ವಿಜ್ಞಾನದಿಂದ ಜೀವನದ ಮುನ್ನಡೆ ಸಾಧ್ಯ
ಕ.ಪ್ರ.ವಾರ್ತೆ, ಚಿಕ್ಕಮಗಳೂರು.
ವಿಜ್ಞಾನದಿಂದ ಜೀವನದಲ್ಲಿ ಮುನ್ನಡೆ ಸಾಧ್ಯವಾಗಿದ್ದು, ಇದು ಬದುಕನ್ನು ಇನ್ನಷ್ಟು ವಿಸ್ತಾರಗೊಳಿಸುತ್ತದೆ ಎಂದು ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ರಾಜೇಗೌಡ ಹೇಳಿದ್ದಾರೆ.
ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ವಿಸ್ಮಯಕಾರಿಯಾಗಿ ಬೆಳೆದಿದೆ. ಅದು ಆಪತ್ಬಾಂಧವ ಎನಿಸಿಕೊಂಡಿದೆ ಎಂದರು.
ಸಾಹಿತ್ಯ ಕಲ್ಪನೆಯೇ ಹೆಚ್ಚು: ಜಗತ್ತಿನ ಯಾವುದೋ ಮೂಲೆಯಲ್ಲಿ ನಡೆಯುತ್ತಿರುವುದನ್ನು ಮನೆಯಲ್ಲಿ ಕುಳಿತು ನೋಡಬಹುದಾದ ಟಿ.ವಿ., ಉಪಗ್ರಹ ಉಡಾವಣೆಗಳವರೆಗೂ ಬದುಕನ್ನು ವಿಸ್ತೃತಗೊಳಿಸಿದೆ. ವಿಜ್ಞಾನ ಸತ್ಯ ಪ್ರತಿಪಾದಕವಾದರೇ, ಸಾಹಿತ್ಯದಲ್ಲಿ ಕಲ್ಪನೆಯೇ ಹೆಚ್ಚು. ವೈಜ್ಞಾನಿಕ ಆಲೋಚನೆ ರೂಢಿಸಿಕೊಂಡು ಮೂಢನಂಬಿಕೆಗಳಿಂದ ಹೊರಬಂದು ಸೃಜನಶೀಲತೆಯೊಂದಿಗೆ ಆತ್ಮವಿಶ್ವಾಸದಿಂದ ಬದುಕಬೇಕು ಎಂದರು.
ನಿವೃತ್ತ ಉಪನ್ಯಾಸಕ ಲಕ್ಷ್ಮಣರಾವ್ ಪ್ರಧಾನ ಉಪನ್ಯಾಸ ನೀಡಿ, ಭಾರತದ ಹೆಮ್ಮೆಯ ಭೌತಶಾಸ್ತ್ರ ವಿಜ್ಞಾನಿ ಸರ್.ಸಿ.ವಿ. ರಾಮನ್ ಅವರು ಹಲವು ವರ್ಷದ ಹಿಂದೆಯೇ ಬೆಳಕಿನ ಕಿರಣಗಳ ಬಗ್ಗೆ ಮಹತ್ವದ ಸಂಶೋಧನೆ ನಡೆಸಿ ಕಂಡು ಹಿಡಿದ ರಾಮನ್ ಎಫೆಕ್ಟ್‌ಗೆ ನೊಬೆಲ್ ಪಾರಿತೋಷಕ ಲಭ್ಯವಾದ ದಿನವನ್ನು ಭಾರತ ಸರ್ಕಾರ ರಾಷ್ಟ್ರೀಯ ವಿಜ್ಞಾನ ದಿನವಾಗಿ ಹೆಮ್ಮೆಯಿಂದ ಆಚರಿಸುತ್ತಿದೆ ಎಂದರು.
ವಿದ್ಯಾರ್ಥಿಗಳು ಅದ್ಭುತವಾದ ಕನಸನ್ನು ಹಗಲಿನಲ್ಲಿ ಕಾಣಬೇಕು. ಅದನ್ನು ನನಸಾಗಿಸಲು ಪ್ರಯತ್ನಿಸಬೇಕು. ಯೋಚನೆಯಲ್ಲಿ ಧನಾತ್ಮಕತೆ ಇರಬೇಕು. ಆರೋಗ್ಯ ನಿಯಮ ಪಾಲಿಸಬೇಕು. ಸ್ವಚ್ಛತೆ, ಶಿಸ್ತು, ಮಾನವೀಯ ಮೌಲ್ಯ ಅಲವಡಿಸಿಕೊಳ್ಳುವುದರಿಂದ ಕತ್ತಲಿನಿಂದ ಬೆಳಕಿನ ಜಗತ್ತಿಗೆ ಹೋಗಬಹುದೆಂದರು.
ವಿಜ್ಞಾನ ಅಡಕ: ಬಿ.ಆರ್.ಪಿ. ರಾಜು ಮಾತನಾಡಿ, ಹಿರಿಯರ ಎಲ್ಲ ಆಚರಣೆಗಳೂ ಮೂಢನಂಬಿಕೆ ಪ್ರತಿಪಾದಿಸುವುದಿಲ್ಲ. ಪೂರ್ವಜರ ಹಲವು ನಂಬಿಕೆಗಳಲ್ಲಿ ಗೊತ್ತಿಲ್ಲದಂತೆಯೆ ವಿಜ್ಞಾನ ಅಡಕವಾಗಿರುತ್ತದೆ. ವಿಮರ್ಶೆಗೊಳಪಡಿಸಿ ಒಪ್ಪಿಕೊಳ್ಳುವುದೇ ವಿಜ್ಞಾನ. ಮೂಲವಿಜ್ಞಾನಕ್ಕೆ ಹೆಚ್ಚಿನ ಪ್ರಾಧಾನ್ಯತೆ ಸಿಗಬೇಕು ಎಂದರು.
ಮುಖ್ಯ ಶಿಕ್ಷಕ ಎಸ್.ಈ. ಲೋಕೇಶ್ವರಾಚಾರ್ ಸ್ವಾಗತಿಸಿದರು, ಶಿಕ್ಷಕಿ ಜಯಂತಿ ವಂದಿಸಿದರು. ವಿಜ್ಞಾನ ದಿನಾಚರಣೆ ಅಂಗವಾಗಿ ವಿಜ್ಞಾನ ಉಪಕರಣ ಹಾಗೂ ವಸ್ತು ಪ್ರದರ್ಶನ ಹಾಗೂ ಪುಸ್ತಕ ಪ್ರದರ್ಶನ ಏರ್ಪಡಿಸಿದ್ದು, ವಿಜೇತರಿಗೆ ಮುಖ್ಯ ಅತಿಥಿಗಳು ಬಹುಮಾನ ವಿತರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

