ಚಿಕ್ಕಮಗಳೂರು

ಭದ್ರಾ ಮೇಲ್ದಂಡೆ ಕಾಮಗಾರಿ ಅಡ್ಡಿಗೆ ನಿರ್ಧಾರ

Published On :

ಕ.ಪ್ರ.ವಾರ್ತೆ ,  ತರೀಕೆರೆ ,   ಜೂ.22
ನೀರಾವರಿ ಸಚಿವರು, ಸಂಸತ್ ಸದಸ್ಯರು, ಶಾಸಕರು ಬೆಂಗಳೂರಿನಲ್ಲಿ ನೆಡೆಸಿದ ಸಭಾ ನಡವಳಿಗಳನ್ನು ಸೋಮವಾರ ಸಂಜೆಯೊಳಗಾಗಿ ನೀಡದಿದ್ದರೆ ತಾಲೂಕಿನ ಅಜ್ಜಂಪುರದಲ್ಲಿ ಸರ್ಕಾರ ನೆಡೆಸುತ್ತಿರುವ ಭದ್ರಾ ಮೇಲ್ದಂಡೆ ಕಾಮಗಾರಿ ಕಾರ್ಯವನ್ನು ಸಂಪೂರ್ಣವಾಗಿ ತಡೆಯಲು ರೈತರು ನಿರ್ಧರಿಸಿದ್ದಾರೆ ಎಂದು ರಾಜ್ಯ ರೈತರ ಸಂಘ ಮತ್ತು ಹಸಿರು ಸೇನೆ ತರೀಕೆರೆ ತಾಲೂಕು ಶಾಖೆ ಪ್ರಧಾನ ಕಾರ್ಯದರ್ಶಿ ಸುರೇಶ್ ತಿಳಿಸಿದ್ದಾರೆ.
ಶನಿವಾರ  ಸಮೀಪದ ಅಜ್ಜಂಪುರದಲ್ಲಿ ಭದ್ರಾ ಮೇಲ್ದಂಡೆ ಕಾಮಗಾರಿ ಯೋಜನೆ ಅಧಿಕಾರಿಗಳು, ಯೋಜನೆಯ 3ನೇ ಹಂತದ ಕಾಮಗಾರಿ ಕೆಲಸವನ್ನು ಪ್ರಾರಂಭಿಸುವ ಸಂದರ್ಭದಲ್ಲಿ ನೂರಾರು ರೈತರು ಕಾಮಗಾರಿ ಸ್ಥಳಕ್ಕೆ ಆಗಮಿಸಿ, ಬೆಂಗಳೂರಿನಲ್ಲಿ ಜೂ. 17 ರಂದು ನೀರಾವರಿ ಸಚಿವರ ಗೃಹ ಕಚೇರಿಯಲ್ಲಿ ನೆಡದ ಸಭೆಯ ನಡವಳಿಗಳನ್ನು ರೈತರಿಗೆ ಕೊಡದೆ ಕಾಮಗಾರಿ ಕಾರ್ಯವನ್ನು ಮಾಡಲು ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದರು ಎಂದು ಅವರು ತಿಳಿಸಿದ್ದಾರೆ.
ರೈತರಿಗೆ ಮೋಸ: ಬೆಂಗಳೂರಿನಲ್ಲಿ ನೀರಾವರಿ ಸಚಿವರ ಸಮ್ಮುಖದಲ್ಲಿ ನೆಡದ ಸಭೆಯ ನಡವಳಿಗಳನ್ನು ರೈತರಿಗೆ ತಿಳಿಸದೆ ಮೋಸ ಮಾಡಲಾಗಿದೆ ಎಂದು ಅವರು ಆರೋಪಿಸಿದಾಗ, ಸ್ಥಳದಲ್ಲಿದ್ದ ಕಾಮಗಾರಿಯ ಇಲಾಖೆ ಕಾರ್ಯಪಾಲಕ ಅಭಿಯಂತರ ಮೋಹನ್ ಅವರು ನಾಲ್ಕಾರು ದಿನಗಳು ಕಳೆದ ನಂತರ ಬೆಂಗಳೂರಿನ ಸಭಾ
ನಡವಳಿಗಳನ್ನು ತರಿಸಿಕೊಡುವುದಾಗಿ ಹೇಳಿದ್ದನ್ನು ರೈತರು ಒಪ್ಪದೇ ಸಭಾ ನಡವಳಿಗಳನ್ನು ರೈತರಿಗೆ ಕೊಡುವ ನಿರ್ಧಿಷ್ಟ ದಿನಾಂಕವವನ್ನು ಹೇಳಿ ಎಂದು ರೈತರು ಆಗ್ರಹಿಸಿ ಕಾಮಗಾರಿ ಸ್ಥಳದಲ್ಲಿ ಪಟ್ಟು ಹಿಡಿದು ಕುಳಿತರು.
