ಹೊಸ ಮದ್ಯದಂಗಡಿ ಪರವಾನಗಿ ಕೈಬಿಡುವಂತೆ ಆಗ್ರಹ
ಚಿಕ್ಕಮಗಳೂರು: ರಾಜ್ಯದಲ್ಲಿ ಹೊಸ ವೈನ್ಶಾಪ್ ಮತ್ತು ಬಾರ್ಗಳಿಗೆ ಪರವಾನಗಿ ನೀಡುವ ನಿರ್ಧಾರವನ್ನು ತಕ್ಷಣವೇ ಕೈಬಿಡಬೇಕು ಎಂದು ಜಿಲ್ಲಾ ಜನಜಾಗೃತಿ ವೇದಿಕೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಮುಂದಿನ ದಿನಗಳಲ್ಲಿ ಹಾಲಿ ಇರುವ ಲೈಸನ್ಸ್ ಕಡಿತಗೊಳಿಸಿ ಪಾನ ನಿಷೇಧ ಮಾಡಬೇಕು ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಚಿಪ್ರಗುತ್ತಿ ಪ್ರಶಾಂತ್ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
9 ಸಾವಿರ ವೈನ್ಶಾಪ್: ಹಿಂದಿನ ಸರ್ಕಾರ ಸಾರಾಯಿ ನಿಷೇಧ ಮಾಡಿದ ನಂತರ ಬಡಜನರು ಸಾರಾಯಿಯ ಬದಲಿಗೆ ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್ ಮಾರು ಹೋಗುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಇದಕ್ಕೆ ಪೂರಕವಾಗಿ ಕಳೆದ ಒಂದು ವರ್ಷದಲ್ಲಿ ರಾಜ್ಯ ಸರ್ಕಾರ ತನ್ನ ಅಧಿಕೃತ ಮದ್ಯ ಮಾರಾಟ ಮಳಿಗೆಗಳನ್ನು ಮೈಸೂರ್ ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಡೆಟ್ ಮೂಲಕ ಮದ್ಯದಂಗಡಿಗಳನ್ನು ವಿಸ್ತರಿಸುತ್ತಿದೆ. ಈ ವರೆಗೆ ರಾಜ್ಯದಲ್ಲಿ 9 ಸಾವಿರ ವೈನ್ಶಾಪ್ಗಳು, 140 ಎಂಎಸ್ಐಎಲ್ ಮದ್ಯದಂಗಡಿಗಳನ್ನು ತೆರೆಯಲಾಗಿದೆ.
ಇದೀಗ ಎಂಎಸ್ಐಎಲ್ ಮದ್ಯದಂಗಡಿಗಳನ್ನು ಉಳಿಸಿಕೊಳ್ಳುವುದಲ್ಲದೆ ಮತ್ತಷ್ಟು ಹೊಸ ವೈನ್ಶಾಪ್ ಮತ್ತು ಬಾರ್ಗಳಿಗೆ ಅನುಮತಿ ನೀಡುವುದಾಗಿ ಪ್ರಕಟಿಸಿರುವುದು ಅಘಾತಕಾರಿಯಾಗಿದೆ. ಇದರ ವಿರುದ್ಧ ಹೋರಾಟ ರೂಪಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಪೇಟೆ ಪಟ್ಟಣಗಳಲ್ಲಿರುವ ವೈನ್ಶಾಪ್ಗಳನ್ನು ಹಳ್ಳಿ ಪ್ರದೇಶಕ್ಕೆ ಸ್ಥಳಾಂತರ ಮಾಡುವುದನ್ನು ಸರ್ಕಾರ ನಿಲ್ಲಿಸಬೇಕು. ಅಕ್ರಮ ಮದ್ಯ ದಾಸ್ತಾನುಗಳನ್ನು ಮಾಡಿ ಮಾರಾಟ ಮಾಡುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಗುಟ್ಕಾ ನಿಷೇಧ, ಬಡಜನರಿಗೆ ಒಂದು ರುಪಾಯಿ ದರದಲ್ಲಿ ಅಕ್ಕಿ ವಿತರಣೆ, ಭ್ರಷ್ಟಾಚಾರ ವಿರೋಧಿ ನೀತಿ, ದುಂದು ವೆಚ್ಚಗಳಿಗೆ ಕಡಿವಾಣ, ಮುಂತಾದ ಸಮಾಜಪರ ಉಪಯುಕ್ತ ನಿರ್ಧಾರಗಳನ್ನು ಪ್ರಕಟಿಸಿದ್ದು, ಇದನ್ನು ಸ್ವಾಗತಿಸಲಾಗುವುದು. ಅದೇ ರೀತಿ ಮದ್ಯ ಮಾರಾಟ ನಿಷೇಧಕ್ಕೂ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಗುಷ್ಕಾ ಮತ್ತು ಮದ್ಯ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಪಠ್ಯ ಪುಸ್ತಕಗಳ ಕೊನೆಯ ಪುಟದಲ್ಲಿ ಕಡ್ಡಾಯವಾಗಿ ಈ ಬಗ್ಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಗೀತಾ, ತೇಗೂರು ಜಗದೀಶ್ ಹಾಗೂ ಹಿರೇಮಗಳೂರು ಮೋಹನ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

