ಚಿಕ್ಕಮಗಳೂರು

ಪ್ರವಾಸ ಕಥನದಿಂದ ಮಾರ್ಗದರ್ಶನ: ಮಂಜುನಾಥ್

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜೂ.26
ವಿದೇಶಗಳಿಗೆ ಪ್ರವಾಸ ಹೋಗುವವರ ಸಂಖ್ಯೆ ಇತ್ತೀಚೆಗೆ ಗಣನೀಯವಾಗಿ ಹೆಚ್ಚಿದೆ. ವ್ಯಾಸಂಗ, ವೃತ್ತಿ, ವ್ಯವಹಾರ, ಸರ್ಕಾರದ ಯೋಜನೆ ಹೀಗೆ ವಿವಿಧ ಕಾರಣಗಳಿಂದ ವಿದೇಶಗಳಿಗೆ ಪ್ರವಾಸ ಮಾಡುವವರೆಲ್ಲ ತಮ್ಮ ಅನುಭವಗಳನ್ನು ದಾಖಲಿಸುವುದಿಲ್ಲ. ಅದೊಂದು ಉದ್ಯಮವಾಗಿ ಮಾರ್ಪಟ್ಟಿದೆ ಎಂದು ಸಾಹಿತಿ ಬೆಳವಾಡಿ ಮಂಜುನಾಥ್ ಹೇಳಿದ್ದಾರೆ.
ಮೂಡಿಗೆರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟ ಮತ್ತು ತಾಲೂಕು ಶಿಕ್ಷಣ ಸಮನ್ವಯ ಕೇಂದ್ರ ಏರ್ಪಡಿಸಿದ್ದ ಹಳೆಕೋಟೆ ರಮೇಶ್ ಅವರ ಬ್ರಿಜಿಲ್ ಮತ್ತು ಕೊಲಂಬಿಯಾ ಕೃಷಿ ಅಧ್ಯಯನ ಪ್ರವಾಸದ ಬೀಳ್ಕೊಡುಗೆ ಸಮಾರಂಭದ ಅತಿಥಿಯಾಗಿ ಮಾತನಾಡಿದರು.
ಸಫಲವಾಗುತ್ತಿಲ್ಲ: ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸಿ ಅಭಿವೃದ್ಧಿಯ ದೃಷ್ಟಿಯಿಂದ ವಿದೇಶ ಪ್ರವಾಸವನ್ನು ಏರ್ಪಡಿಸುತ್ತದೆ. ಆದರೆ, ಅದರ ಉದ್ದೇಶ ಪೂರ್ಣವಾಗಿ ಸಫಲವಾಗುತ್ತಿಲ್ಲ ಎಂದು ವಿಷಾದಿಸಿದರು. ರಮೇಶ್ ವಿದ್ಯಾವಂತ ಕೃಷಿಕರು. ಪ್ರಗತಿಪರ ರೈತ, ಸಾಹಿತ್ಯ ರಚನೆ ಅವರ ಹವ್ಯಾಸ. ದೇಶ, ವಿದೇಶಗಳನ್ನು ಹಲವು ಭಾರಿ ಸುತ್ತಿದ್ದಾರೆ. ಉತ್ತಮ ಪ್ರವಾಸಿ ಕಥನಗಳನ್ನು ರಚಿಸಿದ್ದಾರೆ. ಇಂಥವರನ್ನು ಕಾಫಿ ಮಂಡಳಿ ಅಧ್ಯಯನ ಪ್ರವಾಸಕ್ಕೆ ಆಯ್ಕೆ ಮಾಡಿದ್ದು ಸಾರ್ಥಕ ಎಂದರು.
ಮಾರ್ಗದರ್ಶಿ: ಕನ್ನಡದಲ್ಲಿ ಶಿವರಾಮಕಾರಂತರು ಆರು ಪ್ರವಾಸಿ ಕಥನಗಳನ್ನು ಬರೆದು ದಾಖಲೆ ನಿರ್ಮಿಸಿದರೆ ರಮೇಶ್ ಏಳು ಪ್ರವಾಸಿ ಕೃತಿಗಳನ್ನು ರಚಿಸಿದ್ದಾರೆ.
ಪ್ರಗತಿ ಶಿಖರದತ್ತ ಚೀನಾ, ಮರಳು ಗಾಡಿನ ನಂದನವನ ಇಸ್ರೇಲ್ ಅಪರೂಪದ ಕೃತಿಗಳು ಅಧ್ಯಯನ ತಂಡ ಪ್ರವಾಸ ಅನುಭವವನ್ನು ಹೆಚ್ಚಿಸುತ್ತದೆ. ಇತರರಿಗೆ ಮಾರ್ಗದರ್ಶಿಯಾಗಬಲ್ಲದು. ಕಾಫಿ ಮಳೆಯ ಅಭಿವೃದ್ಧಿಗಾಗಿ ಸರ್ಕಾರ ವಿಶ್ವದಲ್ಲೇ ಹೆಚ್ಚು ಕಾಫಿ ಬೆಳೆಯುವ ರಾಷ್ಟ್ರಗಳಿಗೆ ಆಸಕ್ತರನ್ನು ಕಳುಹಿಸುತ್ತಿದೆ. ಅದು ರೈತ ಸಮೂಹಕ್ಕೆ ಉಪಯೋಗವಾಗಬೇಕೆಂದು ಆಶಿಸಿದರು.