ನಾಳೆವರೆಗೆ ಗಡುವು: ಜೂನ್ 24 ಸೋಮವಾರ ಸಂಜೆಯೊಳಗಾಗಿ ಬೆಂಗಳೂರಿನಲ್ಲಿ ನೀರಾವರಿ ಸಚಿವರು, ಸಂಸತ್ ಸದಸ್ಯರು  ಮತ್ತು ಶಾಸಕರನೊಳಗೊಂಡೆಂತೆ ನೆಡೆದ ಸಭೆಯ ಸಂಪೂರ್ಣ ನಡವಳಿಗಳನ್ನು ರೈತರಿಗೆ ಕೊಡದಿದ್ದರೆ, ಮಂಗಳವಾರದಿಂದ ತಾಲೂಕಿನ ಎಲ್ಲ ಹಳ್ಳಿಗಳಿಂದ ಆಗಮಿಸುವ ನೂರಾರು ರೈತರು ಭದ್ರಾ ಮೇಲ್ದಂಡೆ ಕಾಮಗಾರಿ ಕಾರ್ಯಕ್ಕೆ ತಡೆ ಒಡ್ಡುವುದು ಖಂಡಿತ ಎಂದು ಪ್ರಧಾನ ಕಾರ್ಯದರ್ಶಿ ಸುರೇಶ್ ತಿಳಿಸಿದ್ದಾರೆ.
ಸಭಾ ನಡಾವಳಿ ನೀಡುವುದರ ಜೊತೆಗೆ ತರೀಕೆರೆ ತಾಲೂಕಿಗೆ ಸಮಗ್ರವಾದ ಪ್ರತ್ಯೇಕವಾದ ನೀರಾವರಿ ಕಾಮಗಾರಿಯ ಸರ್ವೆ ಕಾರ್ಯವನ್ನು ತಕ್ಷಣವೇ ಮಾಡಿ ಮುಗಿಸಿ, ಸಂಬಂದಿಸಿದ ಯೋಜನೆಗೆ ಸಚಿವ ಸಂಪುಟದ ಅನುಮೋದನೆ ಪಡೆದು ಕೂಡಲೇ ಗೆಜೆಟ್ ಪ್ರಕಟಣೆಯನ್ನು ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ತರೀಕೆರೆ ಉಪ ವಿಭಾಗಾಧಿಕಾರಿ ಜಿ.ಅನುರಾಥ, ತಹಶೀಲ್ದಾರ್ ರಂಜಿತ,  ನೀರಾವರಿ ಯೋಜನೆಯ ಕಾರ್ಯಪಾಲಕ ಅಭಿಯಂತರ ಮೋಹನ್ ಮತ್ತಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಯೋಜನೆ ಕಾಮಗಾರಿ ಸ್ಥಳದಲ್ಲಿ ಹಾಜರಿದ್ದರು.
ಅಜ್ಜಂಪುರದಲ್ಲಿ ಕಾಮಗಾರಿ ಸ್ಥಳದಲ್ಲಿ ನೆಡದ ರೈತರ ಸಭೆಯಲ್ಲಿ ನೀರಾವರಿ ತಜ್ಞ ರಾಜ್‌ಕುಮಾರ್, ರೈತ ಮುಖಂಡರಾದ  ವೀರಭದ್ರಪ್ಪ, ನವೀನ್, ಪುಟ್ಟಸ್ವಾಮಿ, ರುದ್ರಪ್ಪ, ಬುಕ್ಕಾಂಬುದಿ
ರಾಜ್‌ಕುಮಾರ್, ಕಾಡಪ್ಪ, ಮಹೇಂದ್ರ, ಮಹೇಶ್ ಅಜ್ಜಂಪುರ, ಕಲ್ಲಶೆಟ್ಟಿಹಳ್ಳಿ, ಸೊಕ್ಕೆ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.       

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.