ಬಿಜೆಪಿಗೆ ನಾಯಕತ್ವದ ಧ್ವನಿಯೇ ಇಲ್ಲ: ಮಂಜುಳಾ
ಚಿಕ್ಕಮಗಳೂರು: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಧೂಳಿಪಟವಾಗುವ ಭಯದಿಂದ ಕೆಜೆಪಿ ಬಗ್ಗೆ ಅಪಪ್ರಚಾರದಲ್ಲಿ ತೊಡಗಿವೆ. ಸತ್ಯ ತಿಳಿದಿರುವ ಮತದಾರರು ಕೆಜೆಪಿ ಕೈ ಹಿಡಿಯಲಿದ್ದಾರೆ ಎಂದು ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಹೇಳಿದ್ದಾರೆ.
ನಗರದ ವಿಜಯಪುರ ಬಡಾವಣೆಯಲ್ಲಿ ಸೋಮವಾರ ಸಂಜೆ ನಡೆದ ನಗರಸಭೆ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರಕ್ಕೆ ನಾಯಕತ್ವದ ಧ್ವನಿಯೇ ಇಲ್ಲ. ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾದರೂ ಯಾವುದೇ ಸೂಕ್ತ ಕ್ರಮ ಕೈಗೊಳ್ಳದೆ ಕೈಕಟ್ಟಿ ಕುಳಿತಿರುವ ಸರ್ಕಾರಕ್ಕೆ ನಮ್ಮ ಧಿಕ್ಕಾರವಿದೆ ಎಂದರು.
ಸೋಲುವ ಭಯ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೋಲುವ ಭಯದಿಂದ ಸ್ವತಃ ಮುಖ್ಯಮಂತ್ರಿಗಳೇ ಗಲ್ಲಿ ಗಲ್ಲಿಗಳಲ್ಲಿ ಪ್ರಚಾರಕ್ಕೆ ಇಳಿದಿರುವುದು ಅವರ ಪಕ್ಷದ ಹೀನಾಯ ಸ್ಥಿತಿಯನ್ನು ತೋರುತ್ತದೆ. ಸ್ಥಳೀಯ ಶಾಸಕರು ಅಭಿವೃದ್ಧಿ ಹೆಸರಿನಲ್ಲಿ ಹಣ ಕೊಳ್ಳ ಹೊಡೆದು ಸ್ವ ಅಭಿವೃದ್ಧಿಯಲ್ಲಿ ತೊಡಗಿದ್ದಾರೆ. ಚುನಾವಣೆ ಸಮಯದಲ್ಲಿ ಅಭಿವೃದ್ಧಿ ಮಂತ್ರ ಜಪಿಸುವ ಇವರು ಯಡಿಯೂರಪ್ಪನವರ ಯಾವುದೇ ಯೋಜನೆಗಳನ್ನು ಜನರಿಗೆ ತಲುಪಿಸುತ್ತಿಲ್ಲ ಎಂದು ದೂಷಿಸಿದರು.
ಶಿಕ್ಷಣ ಸಚಿವರು ವಿವಿ ಖಾಸಗೀಕರಣ ಮಾಡುತ್ತಿರುವುದು ಡೋಂಗಿ ರಾಜಕಾರಣದ ಉದಾಹರಣೆಯಾಗಿದೆ. ಚುನಾವಣೆಯಲ್ಲಿ ಮತದಾರರು ಇಂತಹವರಿಗೆ ತಕ್ಕ ಪಾಠ ಕಲಿಸಬೇಕೆಂದು ತಿಳಿಸಿದರು.
ಭ್ರಷ್ಟಾಚಾರದ ಹರಿಕಾರ: ಕೆಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಹೆಚ್.ಹೆಚ್. ದೇವರಾಜ್ ಮಾತನಾಡಿ, ಸ್ಥಳೀಯ ಶಾಸಕರು ಅಭಿವೃದ್ಧಿ ಹರಿಕಾರ ಅಲ್ಲ, ಭ್ರಷ್ಟಾಚಾರದ ಹರಿಕಾರರಾಗಿದ್ದಾರೆ ಎಂದು ಟೀಕಿಸಿದರು.
ಪ್ರಧಾನ ಕಾರ್ಯದರ್ಶಿ ಸಿ.ಹೆಚ್. ಲೋಕೇಶ್ ಮಾತನಾಡಿ, ಯಡಿಯೂರಪ್ಪ ಇಲ್ಲದಿದ್ದರೆ ಸಿ.ಟಿ. ರವಿ ಶಾಸಕರೂ ಕೂಡ ಆಗುತ್ತಿರಲಿಲ್ಲ. ಮುಂದಿನ ಚುನಾವಣೆಯಲ್ಲಿ ಸಚಿವರು ಬೇರೆಡೆಗೆ ಪಲಾಯನ ಮಾಡದೆ ಇಲ್ಲೇ ಸ್ಪರ್ಧಿಸಿದರೆ ಅವರಿಗೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪಕ್ಷದ ನಗರಾಧ್ಯಕ್ಷ ರವಿಕುಮಾರ್, ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್, ಜಮೀಲ್ ಆಹ್ಮದ್, ತೇಜೇಶ್ ಕುಮಾರ್, ಸುವರ್ಣ ಕೇಶವಮೂರ್ತಿ, ಟಿ.ಆರ್. ಪ್ರಭಾಕರ್, ಮಂಜುಳಾ ಬಾಲು ಉಪಸ್ಥಿತರಿದ್ದರು. ರವಿ ಸ್ವಾಗತಿಸಿ, ಸಿ.ಪಿ. ಲೋಕೇಶ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

