ಅಪಾಯಕ್ಕೆ ಆಹ್ವಾನ ನೀಡುತ್ತಿರುವ ರಾ.ಹೆ.
ಕ.ಪ್ರ.ವಾರ್ತೆ ಶೃಂಗೇರಿ ಜೂ.17
ಇದು ಶೃಂಗೇರಿ ಕೆರೆಕಟ್ಟೆ ರಾ.ಹೆ. 13ರ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯೊಳಗಿನ ಮಾರ್ಗ, ಹಾಗೂ ಶೃಂಗೇರಿ ಕೊಪ್ಪ ನಡುವಿನ ಮಾರ್ಗದುದ್ದಕ್ಕೂ ಇರುವ ಅಪಾಯಕಾರಿ ಸೇತುವೆಗಳ ಕತೆ ವ್ಯಥೆ.
ಕಿರಿದಾದ ರಸ್ತೆಗಳು, ಕಿರು ಸೇತುವೆಗಳಿದ್ದರೂ ಶಿಥಿಲಾವಸ್ಥೆಯಲ್ಲಿದೆ. ಬಹುತೇಕ ರಸ್ತೆ ತಂಗಾ ನದಿಯ ದಡದಲ್ಲಿಯೇ ಹಾದು ಹೋಗಿರುವುದರಿಂದ ಕೆಲವೆಡೆ ಅಪಾಯಕಾರಿ ತಿರುವು, ವಲಯಗಳು ಇದ್ದು, ಯಾವುದೇ ತಡೆಗೋಡೆಯಿಲ್ಲದ ಕಾರಣ ವಾಹನಗಳು ನಿಯಂತ್ರಣ ತಪ್ಪಿ ಹೊಂಡಕ್ಕೆ, ನದಿಗುರುಳುತ್ತಿವೆ. ಆದರೂ ಹೆದ್ದಾರಿ ಇಲಾಖೆ ಇನ್ನೂ ಎಚ್ಚೆತ್ತುಕೊಂಡಿಲ್ಲ.
ಶೃಂಗೇರಿಯಿಂದ ಸುಮಾರು 29 ಕಿ.ಮೀ.ವರೆಗಿನ ಎಸ್.ಕೆ. ಬಾರ್ಡರ್ ವರೆಗಿನ ರಸ್ತೆ ತೀರ ಕಿರಿದಾಗಿದ್ದು,ಅಪಾಯಕಾರಿ ತಿರುವುಗಳಿಂದ ಕೂಡಿದೆ. ಇದು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯೊಳಗಿರುವ ಕಾರಣ ರಸ್ತೆ ಅಗಲೀಕರಣವಾಗಲಿಲ್ಲ.
ಮಾರ್ಗದ ಬದಿಯಲ್ಲಿ ಆಳ ಹೊಂಡಗಳಿವೆ ಏಕಕಾಲದಲ್ಲಿ 2 ವಾಹನಗಳು ಎದುರುಬದುರಾದರೆ ಸ್ವಲ್ಪ ಎಡವಿದರೆ ಹೊಂಡಕ್ಕುರುಳದಿರದು.
ಸಂಚಾರ ಬಂದ್ ಸಾಧ್ಯತೆ: ಈ ಭಾಗದಲ್ಲಿ ಮಳೆಗಾಲದಲ್ಲಿ ಧಾರಾಕಾರ ಮಳೆ ಗಾಳಿ ಬೀಸುವುದರಿಂದ ಬೃಹತ್ ಮರಗಳು ರಸ್ತೆಗುರುಳುತ್ತವೆ. ಪರಿಣಾಮ ರಸ್ತೆ ಸಂಚಾರ ಬಂದ್ ಆಗುತ್ತದೆ. ಮಳೆಗಾಲದಲ್ಲಿ ದಿನನಿತ್ಯ ಈ ಮಾರ್ಗದಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತಗೊಳ್ಳುವುದು ಸರ್ವೇಸಾಮನ್ಯ.