ಲಯನ್ ಸಂಸ್ಥೆಯ ಮಾಜಿ ಗೌರ್ನರ್ ಸುಂದರೇಶ್ ಮಾತನಾಡಿ, ಭಾರತೀಯ ವ್ಯವಸಾಯ ವಿಧಾನಕ್ಕೂ ವಿದೇಶಗಳ ವ್ಯವಸಾಯಕ್ಕೂ ಬಹಳಷ್ಟು ವ್ಯತ್ಯಾಸಗಳಿವೆ. ಅಲ್ಲಿಯಂತೆ ನಮ್ಮ ವಿಧಾನವನ್ನು ಬದಲಿಸುವುದು ಕಷ್ಟ. ಪರಿಸರವನ್ನು ಆಧರಿಸಿರುವ ಕೃಷಿ ಆಯಾ ವಲಯಕ್ಕೆ ವಿಶೇಷವಾಗಿರುತ್ತದೆ. ಅದ್ಯಯನದಿಂದ ಕೆಲ ಮಟ್ಟಿಗೆ ಪ್ರಯೋಜನವಾಗಲಿದೆ ಎಂದರು.
ಕಾಫಿ ಬೆಳೆಗಾರ ಜಯರಾಮ್ ಮಾತನಾಡಿ, ಪ್ರತಿಯೊಬ್ಬರಿಗೂ ಬೇರೆಬೇರೆ ಕ್ಷೇತ್ರದಲ್ಲಿ ಬೆಳೆಯಬೇಕೆಂಬ ಹಂಬಲವಿರುತ್ತದೆ. ಅವಕಾಶ ಸಿಗುವುದಿಲ್ಲ. ನಮ್ಮ ದೇಶದಲ್ಲಿ ಪರಿಶ್ರಮವಹಿಸಿ ಬೆಳೆದರೂ ಕಾಫಿಯ ಬೆಲೆ ಅಮೆರಿಕಾದಲ್ಲಿ ನಿರ್ಧಾರವಾಗುವುದು ದುರಂತ ಎಂದರು. ವಿದೇಶದ ಮಾರುಕಟ್ಟೆ ಭಾರತಿಯರನ್ನು ಮೌಲ್ಯಮಾಪಾನ ಮಾಡುತ್ತದೆ. ಅವರು ಹೆಚ್ಚಾಗಿ ಬೆಳೆಯುವುದೇ ಕಾರಣ ಎಂದು ಹೇಳಿದರು.
ಪತ್ರಕರ್ತ ಗೌಡ್ನಳ್ಳಿ ಪ್ರಸನ್ನ ರಮೇಶ್, ಮಾದರಿ ಕೃಷಿಕ. ಇದರೊಂದಿಗೆ ಸಮಾಜ ಸೇವೆ, ಸಾಂಸ್ಕೃತಿಕ ಚಟುವಟಿಕೆಯಲ್ಲೂ ತೊಡಗಿಸಿಕೊಂಡಿರುವುದು ವಿಶೇಷ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಪಂ ಕಾರ್ಯನಿರ್ವಹಕ ಅಧಿಕಾರಿ ಕುಮಾರಯ್ಯ ಮಾತನಾಡಿ, ಪ್ರತಿಯೊಬ್ಬ ಮನುಷ್ಯನು ತಾನು ಬಂದ ಕ್ಷೇತ್ರದಲ್ಲಿ ನಿಷೆವಿಯಿಂದ ದುಡಿದಾಗ ಖಂಡಿತಾ ಏಳಿಗೆ ಸಾಧ್ಯ. ಎಲ್ಲರ ಸಹಕಾರದಿಂದ ಸಮಾಜದ ಪ್ರಗತಿಯಾಗಬಲ್ಲದು ಎಂದರು.
ರಮೇಶ್ ಕೃಷಿಕರಾದಂತ ಸಾಹಿತಿಗಳೂ ಆಗಿದ್ದಾರೆ. ಅವರಿಂದ ಕೃಷಿ ಸಮೂಹಕ್ಕೆ ಮಾರ್ಗದರ್ಶನವಾಗಲಿದೆ ಎಂದು ಆಶಿಸಿದರು.
ಕಾಫಿ ಮಂಡಳಿಯ ಅಧಿಕಾರಿ ಶ್ರೀನಾಥ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ಅಂಕೇಗೌಡ, ಕ್ಷೇತ್ರ ಸಮನ್ವಯಾಧಿಕಾರಿ ತಾರಾನಾಥ್ ಮಾತನಾಡಿದರು. ಶಿಕ್ಷಕ ರಮೇಶ್ ಸ್ವಾಗತಿಸಿದರು, ಯುವರಾಜ್ ವಂದಿಸಿದರು. ಹಳೆಕೋಟೆ ರಮೇಶ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.