ಮಣ್ಣು, ನೀರು ಸಂರಕ್ಷಣೆ ಅಗತ್ಯ
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ.3
ಮಣ್ಣು ಮತ್ತು ನೀರು ರೈತನ ಎರಡು ಕಣ್ಣುಗಳಿದ್ದಂತೆ ಇವೆರಡನ್ನೂ ಜಾಗೃತಿಯಿಂದ ಕಾಪಾಡಿದರೆ ಕೃಷಿಕನ ಮೊಗದಲ್ಲಿ ಶಾಶ್ವತ ಮಂದಹಾಸ ಕಾಣಬಹುದು ಎಂದು ನಬಾರ್ಡ್ನ ಕರ್ನಾಟಕ ರಾಜ್ಯ ಪ್ರಧಾನ ಮುಖ್ಯ ವ್ಯವಸ್ಥಾಪಕ ಡಾ. ಎಸ್.ಎನ್.ವಿ. ಜಿನ್ನಾ ಹೇಳಿದ್ದಾರೆ.
ಕಡೂರು ತಾಲೂಕಿನ ತುರುವನಹಳ್ಳಿ ಪ್ರದೇಶದ ರೈತರಿಗಾಗಿ ಶ್ರೀ ಕ್ರಿಸ್ತ ಶರಣ ಸೇವಾ ಸಂಸ್ಥೆ ಐದು ವರ್ಷಗಳ ಕಾಲ ನಿರ್ವಹಿಸಿದ್ದ ಜಲಾನಯನ ಕ್ಷೇತ್ರವನ್ನು ಸ್ಥಳೀಯ ರೈತರನ್ನೊಳಗೊಂಡ ಕಾರಂಜಿ ಜಲಾನಯನ ಸಮಿತಿಯ ನಿರ್ವಹಣೆಗೆ ಹಸ್ತಂತರಗೊಂಡ ಸಂದರ್ಭದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
ನೀರನ್ನು ಮಿತವಾಗಿ ಬಳಸಿ: ಭೂಮಿಯ ಮೇಲೆ ಆರು ಇಂಚು ಫಲವತ್ತಾದ ಮಣ್ಣಿರುತ್ತದೆ. ಅದು ಕೊಚ್ಚಿ ಹೋಗದಂತೆ ರಕ್ಷಿಸಬೇಕು. ನೀರನ್ನು ಮಿತವಾಗಿ ಹಿತವಾಗಿ ಬಳಸಬೇಕು. ನೀರು ವ್ಯರ್ಥವಾಗದಂತೆ ಎಚ್ಚರಿಕೆ ವಹಿಸಬೇಕು. ಬಿದ್ದ ನೀರನ್ನು ವ್ಯವಸ್ಥಿತವಾಗಿ ವ್ಯವಹಾರಿಕತೆಯಿಂದ ಉಪಯೋಗಿಸಿಕೊಳ್ಳಬೇಕೆಂದ ಅವರು, ನಮ್ಮ ಜನ, ನಮ್ಮ ಮನೆ, ನಮ್ಮ ಜಲಾನಯನ ಎಂಬ ಮನೋಭಾವ ತಾಳಬೇಕು. ಈಗ ಸಿದ್ಧವಾಗಿರುವ ನಿರ್ಮಾಣವನ್ನು ಒಗ್ಗಾಟಾಗಿ ಚೆನ್ನಾಗಿ ಪರಿಪಾಲಿಸಬೇಕು. ಐದು ಬೆರಳುಗಳ ಒಂದು ಮುಷ್ಠಿಯಾದರೆ ಶಕ್ತಿಯುತ. ಒಟ್ಟಾಗಿ ಕಾರ್ಯ ನಿರ್ವಹಿಸುವುದೇ ಯಶಸ್ಸಿನ ಗುರುತು ಎಂದರು.
