಗ್ರೆಸ್ ಗದಾಪ್ರಹಾರ'
ಚಿಕ್ಕಮಗಳೂರು: ಬಸ್ ದರ ಏರಿಕೆ ಮಾಡುವುದರ ಮೂಲಕ ರಾಜ್ಯ ಸರ್ಕಾರ ಜನ ಸಾಮಾನ್ಯರ ಮೇಲೆ ಗದಾ ಪ್ರಹಾರ ನಡೆಸಿದೆ ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ, ನಿರಂತರವಾಗಿ ಬೆಲೆ ಏರಿಕೆ ಆಗುತ್ತದೆ. ಪೆಟ್ರೋಲ್ ಬೆಲೆ ಇನ್ನು ನೂರು ಬಾರಿ ಏರಿಸಿದರು ಆಶ್ಚರ್ಯದ ಸಂಗತಿಯಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.
ಖಂಡನೆ: ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಪೆಟ್ರೋಲ್ ಮೇಲೆ ಬಿಜೆಪಿ ಸರ್ಕಾರ ಸೆಸ್ ತೆಗೆದು ಹಾಕುವ ಮೂಲಕ ಪೆಟ್ರೋಲ್ ದರ ಕಡಿಮೆ ಮಾಡಬಹುದೆಂಬ ಸಲಹೆ ನೀಡಿದ್ದರು.
ಇದೀಗ ಅವರೇ ಸಿಎಂ ಆಗಿದ್ದು, ಅವರ ಸಲಹೆಯ ಮಾತನ್ನು ಅವರೇ ಅನುಷ್ಟಾನಕ್ಕೆ ತರಲಿ ಎಂದು ಆಗ್ರಹಿಸಿದ ಅವರು, ಸಾರಿಗೆ ದರ ಏರಿಕೆ ಪರೋಕ್ಷವಾಗಿ ಎಲ್ಲಾ ಬೆಲೆ ಏರಿಕೆಗಳಿಗೂ ಕಾರಣವಾಗುತ್ತದೆ. ಅದ್ದರಿಂದ ಇದನ್ನು ಖಂಡಿಸಲಾಗುವುದು ಎಂದರು.
ಎಪಿಎಲ್ ಪಡಿತರದಾರರಿಗೆ ಅಕ್ಕಿ ನಿರಾಕರಣೆ ಮಾಡಿರುವುದು ಸರಿಯಲ್ಲ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅಕ್ಕಿ ಸಂತೆ ಮಾಡಿ ಎಪಿಎಲ್ ಕಾರ್ಡ್ದಾರರಿಗೆ 10 ಕೆಜಿ ಅಕ್ಕಿ ವಿತರಣೆಯ ಯೋಜನೆ ಜಾರಿಗೆ ತರಲಾಗಿತ್ತು.
ಈಗ ಏಕಾಏಕಿ ಅಕ್ಕಿ ನಿರಾಕರಣೆ ಮಾಡಿರುವುದು ಅಕ್ಕಿ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಇದನ್ನು ಸರ್ಕಾರ ಪರಾಮರ್ಶಿಸಬೇಕು. ಸಾಮಾನ್ಯ ಜನರಿಗೆ ಅನುಕೂಲವಾಗುವ ಅಕ್ಕಿ ಸಂತೆ ಮುಂದುವರೆಸಬೇಕು ಎಂದು ಆಗ್ರಹಿಸಿದರು.
ಮೋದಿ ಅಭಿವೃದ್ಧಿಯ ಮಾಡೆಲ್: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬಿಜೆಪಿಯ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕಗೊಂಡ ಬಳಿಕ ಉದ್ಭವಿಸಿರುವ ಗೊಂದಲದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಮೋದಿ ಅಭಿವೃದ್ಧಿಯ ಮಾಡೆಲ್. ದೇಶಕ್ಕೆ ಈ ಮಾದರಿ ಅಗತ್ಯವಿದೆ. ಅವರು ಪ್ರಧಾನಮಂತ್ರಿಯಾಗಬೇಕೆಂಬ ಅಪೇಕ್ಷೆ ಜನರಲ್ಲಿದೆ. ಇಂದಿರಾಗಾಂಧಿ ಮತ್ತು ವಾಜಪೇಯಿ ಅವರು ಪ್ರಧಾನಿ ಆಗುವ ಮುನ್ನ ಈ ರೀತಿಯ ಪರ, ವಿರೋಧ ಚರ್ಚೆ ನಡೆದಿತ್ತು. ಈಗಲೂ ಮೋದಿ ಬಗ್ಗೆ ಚರ್ಚೆ ನಡೆಯುತ್ತಿದೆ. ಬಹುತೇಕ ಜನರು ಮೋದಿ ಪ್ರಧಾನಿಯಾಗಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಪ್ರಧಾನಿಯಾಗುವುದು ಖಚಿತ ಎಂದರು.
ಚಿಕ್ಕಮಗಳೂರು ನಗರಸಭೆ ಆಯುಕ್ತ ಪ್ರಭಾಕರ್ ಅವರನ್ನು ಸಮಾಜ ಕಲ್ಯಾಣ ಮಾತೃ ಇಲಾಖೆಗೆ ಕಳುಹಿಸುವ ಪ್ರಯತ್ನ ನಡೆಯುತ್ತಿದೆ.
ಈ ಪ್ರಯತ್ನವನ್ನು ಹಿಂತೆಗೆದುಕೊಳ್ಳಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಜಿಲ್ಲಾ ಮಟ್ಟದಲ್ಲಿ ವರ್ಗಾವಣೆ ಮಾಡಿಸುವ ದಲ್ಲಾಳಿಗಳು ಹುಟ್ಟುಕೊಂಡಿದ್ದಾರೆ. ಹುದ್ದೆಯ ಆಧಾರದ ಮೇಲೆ ದರ ನಿಗದಿ ಮಾಡುವ ಮೂಲಕ ವ್ಯಾಪಾರೀಕರಣ ದಂಧೆಗೆ ಇಳಿದಿದ್ದಾರೆ ಎಂದು ಆರೋಪಿಸಿದರು.
ಪ್ರಭಾಕರ್ ಒಬ್ಬ ದಕ್ಷ ಅಧಿಕಾರಿ. ಅವರ ಕಾಲದಲ್ಲಿ ನಗರದಲ್ಲಿ ಸ್ವಚ್ಛ, ಕುಡಿಯುವ ನೀರು ಪೂರೈಸಲು ಕಾಳಜಿ ಹೊಂದಿದ್ದು, ಅಂತಹ ಅಧಿಕಾರಿಯನ್ನು ವರ್ಗಾವಣೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

