ಕೀಟನಾಶಕ ಸೇವಿಸಿ ಮಹಿಳೆ ಆತ್ಮಹತ್ಯೆ
ಶೃಂಗೇರಿ: ತಾಲೂಕಿನ ಅಡ್ಜಗೆದ್ದೆ ಪಂಚಾಯಿತಿ ಕೆಳವಳ್ಳಿಯಲ್ಲಿ ಮಹಿಳೆಯೊಬ್ಬರು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಶ್ರೀಮತಿ (42) ಬುಧವಾರ ಟಿಮೇಟ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾತಾದರೂ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಸಾವನ್ನಪ್ಪಿದ್ದಾರೆ.
ಮೃತರು ಬೆಳೆ ಸಾಲ ಮಾಡಿದ್ದು ಸಾಲ ಭಾದೆಯಿಂದ ಚಿಂತೆಗೊಳಗಾಗಿದ್ದು ಸಾವಿಗೆ ಕಾರಣವೆನ್ನಲಾಗಿದೆ. ಪತಿ, ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭಾರಿ ಗಾಳಿಗೆ ಲಕ್ಷಾಂತರ ರು. ನಷ್ಟ
ಕ.ಪ್ರ.ವಾರ್ತೆ, ಕಡೂರು, ಮಾ.17 ಬಲವಾಗಿ ಬೀಸಿದ ಭಾರಿ ಗಾಳಿಯ ಆರ್ಭಟಕ್ಕೆ ಸುಮಾರು ಎಂಟಕ್ಕೂ ಹೆಚ್ಚು ಮನೆಗಳು ಮತ್ತು ರೇಶ್ಮೆಯ ಶೆಡ್ಡಿನ ಹೆಂಚುಗಳು ಹಾನಿಯಾಗುವ ಮೂಲಕ ಸುಮಾರು ರು. 2 ಲಕ್ಷ ನಷ್ಟ ಸಂಭವಿಸಿರುವ ಘಟನೆ ವರದಿಯಾಗಿದೆ.
ಕಡೂರು ತಾಲೂಕು ಸಿಂಗಟಗೆರೆ ಹೋಬಳಿಯ ಶೆಟ್ಟಿಹಳ್ಳಿಯ ಗೊಲ್ಲರಹಟ್ಟಿಯಲ್ಲಿ ಭಾನುವಾರ ರಾತ್ರಿ 8 ಗಂಟೆಗೆ ಆರಂಭಗೊಂಡ ಮಳೆ ಕೇವಲ 10 ನಿಮಿಷ ಮಾತ್ರ ಬಂದಿದ್ದು, ಭಾರಿ ಗಾಳಿ ಬೀಸುವ ಮೂಲಕ ಗೊಲ್ಲರಹಟ್ಟಿಯ ರಂಗಪ್ಪ, ಬಸವರಾಜಪ್ಪ, ಶಂಕರಪ್ಪ, ಶಿವಣ್ಣ, ರಮೇಶ್, ಜಂಬಣ್ಣ, ವೀರಪ್ಪ, ಕದಿರಪ್ಪನವರಿಗೆ ಸೇರಿದ ಎಂಟು ಮನೆಗಳ ಹೆಂಚು ಕಿತ್ತುಹೋಗಿ ದೂರಕ್ಕೆ ಹಾರಿ ಹೋಗಿ ಬಿದ್ದಿವೆ.
ರೇಶ್ಮೆ ಹುಳ ಸಾಕುವ ಶೆಡ್ಡ್ ಕೂಡ ಕಿತ್ತುಹೋಗಿದೆ. ಈ ಕುರಿತು ರೇಶ್ಮೆ ಶೆಡ್ಡಿನ ಮಾಲೀಕ ಶೆಟ್ಟಿಹಳ್ಳಿ ಮಲ್ಲಿಕಾರ್ಜುನ್ ಮಾಹಿತಿ ನೀಡಿದರು. ಸಂಜೆ ಮೋಡದ ವಾತಾವರಣವಿತ್ತು. ರಾತ್ರಿ 8 ಗಂಟೆಯ ಸಮಯದಲ್ಲಿ ಸಣ್ಣದಾಗಿ ಕೇವಲ 10 ನಿಮಿಷ ಮಾತ್ರ ಮಳೆ ಬಂದ ನಂತರ ಸ್ವಲ್ಪ ಹೊತ್ತಿನಲ್ಲಿ ಭಾರಿ ಗಾಳಿ ಬೀಸಲು ಆರಂಭಿಸಿತು.
ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಹೆಂಗಸರು ಮಕ್ಕಳು ಕೂಗಾಡುತ್ತಾ ಹೊರಗೋಡಿ ಬಂದು ನಿಂತು ನೋಡುವಷ್ಟರಲ್ಲಿ ಗಾಳಿ ಆರ್ಭಟ ಇನ್ನೂ ಹೆಚ್ಚಾಗಿ ಮನೆ ಹೆಂಚುಗಳು ಮತ್ತು ಪಿಕಾಸುಗಳು ಕಿತ್ತು ಹೋಗಿ ಸ್ವಲ್ಪ ದೂರಕ್ಕೆ ಗಾಳಿಯು ಹೊತ್ತೊಯ್ದಿತು ಎಂದರು.