ಪರಸ್ಪರ ಸಹಕಾರ, ಸಹಬಾಳ್ವೆ ಅಗತ್ಯ: ಜಿ.ಪಂ. ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಾರಂಜಿ ಜಲಾನಯನ ಪ್ರದೇಶದಲ್ಲಿ ಉತ್ತಮ ಪ್ರಗತಿ ಕಂಡು ಬರುತ್ತಿದೆ. ಸೇವಾ ಮನೋಭಾವ ಮತ್ತು ಪರಸ್ಪರ ಸಹಕಾರ, ಸಹಬಾಳ್ವೆಯ ಧ್ಯೋತಕವಾಗಿ ಊರಿನ ಜನರಿಗೆ ಜಲಾನಯನ ನಿರ್ವಹಣೆ ವರ್ಗಾವಣೆಗೊಳ್ಳುತ್ತಿದೆ. ಯಥೇಚ್ಛವಾಗಿ ಸಿಗುವ ವಸ್ತುವಿನ ಮಹತ್ವವೇ ನಮಗೆ ಗೊತ್ತಾಗುವುದಿಲ್ಲ. ಆದರೆ, ಪ್ರಕೃತಿಯೇ ಗೊತ್ತು ಮಾಡಿಸುತ್ತದೆ ಎಂದು ಹೇಳಿದರು.
ದೊಡ್ಡ ಬದುಗಳನ್ನು ನಿರ್ಮಿಸಿ: ಬಯಲುಪ್ರದೇಶದಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ. ಅಂತರ್ಜಲಮಟ್ಟವೂ ಕುಸಿದಿದೆ. ವಿವೇಚನೆ ಇಲ್ಲದೆ ಭೂಮಿ ಒಳಗಿನ ನೀರನ್ನೂ ವಿಪರೀತ ಬಳಕೆ ಮಾಡಿಕೊಂಡು ಮರು ಪೂರಣವನ್ನೆ ಮರೆತದ್ದರಿಂದ ಈ ಸ್ಥಿತಿ ನಿರ್ಮಾಣ ಗೊಂಡಿದೆ ಎಂದ ಅವರು, ಬಿದ್ದ ನೀರನ್ನು ಇಂಗಿಸಲು ಪ್ರಯತ್ನಿಸದೆ ಇರುವ ಹಳ್ಳವನ್ನು ಮುಚ್ಚಿ ಉಳುಮೆ ಮಾಡಿ, ಕೆರೆಕಟ್ಟೆಗಳಿಗೂ ಬೇಲಿ ಹಾಕಿಕೊಂಡು ದುರಾಸೆಯಿಂದ ವರ್ತಿಸಿದ ಪರಿಣಾಮ ನೀರಿನ ಕೊರತೆ. ಜಮೀನಿನಲ್ಲಿ ದೊಡ್ಡ ಬದುಗಳನ್ನು ಪೋಷಿಸಬೇಕು. ಇದರಿಂದ ನೀರು ಇಂಗುವುದರ ಜೊತೆಗೆ ಭೂ ಸವಕಳಿಯೂ ತಪ್ಪುತ್ತದೆ. ಜಾನುವಾರುಗಳಿಗೆ ಮೇವು ಲಭ್ಯವಾಗುತ್ತದೆ ಎಂದು ತಿಳಿಸಿದರು.
ಕ್ರಿಸ್ತ ಶರಣ ಸಂಸ್ಥೆಯ ಮುಖ್ಯಸ್ಥ ಫಾದರ್ ಎಂ. ಲೋಬೋ ಕಾರಂಜಿ ಜಲಾನಯನವನ್ನು ಹಸ್ತಾಂತರಿಸಿ ಮಾತನಾಡಿದರು.
ಫಾದರ್ ಜೇಕಬ್, ನಬಾರ್ಡ್ ಡಾ. ಅನುರಾಧಾ ನರಹರಿ, ಹಾಸನದ ನಾಗೇಂದ್ರ, ನಿವೃತ್ತ ಕೃಷಿ ಅಧಿಕಾರಿ ಡಾ. ಭೈರಪ್ಪ, ಕಾರಂಜಿ ಜಲಾನಯನ ಅಧ್ಯಕ್ಷ ಸಿದ್ದಪ್ಪ, ರುದ್ರಮುನಿಯಪ್ಪ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

