ಶಾಲಾ ಕಾಂಪೌಂಡ್ ಕಳಪೆ: ಪರಿಶೀಲನೆ ಭರವಸೆ
ಕ.ಪ್ರ ವಾರ್ತೆ, ಕಡೂರು, ಮಾ. 15
ಶಾಲಾ ಕಾಂಪೌಂಡುಗಳ ಕಳಪೆ ಕಾಮಗಾರಿ, ಕುಡಿಯುವ ನೀರಿಗೆ ತೊಂದರೆಯಾಗಿದ್ದರೂ ಕ್ರಮ ಕೈಗೊಳ್ಳುವಲ್ಲಿ ವಿಫಲ, ಜನಪ್ರತಿನಿಧಿ ಗಮನಕ್ಕೆ ತಾರದೆ ಕೊಳೆವೆಬಾವಿ ಕೊರೆಸುವುದು, ಅಂಗನವಾಡಿ ಕೇಂದ್ರಗಳಲ್ಲಿ ಮೇಲ್ವಿಚಾರಕರು ಇರದೆ ಭೇಟಿ ಪುಸ್ತಕ ಕೂಡ ನಾಪತ್ತೆ, ಮಳೆ ಬಾರದೆ ಬೇಸಿಗೆ ಮುಂದುವರಿದಲ್ಲಿ ಗೋಶಾಲೆಗಳ ಮರು ಆರಂಭಕ್ಕೆ ಕ್ರಮ.....
ಇವು ಶುಕ್ರವಾರ ಕಡೂರು ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಅಧ್ಯಕ್ಷ ಎನ್.ಓಂಕಾರಮೂರ್ತಿ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯ ಪ್ರಸ್ತಾಪಗೊಂಡ ವಿಷಯಗಳು.
ಬೇಡಿಕೆ ತಕ್ಕಂತೆ ಕೊಳವೆ ಬಾವಿ: ಕುಡಿಯುವ ನೀರಿನ ಚರ್ಚೆ ಆರಂಭವಾಗುತ್ತಿದ್ದಂತೆ ತಾ.ಪ.ಸದಸ್ಯರಾದ ಬಸವರಾಜಪ್ಪ ಹಾಗು ಆರ್.ಶಿವಕುಮಾರ್ ನೀರಿನ ತೀವ್ರ ಸಮಸ್ಯೆ ಇರುವ ಕಡೆ ಕ್ರಮ ಕೈಗೊಳ್ಳದೆ ಆಯಾ ತಾ.ಪ.ಸದಸ್ಯರ ಗಮನಕ್ಕೂ ತಾರದೆ ಹೊಸ ಕೊಳವೆಬಾವಿ ಕೊರೆಯಲಾಗುತ್ತಿದೆ ಎಂದು ಆರೋಪಿಸಿದಾಗ, ಜಿ.ಪ.ಎಇಇ ಪ್ರಭಾಕರರಾವ್, ಬೇಡಿಕೆಗೆ ತಕ್ಕಂತೆ ತುಂಬಾ ಅಗತ್ಯವಿರುವ ಕಡೆ ಕೊಳವೆಬಾವಿ ಕೊರೆಸಲಾಗಿದೆ ಎಂದರು.
ಸದಸ್ಯೆ ಯಶೋಧಾರವರು ಬಿ.ಕೆ.ಹೊಸರು ಗ್ರಾಮದಲ್ಲಿ 15 ದಿನಗಳಿಂದ ಕುಡಿಯುವ ನೀರಿಗೆ ತುಂಬಾ ತೊಂದರೆ ಉಂಟಾಗಿರುವ ಬಗ್ಗೆ ಗ್ರಾ.ಪ. ಪಿಡಿಒ ಗಮನಕ್ಕೆ ತಂದರೂ ಸಹ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ ಎಂದರೆ, ಎಸ್.ಸೋಮನಹಳ್ಳಿಯಲ್ಲಿ 4 ಕೈ ಪಂಪು ಹಾಳಾಗಿದ್ದರೂ ಕೂಡ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ ಎಂದು ಸದಸ್ಯೆ ಶಕುಂತಲಾ ದೂರಿದರು.
