ಅನುದಾನಕ್ಕಾಗಿ ಶಾಸಕ ಎಂಪಿಕೆ ಧರಣಿ!
ಕ.ಪ್ರ.ವಾರ್ತೆ ಬೆಂಗಳೂರು ಮಾ.13
ಸರ್ಕಾರದಿಂದ ಅನುದಾನ ಬಿಡುಗಡೆಗಾಗಿ ಪ್ರತಿಪಕ್ಷ ಸದಸ್ಯರು ಹೋರಾಟ, ಧರಣಿ, ಪ್ರತಿಭಟನೆ ಮಾಡುವುದು ಸಾಮಾನ್ಯ. ಆದರೆ, ಆಡಳಿತ ಸದಸ್ಯರೇ ಅನುದಾನಕ್ಕಾಗಿ ಧರಣಿ ನಡೆಸಿದರೆ ? ಅದೂ ಹಣಕಾಸು ಇಲಾಖೆ ಕಾರ್ಯದರ್ಶಿ ಕಚೇರಿ ಎದುರು.
ಈ ರೀತಿ ಧರಣಿ ನಡೆಸಿದ ಅನುದಾನ ಬಿಡುಗಡೆ ಆದೇಶ ಪಡೆದುಕೊಂಡವರು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ.
ಬುಧವಾರ ಬೆಳಗ್ಗೆ ಏಕಾಏಕಿ ಹಣಕಾಸು ಇಲಾಖೆ ಕಾರ್ಯದರ್ಶಿಗಳ ಕಚೇರಿ ಬಳಿ ಆಗಮಿಸಿದ ಕುಮಾರಸ್ವಾಮಿ ಅವರು ಕಚೇರಿ ಬಾಗಿಲ ಬಳಿ ದಿಢೀರ್ ಧರಣಿ
ಆರಂಭಿಸಿದರು. ಇದನ್ನು ಗಮನಿಸಿದ ಎಲ್ಲರಿಗೂ ಒಂದು ಕ್ಷಣ ಅಚ್ಚರಿ. ಇದೇನು ಶಾಸಕರೊಬ್ಬರು ಈ ರೀತಿ ಅಧಿಕಾರಿಗಳ ಕಚೇರಿ ಎದುರು ಧರಣಿ ನಡೆಸುತ್ತಾರೆ ಎಂದು ಕುತೂಹಲದಿಂದ ಗಮನಿಸಿದರು.
ಇದನ್ನು ಗಮನಿಸಿದ ಹಣಕಾಸು ಇಲಾಖೆ ಕಾರ್ಯದರ್ಶಿಗಳು ತಕ್ಷಣ ಕಚೇರಿಯಿಂದ ಹೊರಗೆ ಬಂದು ಒಳಗೆ ಬರುವಂತೆ ಕರೆದರು. ಆದರೆ, ಬಡಪೆಟ್ಟಿಗೆ ಕುಮಾರಸ್ವಾಮಿ ಕೇಳಬೇಕಲ್ಲ. ನನಗೆ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರೂ ನೀವು ಹಣ ಕೊಡುತ್ತಿಲ್ಲ ಎಂದು ಆಕ್ಷೇಪಿಸಿದರು.
ನಂತರ ಅವರನ್ನು ಸಮಾಧಾನಪಡಿಸಿದ ಅಧಿಕಾರಿ ಅವರನ್ನು ಕರೆದುಕೊಂಡು ತಮ್ಮ ಕಚೇರಿಯೊಳಗೆ ಹೋದರು. ಅಲ್ಲಿಂದ ಬರುವಾಗ ಕುಮಾರಸ್ವಾಮಿ ಅವರ ಕೈಯ್ಯಲ್ಲಿ ಹಣ ಬಿಡುಗಡೆ ಆದೇಶವಿತ್ತು.
ಪ್ರಕರಣವೇನು?: ಮೂಡಿಗೆರೆ ಕ್ಷೇತ್ರದ ಅಭಿವೃದ್ಧಿಗೆ 10 ಕೋಟಿ ಬಿಡುಗಡೆ ಮಾಡುವುದಾಗಿ ಶಾಸಕ ಕುಮಾರಸ್ವಾಮಿ ಅವರಿಗೆ ಭರವಸೆ ನೀಡಿದ್ದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಅದರಂತೆ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಹಣ ಬಿಡುಗಡೆ ಮಾಡುವಂತೆ ಸೂಚಿಸಿದ್ದರು.
ಆದರೆ, ಮುಖ್ಯಮಂತ್ರಿಗಳ ಸೂಚನೆ ಹೊರಬಿದ್ದು 2 ತಿಂಗಳು ಕಳೆದರೂ ಅನುದಾನ ಬಿಡುಗಡೆಯಾಗಿರಲಿಲ್ಲ.
ಈ ಬಗ್ಗೆ ಕುಮಾರಸ್ವಾಮಿ ಅನೇಕ ಬಾರಿ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ತೀವ್ರ ಆಕ್ರೋಶಗೊಂಡ ಕುಮಾರಸ್ವಾಮಿ ಹಣಕಾಸು ಇಲಾಖೆ ಕಾರ್ಯದರ್ಶಿ ಕಚೇರಿ ಎದುರು ಧರಣಿ ನಡೆಸಿ ಹಣ ಬಿಡುಗಡೆ ಆದೇಶದ ಪ್ರತಿ ಪಡೆದುಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

