ಚಿಕ್ಕಮಗಳೂರು

ಮಲೆನಾಡಲ್ಲಿ ಮಳೆ, ಬಯಲುಸೀಮೆಯಲ್ಲಿ ಬಿಡುವು

Published On :

ಕ.ಪ್ರ. ವಾರ್ತೆ  ಚಿಕ್ಕಮಗಳೂರು  ಜೂ.26
ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಬುಧವಾರದಂದು ಮಲೆನಾಡಲ್ಲಿ ಮಳೆ ಮುಂದುವರೆದಿತ್ತು. ಆದರೆ, ಬಯಲುಸೀಮೆಯಲ್ಲಿ ಅಲ್ಪ ಬಿಡುವು ನೀಡಿತ್ತು.
ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ ಹಾಗೂ ಎನ್.ಆರ್. ಪುರ ತಾಲೂಕುಗಳಲ್ಲಿ ಎಂದಿನಂತೆ ಮಳೆ ಮುಂದುವರೆದಿತ್ತು. ಬಯಲುಸೀಮೆಯ ತಾಲೂಕುಗಳಾದ ಕಡೂರು ಹಾಗೂ ತರೀಕೆರೆ ತಾಲೂಕುಗಳಲ್ಲಿ ಮಳೆ  ಕ್ಷೀಣಿಸಿತ್ತು.
ವಿದ್ಯುತ್ ವ್ಯತ್ಯಯ: ಮಲೆನಾಡಿನಲ್ಲಿ ನಿರಂತರವಾಗಿ ಮಳೆ ಬಿಡುವಿಲ್ಲದೆ ಸುರಿಯುತ್ತಿದೆ. ಜನರು ಹೊರಗೆ ಓಡಾಡದಂತಹ ಪರಿಸ್ಥಿತಿ ಕೆಲವೆಡೆ ನಿರ್ಮಾಣಗೊಂಡಿದೆ. ಒಂದೆಡೆ ಜಿಟಿ ಜಿಟಿ ಮಳೆ, ಮತ್ತೊಂದೆಡೆ ಆಗಾಗ ಬೀಸುತ್ತಿರುವ ಚಳಿ ಗಾಳಿ, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತಿದೆ. ಗಾಳಿಯಿಂದಾಗಿ ಕೆಲವೆಡೆ ಮರಗಳು ಉರುಳಿದ್ದು, ಶೃಂಗೇರಿ ಹಾಗೂ ಕೊಪ್ಪ ತಾಲೂಕುಗಳ ಗ್ರಾಮಾಂತರ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾಗಿದೆ.
ತುಂಗಾ ಹಾಗೂ ಭದ್ರಾ ನದಿಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ತುಂಗಾ ಹಾಗೂ ಭದ್ರಾ ನದಿಗಳ ಒಳ ಹರಿವು ಹೆಚ್ಚಳವಾಗಲಿದೆ.
ತರೀಕೆರೆ ಹಾಗೂ ಕಡೂರು ತಾಲೂಕುಗಳಲ್ಲಿ ಆಗಾಗ ತುಂತುರು ಮಳೆಯಾಗುತ್ತಿತ್ತು. ಇನ್ನುಳಿದಂತೆ ಮೋಡ ಕವಿದ ವಾತಾವರಣ ಇತ್ತಾದರೂ ಬಿಸಿಲಿನ ದರ್ಶನವೂ ಸಹ ಆಯಿತು.
ಚಿಕ್ಕಮಗಳೂರು ನಗರದಲ್ಲಿ ಕಳೆದ ಮೂರು ದಿನಗಳಿಗೆ ಹೋಲಿಕೆ ಮಾಡಿದರೆ ಬುಧವಾರ ಬೆಳಗ್ಗೆಯಿಂದ ಸಂಜೆಯವರೆಗೆ ಮಳೆ ಬಿಡುವು ನೀಡಿತ್ತು. ಆಗೊಮ್ಮೆ, ಈಗೊಮ್ಮೆ ಮಳೆ ಬಂದು ಹೋಗುತ್ತಿದ್ದರು. ಇನ್ನು ಹೆಚ್ಚಿನ  ಸಮಯ ಬಿಸಿಲಿತ್ತು. ಕೆಸರುಮಯವಾಗಿದ್ದ ರಸ್ತೆಗಳು ಅಲ್ಪಮಟ್ಟಿಗೆ ಒಣಗಿದ್ದವು. ಒಟ್ಟಾರೆ ಬುಧವಾರವೂ ಮಳೆ ಮುಂದುವರೆದಿತ್ತು.
ಎಲ್ಲಿ, ಎಷ್ಟು ಮಳೆ: ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ 7 ತಾಲೂಕುಗಳ ಪೈಕಿ ಶೃಂಗೇರಿ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ.
ಶೃಂಗೇರಿ ಪಟ್ಟಣದಲ್ಲಿ 73.1 ಮಿ.ಮೀ. ಮಳೆಯಾಗಿದ್ದರೆ, ಕಿಗ್ಗಾದಲ್ಲಿ 146.4, ಕೆರೆಕಟ್ಟೆಯಲ್ಲಿ 175.4 ಮಿ.ಮೀ. ಮಳೆ ಬಂದಿದೆ.
ಇದೇ ಅವಧಿಯಲ್ಲಿ ಚಿಕ್ಕಮಗಳೂರು ನಗರದಲ್ಲಿ 13 ಮಿ.ಮೀ., ವಸ್ತಾರೆ- 26.4, ಜೋಳ್ದಾಳ್- 48.4, ಆಲ್ದೂರು- 45.9, ಅತ್ತಿಗುಂಡಿ- 62, ಬ್ಯಾರವಳ್ಳಿ- 35.6, ಸಂಗಮೇಶ್ವರಪೇಟೆ- 64, ಕಡೂರು- 7.6, ಯಗಟಿ- 1.2, ಸಿಂಗಟಗೆರೆ- 2, ಸಖರಾಯಪಟ್ಟಣ- 9, ಗಿರಿಯಾಪುರ- 15.4, ಬೀರೂರು- 10.2, ಎಮ್ಮೆದೊಡ್ಡಿ- 32.2, ಮೂಡಿಗೆರೆ- 69.6,
ಜಾವಳಿ- 88, ಗೋಣಿಬೀಡು- 110, ಕಳಸ- 105.6, ಎನ್.ಆರ್.ಪುರ- 47, ಬಾಳೆಹೊನ್ನೂರು- 73, ಮೇಗರಮಕ್ಕಿ- 50, ತರೀಕೆರೆ- 32.2, ಲಕ್ಕವಳ್ಳಿ- 37, ಅಜ್ಜಂಪುರ- 23, ಶಿವನಿ- 12.1, ಬುಕ್ಕಾಂಬೂದಿ- 15.5, ಲಿಂಗದಹಳ್ಳಿ- 15, ತಣೀಗೆಬೈಲು- 34.6, ಉಡೇವಾ- 29, ಹುಣಸಘಟ್ಟ- 30 ಹಾಗೂ ರಂಗೇನಹಳ್ಳಿಯಲ್ಲಿ 39 ಮಿ.ಮೀ. ಮಳೆ ಬಂದಿದೆ.
ಮಳೆಯಿಂದಾಗಿ ಮಳೆನಾಡಿನಲ್ಲಿ ಹಾನಿ ಸಂಭವಿಸಿದ್ದು, ಮೂಡಿಗೆರೆ ತಾಲೂಕಿನ ಗೋಣಿಬೀಡು ಸಮೀಪದ ಉಗ್ಗೇಹಳ್ಳಿಯಲ್ಲಿ ರಾಧ ಎಂಬುವವರಿಗೆ ಸೇರಿದ ಮನೆಗೆ ಭಾಗಶ- ಹಾನಿಯಾಗಿದ್ದು, ಇದರಿಂದ 15 ಸಾವಿರ ನಷ್ಟ ಸಂಭವಿಸಿದೆ.

