ಚಿಕ್ಕಮಗಳೂರು

ನ್ಯಾಯಾಂಗ ನಿಂದನೆ ಪ್ರಕರಣ: ಸಚಿನ್ ಮೀಗಾ

Published On :

ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ. 10
ಹಳದಿ ಎಲೆ ರೋಗ ಪೀಡಿತ ಅಡಕೆ ತೋಟಗಳ ಮಾಲೀಕರ ಸಾಲ ಮನ್ನಾ ಮಾಡುವಂತೆ ರಾಜ್ಯ ಹೈಕೋರ್ಟ್ ಆದೇಶ ಹೊರಡಿಸಿದ್ದರೂ ಇದನ್ನು ಜಾರಿಗೊಳಿಸದ ಹಣಕಾಸು ಇಲಾಖೆಯ ಕಾರ್ಯದರ್ಶಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲು ಮಾಡಲಾಗುವುದು ಎಂದು ಕೆಪಿಸಿಸಿ ಕಿಸಾನ್ ಕಾಂಗ್ರೆಸ್‌ನ ಉಪಾಧ್ಯಕ್ಷ ಸಚಿನ್ ಮೀಗಾ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಉಚ್ಚನ್ಯಾಯಾಲಯ ಅಡಕೆ ಬೆಳೆಗಾರರ ಸಾಲ ಮನ್ನಾ ಪರ ಐತಿಹಾಸಿಕ ತೀರ್ಪು ನೀಡಿದೆ. ನ್ಯಾಯಾಲಯದ ಆದೇಶದ ಪ್ರಕಾರ 3 ತಿಂಗಳ ಒಳಗೆ ಅಡಕೆ ಬೆಳೆಗಾರರ ಸಾಲ ಮನ್ನಾ ಮಾಡುವಂತೆ ಹಣಕಾಸು ಕಾರ್ಯಾಲಯಕ್ಕೆ ಆದೇಶಿಸಿದೆ. ಈಗ 3 ತಿಂಗಳ ಗಡುವು ಮುಗಿದಿದೆ. ಕೇಂದ್ರ ಹಣಕಾಸು ಸಚಿವಾಲಯದ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
3 ತಿಂಗಳ ಗಡುವು ಮುಗಿದ ಕಾರಣ ಇದು ನ್ಯಾಯಾಂಗ ನಿಂದನೆ ಆಗಿದೆ. ಕೇಂದ್ರದ ಕಾಂಗ್ರೆಸ್ ನಾಯಕರು ಹಲವಾರು ಬಾರಿ ಮನವರಿಕೆ ಮಾಡಿದರೂ ಅಧಿಕಾರಿಗಳು ರೈತರ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಅಡಕೆ ಬೆಳೆಗಾರರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಹಾಗೂ ಅಡಕೆ ಬೆಳೆಗಾರರ ಆತ್ಮಹತ್ಯೆಗಳಂತಹ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ  ಹಣಕಾಸು ಸಚಿವಾಲಯದ ವಿರುದ್ಧ ನ್ಯಾಯಾಂಗ ನಿಂದನೆ ಜಾರಿ ಮಾಡಿಸಲು ಮುಂದಾಗುತ್ತಿದ್ದೇನೆ. ನ್ಯಾಯಾಂಗ ನಿಂದನೆ ಜಾರಿ ಆದರೆ ಅಡಿಕೆ ಬೆಳೆಗಾರರಿಗೆ ನ್ಯಾಯ ಸಿಗುವುದಲ್ಲದೇ ಅಡಿಕೆ ಬೆಳೆಗಾರರ ಸಾಲ ಮನ್ನಾ ಆಗುವುದು ಖಚಿತ ಎಂದಿದ್ದಾರೆ.
ನಮಗೆ ರಾಜಕೀಯ ಉದ್ದೇಶ ಮುಖ್ಯವಲ್ಲ. ಒಂದುವೇಳೆ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಜಾರಿ ಮಾಡಿಸುವುದರಿಂದ ತಮ್ಮ ಸ್ಥಾನಕ್ಕೆ ಹಿನ್ನಡೆಯಾದರೂ ಚಿಂತೆಯಿಲ್ಲ. ಅಡಿಕೆ ಬೆಳೆಗಾರರ ಸಾಲ ಮನ್ನಾ ಆಗುವುದು ಮುಖ್ಯ ಹೊರತು ಯಾವುದೇ ಸ್ಥಾನ ಮಾನ ಮುಖ್ಯ ಅಲ್ಲ ಎಂದು ಹೇಳಿದ್ದಾರೆ.
ಈ ಭಾಗದ ಅಡಿಕೆ ಬೆಳೆಗಾರರು ಹಲವಾರು ವರ್ಷಗಳಿಂದ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಅವರ ದಿನನಿತ್ಯದ ಜೀವನ ನಡೆಸಲೂ ಕಷ್ಟವಾಗಿದೆ. ಹಲವಾರು ಕುಟುಂಬಗಳಲ್ಲಿ ಆರ್ಥಿಕ ಸಂಕಷ್ಟಗಳಿಂದ ಮನೆಯ ಹೆಣ್ಣುಮಕ್ಕಳಿಗೆ ಮದುವೆ ಆಗಿಲ್ಲ. ಹಲವಾರು ಯುವಕರು ಹಾಗೂ ಹಿರಿಯ ಅಡಿಕೆ ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವೆಲ್ಲಾ ದೃಶ್ಯ ನಮ್ಮ ಕಣ್ಣಮುಂದಿರುವಾಗ ನ್ಯಾಯಾಂಗ ನಿಂದನೆ ಜಾರಿ ಮಾಡಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.
ಬೆಳೆಗಾರರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಈ ದೇಶದ ನ್ಯಾಯಾಲಯದ ಮೇಲೆನಂಬಿಕೆ ಇಡಬೇಕು. ನ್ಯಾಯಾಲಯದ ಮತ್ತು ಕೇಂದ್ರದ ಮುಖಾಂತರ, ಸಂಕಷ್ಟದಲ್ಲಿರುವ ಅಡಕೆ ಬೆಳೆಗಾರರ ಸಾಲ ಮನ್ನಾ ಮಾಡಿಸುವುದು ಖಚಿತ ಎಂದು ಹೇಳಿದ್ದಾರೆ.

