ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಸಿದ್ಧರಾಗಿ
ಕ.ಪ್ರ.ವಾರ್ತೆ , ಚಿಕ್ಕಮಗಳೂರು , ಜೂ.23
ಗ್ರಾಮೀಣ ನೌಕರರೆ ಅಂಚೆ ಇಲಾಖೆಗೆ ತಳಪಾಯ. ಇವರಿಗೆ ಸೇವಾ ಷರತ್ತು ಮತ್ತು ಸಾರಿಗೆ ಭತ್ಯೆ ನೀಡಬೇಕೆಂಬ ದೀರ್ಘಕಾಲದ ಬೇಡಿಕೆಗಾಗಿ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಸಿದ್ಧರಾಗಬೇಕೆಂದು ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಮಹಾದೇವಯ್ಯ ಕರೆ ನೀಡಿದ್ದಾರೆ.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಚಿಕ್ಕಮಗಳೂರು ವಿಭಾಗೀಯ 24ನೇ ದ್ವೈವಾರ್ಷಿಕ ಅಧಿವೇಶನದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು. ಅಂಚೆ ಇಲಾಖೆಗೆ 150 ವರ್ಷಗಳ ಇತಿಹಾಸವಿದೆ. ಗ್ರಾಮೀಣ ಸೇವೆಯಲ್ಲಿ ತೊಡಗಿರುವ ನೌಕರರ ಕಡೆಗಣನೆ ಸರಿಯಲ್ಲ ಎಂದು ದೂರಿದರು.
ಕೇವಲ 450 ಮಾತ್ರ: 4ನೇ ವೇತನ ಆಯೋಗದವರೆಗೂ ಕೇವಲ 450 ಮಾತ್ರ ಪಡೆಯಲಾಗುತ್ತಿತ್ತು. ಇದನ್ನೂ ಸಂಬಳವೆಂದು ಪರಿಗಣಿಸುತ್ತಿಲ್ಲ. ರಜೆ ನೀಡಲಾಗುತ್ತಿದ್ದರೂ ರಜೆಯೆಂದು ಪರಿಗಣಿಸುತ್ತಿಲ್ಲ. ಈ ಸಮೂಹವನ್ನು ಎಕ್ಸಟ್ರಾ ಡಿಪಾರ್ಟ್ಮೆಂಟ್ ಎಂಪ್ಲಾಯಿಸ್ ಎಂದು ಪರಿಗಣಿಸಲಾಗುತ್ತಿದೆ. ಇ.ಡಿ. ಇಲ್ಲದಿದ್ದರೆ ಅಂಚೆ ಇಲಾಖೆ ಸುಲಭವಾಗಿ ಖಾಸಗೀಕರಣಕ್ಕೆ ತುತ್ತಾಗುತ್ತಿತ್ತು. ಟೆಲಿಗ್ರಾಂಅನ್ನು ಅಂಚೆ ಇಲಾಖೆಯಿಂದ ಬೇರ್ಪಡಿಸಿದ ನಂತರ ಆ ಸೇವೆಯೇ ಇಂದು ರದ್ದಾಗಿದೆ ಎಂದು ಉದಾಹರಿಸಿದರು.
ವಿಳಂಬನೀತಿ: ವಾಸ್ತವವಾಗಿ ಇಲಾಖೆಗೆ ಈ ವರ್ಗವೇ ಭದ್ರಬುನಾದಿ. 8 ಗಂಟೆ ಸೇವಾವಧಿ, ವೈಜ್ಞಾನಿಕವಾಗಿ ಸಮಯ ನಿಗದಿ ಸೇರಿದಂತೆ ನ್ಯಾಯಯುತ ಬೇಡಿಕೆಗಳನ್ನು ಯಾರೂ ಈವರೆಗೂ ತಿರಸ್ಕರಿಸಿಲ್ಲ, ಆದರೆ ಪುರಸ್ಕರಿಸೂ ಇಲ್ಲ. ನಮ್ಮ ಬೇಡಿಕೆಗಳ ಬಗ್ಗೆ ಅಧಿಕಾರಶಾಹಿ ವಿಳಂಬನೀತಿ ಪ್ರಜ್ಞಾಪೂರ್ವಕವಾಗಿ ಅನುಸರಿಸುತ್ತಿದೆ ಎಂದು ಕಿಡಿಕಾರಿದ ಮಹಾದೇವಯ್ಯ, ಸಂಘಟನೆ- ಮುಷ್ಕರದಿಂದ ಬೇಡಿಕೆಗಳನ್ನು ಸ್ವಲ್ಪಮಟ್ಟಿಗೆ ಈಡೇರಿಸಿಕೊಳ್ಳಲಾಗಿದೆ. ಬೇರೆ ಹೆಸರಿನಲ್ಲಿ ಪೆನ್ಷನ್ಯ್ಸ್ಕೀಂ ಬರುತ್ತಿದೆ. ಉಳಿದ ನ್ಯಾಯಯುತ ಬೇಡಿಕೆಗಳಿಗಾಗಿ ಮುಂದಿನ ದಿನಗಳಲ್ಲಿ ಪ್ರಬಲ ಹೋರಾಟಕ್ಕೆ ಸಜ್ಜಾಗಬೇಕೆಂದರು.
