ಅಕ್ಮಲ್ ಬಂಧನ ಖಂಡಿಸಿ ಪ್ರತಿಭಟನೆ
ಚಿಕ್ಕಮಗಳೂರು: ರಾಜಕೀಯವಾಗಿ ಬೆಳವಣಿಗೆ ಆಗುತ್ತಿರುವುದನ್ನು ಸಹಿಸಲಾಗದೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದವರು ಸುಳ್ಳು ಆರೋಪ ಹೊರಿಸಿ ಸಿ.ಎನ್. ಅಕ್ಮಲ್ ಅವರನ್ನು ಬಂಧಿಸುವಂತೆ ಮಾಡಿದ್ದಾರೆ. ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಮುಸ್ಲಿಮರು ನಗರದಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಕೆ.ಪಿ. ಹೊನಕೇರಿ ಅವರಿಗೆ ಮನವಿ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಎ.ಆರ್. ಷರೀಫ್, ಜೆಡಿಎಸ್ ಮುಖಂಡ ಅಕ್ಮಲ್ ಅವರನ್ನು ವಿನಾಕಾರಣ ಬಂಧಿಸಲಾಗಿದೆ. ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಇತ್ತೀಚೆಗೆ ನಗರದ ಸಹರಾ ಶಾದಿ ಮಹಲ್ ಬಳಿ ನಡೆದ ಗುಂಪು ಘರ್ಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಂಬಂಧವಿಲ್ಲದಿದ್ದರೂ ರಾಜಕೀಯ ಪಕ್ಷಗಳ ಕುಮ್ಮಕ್ಕಿನಿಂದ ಅಕ್ಮಲ್ ಅವರನ್ನು ಬಂಧಿಸಿರುವುದು ತಪ್ಪು. ತಕ್ಷಣವೇ ಅವರನ್ನು ಬಿಡುಗಡೆಗೊಳಿಸಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮೀರ್ ಅಹ್ಮದ್, ನವಾಬ್ ಜಾನ್, ಜಮೀರ್ ಅಹ್ಮದ್, ಮುನೀರ್ ಅಹ್ಮದ್, ತಬರೀನ್ ಅಹ್ಮದ್, ನಸ್ರೀನ್, ರುಕ್ಸಾನ, ಫಾತಿಮಾ ಹಾಗೂ ಅಕ್ಮಲ್ ಬೆಂಬಲಿಗರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಜೆಡಿಎಸ್ ನೈತಿಕವಾಗಿ ಗೆದ್ದಿದೆ: ರಾಜೇಂದ್ರ
ನರಸಿಂಹರಾಜಪುರ: ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಜೆಡಿಎಸ್ ತನ್ನ ಬಲವರ್ದನೆ ಹೆಚ್ಚಿಸಿಕೊಂಡು ನೈತಿಕವಾಗಿ ಗೆದ್ದಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ ತಿಳಿಸಿದರು.
ಪಟ್ಟಣ ಪಂಚಾಯ್ತಿ ಚನಾವಣೆಯ ಫಲಿತಾಂಶಗಳ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿ, ನರಸಿಂಹರಾಜಪುರ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಜೆಡಿಎಸ್ಗೆ 1256 ಮತ ಬಂದಿದ್ದು ಕಳೆದ ಚುನಾವಣೆಗಿಂತ ಮತಗಳಿಕೆ ಜಾಸ್ತಿಯಾಗಿದೆ. 2 ಸ್ಥಾನಗಳಲ್ಲಿ ಜಯಗಳಿಸಿದ್ದೇವೆ. 4 ವಾರ್ಡುಗಳಲ್ಲಿ 2ನೇ ಸ್ಥಾನಕ್ಕೆ ಬಂದಿದ್ದೇವೆ. ಪಕ್ಷಕ್ಕೆ ಸಂಪನ್ಮೂಲದ ಕೊರತೆ ಇತ್ತು. ಆದರೂ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೆವು.ಬಿಜೆಪಿ ಚುನಾವಣೆಯಲ್ಲಿ ಹೆಚ್ಚು ಹಣ ಖರ್ಚು ಮಾಡಿದೆ. ಜೊತೆಗೆ ಅಧಿಕಾರದಲ್ಲಿತ್ತು. ಆದರೂ, ಬಿಜೆಪಿ ಅಧಿಕಾರಕ್ಕೆ ಬರುವಷ್ಟು ಸ್ಥಾನವನ್ನು ಗೆದ್ದಿಲ್ಲ. ಜೆಡಿಎಸ್ ಮತಗಳಿಕೆಯಲ್ಲಿ ನಿರೀಕ್ಷೆಯಂತೆ ಮತ ಬಂದಿದೆ. ಆದರೆ, ಸೀಟುಗಳು ಕಡಿಮೆಯಾಗಿದೆ. ಜೊತೆಗೆ ಅಲ್ಪ ಸಂಖ್ಯಾತರ ಮತಗಳು ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ಹಂಚಿಹೋಗಿದ್ದು ಇದರ ಲಾಭವನ್ನು ಬಿಜೆಪಿ ಪಡೆದಿದೆ.
ಈ ಚುನಾವಣೆಯಿಂದ ಜೆಡಿಎಸ್ ಮನೋಬಲ ಹೆಚ್ಚಾಗಿದ್ದು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನೈತಿಕ ಬಲ ಹೆಚ್ಚಾಗಿದೆ. ಇಬ್ಬರು ಅಭ್ಯರ್ಥಿಗಳು ಪಕ್ಷಭೇದ ಮರೆತು ಪಟ್ಟಣದ ಅಭಿವೃದ್ಧಿಗೆ ಸಹಕಾರ ನೀಡಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಕಣುವೆ ವಿನಯ, ಇ.ಸಿ. ಜೋಯಿ, ಎಸ್.ಎಸ್. ಶಾಂತಕುಮಾರ್, ಸತ್ಯನಾರಾಯಣ ಶ್ರೇಷ್ಠಿ, ವರ್ಕಾಟೆ ಸುಧಾಕರ್, ಬಿ.ಟಿ. ರವಿ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