ರೈತರ ಹಿತಾಸಕ್ತಿ ವಿರೋಧ
ಕೊಪ್ಪ: 3 ತಿಂಗಳ ಒಳಗೆ ಅಡಕೆ ಬೆಳೆಗಾರ ಸಾಲ ಮನ್ನಾ ಮಾಡುವಂತೆ ಕೋರ್ಟ್ ಆದೇಶ ನೀಡಿದ್ದರೂ ಮನ್ನಾ ಜಾರಿಮಾಡದ ಕೇಂದ್ರ ಹಣಕಾಸು ಕಾರ್ಯದರ್ಶಿಯ ವಿರುದ್ಧ ನ್ಯಾಯಾಂಗ ನಿಂದನೆ ಜಾರಿಮಾಡಿಸುತ್ತೇನೆ ಎಂದು ರಾಜ್ಯ ಕಿಸಾನ್ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಸಚಿನ್ ಮೀಗಾ ಹೇಳಿಕೆಯಲ್ಲಿ ತಿಳಿಸಿದರು. ಕೇಂದ್ರ ನಾಯಕರು ಹಲವಾರು ಬಾರಿ ಮನವರಿಕೆ ಮಾಡಿದ್ದರೂ ಅಧಿಕಾರಿಗಳು ರೈತರ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ನ್ಯಾಯಾಲಯದ ಆದೇಶದ ಪ್ರಕಾರ 3 ತಿಂಗಳ ಒಳಗೆ ಅಡಕೆ ಬೆಳೆಗಾರರ ಸಾಲ ಮನ್ನಾ ಮಾಡುವಂತೆ ಹಣಕಾಸು ಕಾರ್ಯಾಲಯಕ್ಕೆ ಆದೇಶಿಸಿ 3 ತಿಂಗಳು ಕಳೆದರೂ ಕೇಂದ್ರ ಹಣಕಾಸು ಸಚಿವಾಲಯದ ಅಧಿಕಾರಿಗಳ ನಿರ್ಲಕ್ಷ್ಯ ವಹಿಸಿದ್ದರಿಂದ ಕೇಂದ್ರ ಹಣಕಾಸು ಕಾರ್ಯದರ್ಶಿಗಳ ವಿರುದ್ಧ ನ್ಯಾಯಾಂಗ ನಿಂದನೆಯನ್ನು ಜಾರಿಮಾಡಿಸುವ ನಿರ್ಧಾರವನ್ನು ಕೈಗೊಳ್ಳಲಿದ್ದೇನೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.