ಮನೆಗಳು ಸೇರಿದಂತೆ ಸುಮಾರು 2 ಲಕ್ಷರೂ ನಷ್ಟ ಸಂಭವಿಸಿದೆ ಈ ಬಗ್ಗೆ ಸಂಭಂದಿಸಿದ ಕಂದಾಯಾಧಿಕಾರಿಗಳಿಗೆ ವಿವರ ನೀಡಲಾಗುವುದು ಎಂದು ಹೇಳಿದ್ದಾರೆ.
ಕಾರು ಡಿಕ್ಕಿ: ಗಾಯ
ಶೃಂಗೇರಿ: ಶಿವಮೊಗ್ಗ -ಮಂಗಳೂರು ರಾಷ್ಟ್ರೀಯ ಹೆದ್ದಾರಿ 13 ರ ನೆಮ್ಮಾರು ಮುಖ್ಯ ರಸ್ತೆಯಲ್ಲಿ ಇಂಡಿಕಾ ಕಾರೊಂದು ಮಹಿಳೆಗೆ ಡಿಕ್ಕಿ ಹೊಡೆದು ತೀವ್ರ ಗಾಯಗೊಂಡ ಘಟನೆ ಭಾನುವಾರ ಸಂಜೆ ನಡದಿದೆ. ಗಿರಿಜನ ಆಶ್ರಮ ಹಾಸ್ಟೆಲ್ ಮುಂಬಾಗದಲ್ಲಿ ಹಾಸ್ಟೆಲ್ ವಾರ್ಡನ್ ಕವಿತಾ ಎಂಬವರಿಗೆ ಡಿಕ್ಕಿ ಹೊಡೆದಿದ್ದರಿಂದ ಅವರು ಗಾಯಗೊಂಡರು. ಪಟ್ಟಣದ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ತುರ್ತು ಚಿಕಿತ್ಸೆಗೆ 108ಗೆ ಕರೆ ಮಾಡಿ ಅರ್ಧ ಗಂಟೆ ಕಾಯುತ್ತಿದ್ದರೂ 108 ವಾಹನ ಬಾರದ ಕಾರಣ ಸ್ಥಳೀಯರು ಆಕ್ರೋಶಗೊಂಡು ಕೂಡಲೇ ಗಾಯಾಳುವನ್ನು ಖಾಸಗಿ ವಾಹನದಲ್ಲಿ ಆಸ್ಪತ್ರೆಯತ್ತ ಕರೆದೊಯ್ದರು.
ಕಾರು ಹೊಂಡಕ್ಕೆ ಉರುಳಿ ಹಲವರಿಗೆ ಗಾಯ
ಶೃಂಗೇರಿ: ಮಂಗಳೂರು ಶಿವಮೊಗ್ಗ ರಾ.ಹೆ.13 ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೆರೆಕಟ್ಟೆ ಬಳಿ ಕಾರೊಂದು ನಿಯಂತ್ರಣ ತಪ್ಪಿ ಹೊಂಡಕ್ಕುರುಳಿ ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. ಗಾಯಗೊಂಡ ಪ್ರಯಾಣಿಕರನ್ನು ಚಿಕಿತ್ಸೆಗೆ ಪಟ್ಟಣದ ಆಸ್ಪತ್ರೆ ದಾಖಲಿಸಲಾಯಿತು. ಪ್ರಾಣಾಪಾಯದಿಂದ ಪಾರಾಗಿದ್ದಾರೆ ಪ್ರಕರಣ ದಾಖಲಾಗಿದೆ.
ಬೆಂಕಿ ಹಚ್ಚಿಕೊಂಡು ವ್ಯಕ್ತಿ ಆತ್ಮಹತ್ಯೆ
ಶೃಂಗೇರಿ: ತಾಲೂಕಿನ ಕಲ್ಕಟ್ಟೆ ಎಂಬಲ್ಲಿ ವ್ಯಕ್ತಿಯೊಬ್ಬರು ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾದ ಘಟನೆ ಶನಿವಾರ ನಡೆದಿದೆ.
ಕಲ್ಕಟ್ಟೆ ನಿವಾಸಿ ಶಶಿಕುಮಾರ್ (32) ಶನಿವಾರ ಮಧ್ಯಾಹ್ನ ಮನೆಯಲ್ಲಿ ಬೆಂಕಿ ಹಚ್ಚಿಕೊಂದ್ದರು. ಬೆಂಕಿಯಲ್ಲಿ ಸುಟ್ಟು ಕರಕಲಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಪತ್ನಿ, ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