ಕೊಟ್ಟಿಗೆ ಕುಸಿದು ಎತ್ತು ಸಾವು
ನರಸಿಂಹರಾಜಪುರ: ತಾಲೂಕಿನ ಬಾಳೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊರಬೈಲು ಗ್ರಾಮದಲ್ಲಿ ಮಂಗಳವಾರ ಸಂಜೆ ಸುರಿದ ಭಾರೀ ಮಳೆ, ಗಾಳಿಯಿಂದಾಗಿ ಹೊರಬೈಲು ನಿವಾಸಿ ಮಾಲಿಂಗ ಎಂಬುವರ ದನದ ಕೊಟ್ಟಿಗೆ ಕುಸಿದು ಬಿದ್ದು ಕೊಟ್ಟಿಗೆಯಲ್ಲಿದ್ದ ಎತ್ತು ಮೃತಪಟ್ಟಿದೆ.
ತಾಲೂಕಿನಲ್ಲಿ ಮಳೆ, ಗಾಳಿ ಮುಂದುವರಿದಿದ್ದು, ಬುಧವಾರ ಆಗಾಗ್ಗೆ ಮಳೆ ಬಿಡುವು ನೀಡುತ್ತಿದ್ದರೂ ಮತ್ತೆ ಅಷ್ಟೇ ಬಿರುಸಿನಿಂದ ಮಳೆ ಸುರಿಯಿತು. ಬಲವಾಗಿ ಗಾಳಿ ಬೀಸುತ್ತಿದ್ದು ಕಟ್ಟೆ ಬಂದ ಒಣಗಿದ ಬಿದಿರು ಹಿಂಡಿಲು ವಿದ್ಯುತ್ ಲೈನ್ ಮೇಲೆ ಬೀಳುತ್ತಿದ್ದು ವಿದ್ಯುತ್‌ವ್ಯವಸ್ಥೆಗೆ ಅಡಚಣೆ ಉಂಟಾಗಿದೆ.
ಒಟ್ಟಿನಲ್ಲಿ ಸತತ ಬೀಳುತ್ತಿರುವ  ಮಳೆಯಿಂದಾಗಿ  ತಾಲೂಕಿನ ಜನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಮಳೆಗೆ ಮನೆ ಕುಸಿತ
ಮೂಡಿಗೆರೆ: ಕಳೆದ 24 ತಾಸುಗಳಲ್ಲಿ ತಾಲೂಕಿನಾದ್ಯಂತ ಸುರಿದ ಭಾರಿ ಮಳೆಗೆ ಮನೆಯೊಂದು ಕುಸಿದಿದ್ದು ಅಲ್ಲಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ.
ತಾಲೂಕಿನ ಗುತ್ತಿಹಳ್ಳಿಯ ಕರೀಗೌಡ ಎಂಬುವರ ಮನೆಯ ಹಿಂಭಾಗ ಭಾಗಶಃ ಕುಸಿದಿದೆ. ಇದರಿಂದ ಸುಮಾರು 40 ಸಾವಿರಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ರುದ್ರಪ್ಪಾಜಿರಾವ್ ತಕ್ಷಣ 6.5 ಸಾವಿರ ನಷ್ಟ ಪರಿಹಾರದ ಚೆಕ್ ನೀಡಿದರು. ಈ ವೇಳೆ ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಆರ್. ಉಮಾಪತಿ, ತಾಪಂ ಮಾಜಿ ಅಧ್ಯಕ್ಷ ರಂಜನ್ ಅಜೀತ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.