ಚಿಕ್ಕಮಗಳೂರು

ಅಥ್ಲೆಟಿಕ್ಸ್ ಅರ್ಹತಾ ಸುತ್ತು: 5 ಚಿನ್ನ, 3 ಬೆಳ್ಳಿ

Published On :

ಕಪ್ರ ವಾರ್ತೆ, ಚಿಕ್ಕಮಗಳೂರು, ಮಾ. 17
ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನಲ್ಲಿ ಶನಿವಾರ ನಡೆದ ಅಂಧರ ವಿಶೇಷ ಒಲಂಪಿಕ್ಸ್ ಕ್ರೀಡಾ ಕೂಟದಲ್ಲಿ 4 ಚಿನ್ನ ಹಾಗೂ ಬೆಂಗಳೂರಿನಲ್ಲಿ ಮಾ. 14 ರಂದು ಜರುಗಿದ ಅಂತರಾಷ್ಟ್ರೀಯ ಅಥ್ಲೆಟಿಕ್ಸ್ ಅರ್ಹತಾ ಸುತ್ತಿನ ಸ್ಪರ್ಧೆಗಳಲ್ಲಿ 5 ಚಿನ್ನ, 3 ಬೆಳ್ಳಿ ಮತ್ತು 1 ಕಂಚಿನ ಪದಕಗಳನ್ನು ಬಾಚುವ ಮೂಲಕ ನಗರದ ಆಶಾಕಿರಣ ಅಂಧಮಕ್ಕಳ ಶಾಲೆಯ ವಿದ್ಯಾರ್ಥಿಗಳು ಮತ್ತೊಮ್ಮೆ ತಮ್ಮ ಅದ್ಭುತ ಪ್ರತಿಭೆಯನ್ನು ಜಗಜ್ಜಾಹೀರುಗೊಳಿಸಿದ್ದಾರೆ.
ಕಳೆದ ವರ್ಷ ಜುಲೈನಲ್ಲಿ ಅಮೆರಿಕ, ಟರ್ಕಿ ಮತ್ತು ಮಲೇಶಿಯಾದಲ್ಲಿ ನಡೆದ ಅಂಧರ ವಿಶ್ವ ಅಥ್ಲೆಟಿಕ್ಸ್‌ನಲ್ಲಿ 3 ಚಿನ್ನ ಸೇರಿದಂತೆ 6 ಪದಕ ಹಾಗೂ ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ಜರುಗಿದ 18ನೇ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ 21 ಚಿನ್ನ ಸೇರಿದಂತೆ 36 ಪದಕಗಳನ್ನು ಬಾಚುವ ಮೂಲಕ ಆಶಾಕಿರಣ ಶಾಲೆಯ ವಿದ್ಯಾರ್ಥಿಗಳು ವಿಶ್ವದ ಗಮನ ಸೆಳೆದಿದ್ದರು.
ಸೌಮ್ಯಗೆ ಚಿನ್ನದ ಪದಕ: ಇದೇ ತಿಂಗಳ 13 ಮತ್ತು 14 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಅಥ್ಲೆಟಿಕ್ಸ್ ಅರ್ಹತಾ ಸುತ್ತಿನ ಸ್ಪರ್ಧೆಗಳ 100-200 ಮತ್ತು 300 ಮೀ. ಓಟದ ಮೂರೂ ಸ್ಪರ್ಧೆಗಳಲ್ಲಿ ಆಶಾಕಿರಣದ ವಿದ್ಯಾರ್ಥಿನಿ ಸೌಮ್ಯ ಚಿನ್ನದ ಪದಕ ಗಳಿಸಿದ್ದಾರೆ.
200 ಮತ್ತು 400 ಮೀ. ಓಟದಲ್ಲಿ ಚಿನ್ನ ಹಾಗೂ 800 ಮೀ. ಓಟದಲ್ಲಿ ಬೆಳ್ಳಿ ಪದಕ ಗಳಿಸುವ ಮೂಲಕ ಜೆ.ಎಂ. ಶವಾದ್ ಮತ್ತು 200 ಮೀಟರ್‌ನಲ್ಲಿ ಕಂಚು, 400 ಮತ್ತು 800 ಮೀಟರ್‌ನಲ್ಲಿ ಬೆಳ್ಳಿ ಪದಕಗಳನ್ನು ಬಾಚುವ ಮೂಲಕ ಮಂಜಪ್ಪ ಮಿಂಚಿದರು.
ತಲಾ ಎರಡೆರಡು ಚಿನ್ನದ ಪದಕ: ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನಲ್ಲಿ ಶನಿವಾರ ನಡೆದ ಅಂಧರ ವಿಶೇಷ ಒಲಂಪಿಕ್ಸ್ ಕ್ರೀಡಾಕೂಟದ 100 ಮತ್ತು 200 ಮೀಟರ್ ಓಟದ ಸ್ಪರ್ಧೆಗಳಲ್ಲಿ  ವಿದ್ಯಾರ್ಥಿಗಳಾದ ಮಂಜಪ್ಪ ಮತ್ತು ರಾಶಿ ತಲಾ ಎರಡೆರಡು ಚಿನ್ನದ ಪದಕಗಳನ್ನು ಗಳಿಸಿದರು.
ಪದಕಗಳೊಂದಿಗೆ ಭಾನುವಾರ ಬೆಳಿಗ್ಗೆ ನಗರಕ್ಕೆ ಹಿಂತಿರುಗಿದ ಕ್ರೀಡಾಪಟುಗಳನ್ನು ವಿದ್ಯಾರ್ಥಿಗಳು ಆರತಿ ಎತ್ತಿ ಸಂಭ್ರಮದಿಂದ ಶಾಲೆಗೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣೇಗೌಡ ವಿದ್ಯಾರ್ಥಿಗಳ ಈ ಸಾಧನೆ ಜಿಲ್ಲೆಗೆ ಮತ್ತು ಸಂಸ್ಥೆಗೆ ಕೀರ್ತಿ ತರುವುದರ ಜೊತೆಗೆ ತಮಗೆ ಅತ್ಯಂತ ಹೆಮ್ಮೆ ಮತ್ತು ತೃಪ್ತಿ ತಂದಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.