ನಿರಂತರವಾಗಿ ಹೋರಾಟ ಅಗತ್ಯ: ಅಧಿವೇಶನ ಉದ್ಘಾಟಿಸಿದ ಕೆಪಿಸಿಸಿ ಕಿಸಾನ್ ಮಿಲ್ ಉಪಾಧ್ಯಕ್ಷ ಸಚಿನ್ ಮೀಗಾ ಮಾತನಾಡಿ, ಗ್ರಾಮೀಣ ಅಂಚೆ ನೌಕರರು ಒಗ್ಗಟ್ಟನ್ನು ಕಾಪಾಡಿಕೊಂಡು ನಿರಂತರವಾಗಿ ಹೋರಾಟ ನಡೆಸಬೇಕು. ಕೇಂದ್ರ ಸಚಿವರು ಸಹನುಭೂತಿ ವ್ಯಕ್ತಪಡಿಸುತ್ತಿದ್ದರೂ ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇದರಿಂದಾಗಿ ಬೇಡಿಕೆಯಲ್ಲಿ ಶೇ.2ರಷ್ಟು ಮಾತ್ರ ಫಲಕೊಟ್ಟಿದೆ. ದೀರ್ಘಕಾಲದ ಹೋರಾಟವೂ ಅಗತ್ಯ ಎಂದರು.
ಬೆಂಗಳೂರು ವಲಯ ಕಾರ್ಯದರ್ಶಿ ಕೆ.ಸಿ. ಅಣ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ತಳಸ್ಪರ್ಶಿ ನೌಕರರ ಅನುಭವ ಪಡೆದ ಯೋಜನೆಗಳು ಮಾತ್ರ ಇಲಾಖೆಯಲ್ಲಿ ಯಶಸ್ವಿಯಾಗಲು ಸಾಧ್ಯ. ದೊಡ್ಡ ಹುದ್ದೆಗಳನ್ನು ಹೆಚ್ಚಿಸಿ ಅವರ ವೇತನ ಪರಿಷ್ಕರಿಸುತ್ತಿದ್ದು, ಗ್ರಾಮೀಣ ನೌಕರರ ಬಗ್ಗೆ ಇಲಾಖೆ ಕಾಳಜಿವಹಿಸುತ್ತಿಲ್ಲ ಎಂದು ದೂರಿದರು.
ಗ್ರಾಮೀಣ ಅಂಚೆ ನೌಕರರಿಗೆ ಬಿ.ಪಿ.ಎಲ್. ಕಾರ್ಡ್ ನೀಡಬೇಕೆಂದು ಚಿಕ್ಕಮಗಳೂರು ಜಿಲ್ಲಾ ಶಾಖೆ ಪ್ರಯತ್ನಿಸಿದ್ದು, ಈಡೇರುವ ಹಂತದಲ್ಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಚಿಕ್ಕಮಗಳೂರು ವಿಭಾಗೀಯ ಅಧ್ಯಕ್ಷ ಬಿ.ಪಿ. ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ವಲಯ ಕಾರ್ಯದರ್ಶಿ ಪಿ. ಮಲ್ಲಿಕಾರ್ಜುನ, ಸಹ ಕಾರ್ಯದರ್ಶಿ ಶಿವಕುಮಾರ್, ಶಿವಮೊಗ್ಗ ವಲಯಾಧ್ಯಕ್ಷ ಪ್ರಹ್ಲಾದರಾವ್, ಉಡುಪಿ ವಲಯ ಕಾರ್ಯಾಧ್ಯಕ್ಷ ವಿಜಯನಾರಿ, ಹಾಸನ ವಿಭಾಗ ಕಾರ್ಯದರ್ಶಿ ಶಿವಾಜಿ, ತುಮಕೂರು ವಲಯಾಧ್ಯಕ್ಷ ಲಕ್ಷ್ಮೀನಾರಾಯಣ, ಸ್ಥಳೀಯ ಮುಖಂಡರಾದ ಜೋಸೆಫ್, ಸಿ.ಎಂ. ಶ್ರೀನಿವಾಸ, ಜೆ.ಬಿ. ಪುಟ್ಟ ಸ್ವಾಮಿ, ಎನ್. ತಿಪ್ಪೇಸ್ವಾಮಿ, ಆರ್. ಮಂಜುನಾಥ್ ವೇದಿಕೆಯಲ್ಲಿದ್ದರು. ವಲಯ ಕಾರ್ಯದರ್ಶಿ ಜೋಸೆಫ್ ಬುಟ್ಟೋ ಸ್ವಾಗತಿಸಿ, ವರದಿ ಮಂಡಿಸಿದರು. ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