ಇನ್ನು ಶೃಂಗೇರಿಯಿಂದ ಕೆರೆಕಟ್ಟೆವರೆಗಿನ ಮಾರ್ಗ ತುಂಗಾ ನದಿಯ ದಡದಲ್ಲಿಯೇ ಹಾದುಹೋಗುತ್ತದೆ.ಅಪಾಯಕಾರಿ ವಲಯಗಳಲ್ಲಿ ಹೆದ್ದಾರಿ ಇಲಾಖೆ ತಡೆಗೋಡೆಗಳನ್ನು ನಿರ್ಮಿಸದ ಕಾರಣ ವಾಹನಗಳು ನಿಯಂತ್ರಣ ತಪ್ಪಿ ಹೊಂಡಕ್ಕುರುಳುತ್ತವೆ.
ಎಚ್ಚರ ತಪ್ಪಿದರೆ ಸಾವು: ತನಿಕೋಡು, ಉಂಬಳಕೆರೆ ಸೇರಿದಂತೆ ಬಹುತೇಕ ಕಡೆಗಳಲ್ಲಿ ಸಾಕಷ್ಟು ವಾಹನಗಳು ನಿಯಂತ್ರಣ ತಪ್ಪಿ ತುಂಗಾ ನದಿಗುರುಳಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರೆ, ಇನ್ನು ಕೆಲವರು ಬಲಿಯಾಗಿದ್ದಾರೆ. ಮಳೆಗಾಲದಲ್ಲಿ ತುಂಗಾನದಿಯಲ್ಲಿ ಪ್ರವಾಹ ಉಕ್ಕಿ ಹರಿಯುವುದರಿಂದ ಈ ಮಾರ್ಗದಲ್ಲಿ ರಸ್ತೆ ಯಾವುದು, ನದಿ ಯಾವುದು ತಿಳಿಯುವುದು ಕಷ್ಟು. ಸ್ವಲ್ಪ ಎಡವಿದರೆ ತುಂಗಾ ನದಿಯಲ್ಲಿ ಚಿರನಿದ್ರೆ ಖಚಿತ.
ಆದರೂ ಹೆದ್ದಾರಿ ಇಲಾಖೆ ಇತ್ತ ಗಮನ ಹರಿಸಿಲ್ಲ.ಇನ್ನು ಎಚ್ಚೆತ್ತುಗೊಂಡಿಲ್ಲ. ರಸ್ತೆಯ ಎರಡೂ ಕಡೆಗಳಲ್ಲಿ ಹೊಂಡಗಳಿದ್ದು, ವಾಹನ ಬದಿಯಲ್ಲಿ ಚಲಿಸುವುದು ಅಪಾಯವಾಗಿದೆ. ಇನ್ನು ಅಪಾಯಕಾರಿ ತಿರುವುಗಳಲ್ಲಿ ಎಚ್ಚರಿಕೆ ನಾಮಪಲಕಗಳಿಲ್ಲ. ಸದಾ ಅಪಘಾತಗಳು ಸಂಭವಿಸುತ್ತಿದ್ದರೂ, ಮಳೆಗಾಲದಲ್ಲಿ ಸರಣಿ ಅಪಘಾತಗಳ ವಲಯವಾಗಿದೆ.
ಅಪಾಯಕಾರಿ ಕಿರು ಸೇತುವೆ: ಶೃಂಗೇರಿ ಕೊಪ್ಪವರೆಗಿನ ರಸ್ತೆಯಲ್ಲಿ ಆನೆಗುಂದ, ಕಾವಡಿ, ತೊರೆಹಡ್ಲು, ಅಡ್ಡಗದ್ದೆ, ಹೊಸಕೊಪ್ಪ ಬಳಿ ಕಿರುಸೇತುವೆಗಳಿದ್ದು, ಅವುಗಳು ತೀರ ಕಿರಿದಾಗಿದೆ. ಅಲ್ಲದೆ ಕಿತ್ತೆದ್ದು ಹೋಗಿ ದಶಕಗಳೇ ಕಳೆದಿವೆ. ಆನೆಗುಂದ ಬಳಿಯಂತೂ ಆಗಾಗ ಅಪಘಾತ ಸಂಭವಿಸುತ್ತಲೇ ಇರುತ್ತದೆ.
ಈ ಕಿರು ಸೇತುವೆಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಸೇತುವೆಯ ಎರಡೂ ಬದಿಗಳಲ್ಲಿನ ಕಟ್ಟಡ ಕುಸಿದಿದೆ. ವಾಹನಗಳು ಅಪ್ಪಳಿಸಿ ಕಟ್ಟಡದಲ್ಲಿನ ಕಲ್ಲುಗಳು ಕಳಚಿ ಹಳ್ಳಕ್ಕೆ ಉರುಳುತ್ತಿದ್ದರೂ ಇಲಾಖೆ ಎಚ್ಚೆತ್ತುಕೊಂಡಿಲ್ಲ.