ಬಿಲ್ ಬಾಕಿ: ಇತ್ತ ಅಣೇಗೆರೆ ಸದಸ್ಯ ನಿಂಗಪ್ಪ, ಆಗಿರುವ ಕಾಮಗಾರಿ ಬಿಲ್ಲುಗಳನ್ನು ಬಾಕಿ ಉಳಿಸಿಕೊಂಡಿರುವುದನ್ನು ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಕಾರ್ಯನಿರ್ವಾಹಕ ಅಧಿಕಾರಿ ಮೂರ್ತಿ, ಎಲ್ಲ ಅಧಿಕಾರಿಗಳು ಈ ತಿಂಗಳ 25 ರೊಳಗೆ ಬಾಕಿಯಿರುವ ಎಲ್ಲ ಕಾಮಗಾರಿಗಳ ಬಿಲ್ಲುಗಳನ್ನು ಮಾಡಿಕೊಡಬೇಕು ಎಂದು ಸೂಚಿಸಿದರು.
ಹಿರೇನಲ್ಲೂರು ಸದಸ್ಯ ಜಿ.ಪಿ.ಪ್ರಭುಕುಮಾರ್ ಮಾತನಾಡಿ, ಹಿರೇನಲ್ಲೂರು ಶಾಲಾ ಕಾಂಪೌಂಡ್ ಕಾಮಗಾರಿ ಕಳಪೆಯಾಗಿದೆ. ಈ ಕಾಂಪೌಂಡ್ ಕೆಡವಿ ಮರು ಕಾಮಗಾರಿ ಮಾಡುವತನಕ ಬಿಲ್ಲು ನೀಡಕೂಡದು ಎಂದು ಆಗ್ರಹಿಸಿದರು.
ಈ ಕುರಿತು ಪರೀಶೀಲಿಸಲಾಗುವುದು ಎಂದು ಅಧಿಕಾರಿಗಳು ಉತ್ತರಿಸಿದರು.
ಪಡಿತರ ನೀಡುತ್ತಿಲ್ಲ: ಅಂಗನವಾಡಿ ಕೇಂದ್ರಗಳಿಂದ ಗರ್ಭಿಣಿಯರಿಗೆ ಪಡಿತರವನ್ನು ಸರಿಯಾಗಿ ವಿತರಿಸುತ್ತಿಲ್ಲ. ಇಲ್ಲಿಯ ಕೇಂದ್ರಗಳಿಗೆ ಭೇಟಿ ನೀಡಿದಾಗ ಭೇಟಿ ಪುಸ್ತಕ ಕೂಡ ನಾಪತ್ತೆಯಾಗಿರುತ್ತದೆ ಎಂದು ಸದಸ್ಯರಾದ ನಿಂಗಪ್ಪ ಮತ್ತು ಪ್ರಭುಕುಮಾರ್ ದೂರಿದಾಗ, ಸಿಡಿಪಿಒ ಓಂಕಾರಪ್ಪ ಅಂತಹ ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕರಿಗೆ ಎಚ್ಚರಿಕೆ ನೀಡಲಾಗುವುದೆಂದು ಉತ್ತರಿಸಿದರು.
ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಲಿಂಗರಾಜು, ಬರ ಪರಿಸ್ಥಿತಿ ಮುಂದುವರಿದಲ್ಲಿ ಮತ್ತೆ ಗೋಶಾಲೆ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಸದಸ್ಯರ ಪ್ರಶ್ನೆಗೆ ಉತ್ತರಿಸಿದರು.
ಅನುದಾನ ದುರ್ಬಳಕೆ: ಸದಸ್ಯೆ ಎ.ಇ.ರತ್ನಮ್ಮ ಮಾತನಾಡಿ, ಬೇರೆ ಉದ್ದೇಶಕ್ಕಿದ್ದ 2 ಲಕ್ಷ ರು. ಅನುದಾನವನ್ನು ಸದಸ್ಯರ ಗಮನಕ್ಕೆ ತಾರದೆ ಬೇರೆ ಕಾಮಗಾರಿಗೆ ಬಳಸಲಾಗಿದೆ ಎಂದು ಆರೋಪಿಸಿದರು.
ಉಳಿದಂತೆ ಕೃಷಿ, ತೋಟಗಾರಿಕೆ, ಮೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಚರ್ಚೆ ನಡೆಯಿತು. ಸಭೆಯಲ್ಲಿ ಸದಸ್ಯರಾದ ಪ್ರವೀಣ್, ವೈ.ಕೆ.ಬಸಪ್ಪ, ಸುನಿತಾ ಹಾಗು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