ಶೃಂಗೇರಿ ಎಸ್.ಕೆ. ಬಾರ್ಡರ್ ಮಾರ್ಗದಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಧರ್ಮಸ್ಥಳ, ಉಡುಪಿ, ಮಂಗಳೂರು, ಹೊರನಾಡು ಸಂಪರ್ಕ ಕಲ್ಪಿಸುವುದರಿಂದ ಪ್ರವಾಸಿಗರು ಈ ಮಾರ್ಗದಲ್ಲಿಯೇ ಸಂಚರಿಸುತ್ತಾರೆ.
ಹೆದ್ದಾರಿ ಇಲಾಖೆ ಇನ್ನಾದರೂ ಎಚ್ಚೆತ್ತುಕೊಂಡು ಅಪಾಯಕಾರಿವಲಯಗಳಲ್ಲಿ ತಡೆಗೋಡೆ, ತಡೆಬೇಲಿಗಳ ನಿರ್ಮಾಣ, ಅಪಾಯಕಾರಿ ತಿರುವುಗಳಲ್ಲಿ ಸರಿಯಾದ ನಾಮಪಲಕ ಅಳವಡಿಕೆ, ಶಿಥಿವಾವಸ್ಥ್ಥೆಯಲ್ಲಿರುವ ಕಿರುಸೇತುವೆಗಳ ಪುನರ್ ನಿರ್ಮಾಣ ಅಥವಾ ದುರಸ್ತಿ, ದಿನನಿತ್ಯ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸುವುದರ ಜೊತೆಗೆ ಅಪಘಾತಗಳನ್ನೂ ತಪ್ಪಿಸಲಿ ಎಂಬುದು ಸಾರ್ವಜನಿಕರ ಆಶಯ.
ಅಪಘಾತ: ಐವರಿಗೆ ಗಾಯ
ಶೃಂಗೇರಿ: ಶಿವಮೊಗ್ಗ ಮಂಗಳೂರು ರಾಷ್ಟ್ರೀಯ ಹೆದ್ದಾರಿ 13 ರ ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೆರೆಕಟ್ಟೆ ಬಳಿ ಬೊಲೇರೋ ಹಾಗೂ ಮಾಂಜಾ ಕಾರುಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಐವರು ಗಾಯಗೊಂಡ ಘಟನೆ ಸೋಮವಾರ ಸಂಜೆ ನಡೆದಿದೆ.
ಮಂಗಳೂರು ಕಡೆಯಿಂದ ಶೃಂಗೇರಿ ಕಡೆಗೆ ಬರುತ್ತಿದ್ದ ಮಾಂಜಾ ವಾಹನ ಶೃಂಗೇರಿ ಕಡೆಯಿಂದ ಕೆರೆಕಟ್ಟೆಯತ್ತ ಹೋಗುತ್ತಿದ್ದ ಬೊಲೆರೋ ನಡುವೆ ಮಾತೋಳ್ಳಿ ಕ್ರಾಸ್ ಬಳಿ ಡಿಕ್ಕಿ ಸಂಭವಿಸಿದೆ.
ಮಾಂಜಾ ವಾಹನದಲ್ಲಿದ್ದ ಚೆನ್ನಗಿರಿ ತಾಲೂಕಿನ ಪಾಂಡವಮಕ್ಕಿಯವರಾದ ಮೋಹನ್ (45), ಹರ್ಷ (27) ಹಾಗೂ ಬಲೆರೋದಲ್ಲಿದ್ದ ಕೆರೆಕಟ್ಟೆ ಎಲ್ಸಾರ್ನ ಉಮೇಶ (25), ಗಿರೀಶ (50), ಹಾಲ್ಮಕ್ಕಿಯ ಲೋಕಮ್ಮ (69), ಅರುಣ್ ಕುಮಾರ್ ಗಾಯಗೊಂಡಿದ್ದಾರೆ. ಗಾಯಳುಗಳನ್ನು ಶೃಂಗೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
-ನೆಮ್ಮಾರ್ ಅಬೂಬಕರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

