ಪಾರ್ಕ್ ಜಾಗ ಒತ್ತುವರಿ ತೆರವು
ಕಪ್ರ ವಾರ್ತೆ, ಚಿಕ್ಕಮಗಳೂರು, ಮಾ, 17
ಪಾರ್ಕ್ ಜಾಗಗಳ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಗರಸಭೆ ಮುಂದುವರೆಸಿದೆ. ಇಲ್ಲಿನ ಉಪ್ಪಳ್ಳಿಯ ಮುಖ್ಯ ರಸ್ತೆಗೆ ಹೊಂದಿಕೊಂಡಿದ್ದ ಪಾರ್ಕ್ ಜಾಗವನ್ನು ಒತ್ತುವರಿ ಮಾಡಿರುವುದನ್ನು ಭಾನುವಾರದಂದು ಖುಲ್ಲಾಗೊಳಿಸಿದರು.
ಈ ಜಾಗದಲ್ಲಿ ಪೆಟ್ರೋಲ್ ಬಂಕ್ ನಿರ್ಮಾಣ ಮಾಡಲು ಸಿದ್ಧತೆ ಮಾಡಿಕೊಂಡಿದ್ದು, ಇಲ್ಲಿ ನಿರ್ಮಾಣವಾಗಿದ್ದ ಗೋಡೆಯನ್ನು ತೆರವುಗೊಳಿಸಿದರು. ನಗರಸಭೆ ವ್ಯಾಪ್ತಿಯ ಉಪ್ಪಳ್ಳಿ ಗ್ರಾಮದ ಸ.ನಂ. 129 ರಲ್ಲಿ ಮಂಗಳೂರಿನ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಸಂಸ್ಥೆ ಬಂಕ್ ನಿರ್ಮಾಣಕ್ಕೆ ನಗರಸಭೆಯಿಂದ ಪರವಾನಗಿ ಪಡೆದು ಸ.ನಂ. 130ರ ಪಾರ್ಕ್ ಜಾಗ ಒತ್ತುವರಿ ಮಾಡಿದ್ದನ್ನು ಭಾನುವಾರ ಜೆಸಿಬಿ ಮೂಲಕ ತೆರವುಗೊಳಿಸಿದರು.
2800 ಅಡಿ: ಖಾಸಗಿ ವ್ಯಕ್ತಿಗೆ ಸೇರಿದ ಈ ಜಾಗದಲ್ಲಿ ಭಾರತ್ ಪೆಟ್ರೋಲಿಯಂ ಬಂಕ್ ನಿರ್ಮಾಣ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅವರ ನಿವೇಶನಕ್ಕೆ ಹೊಂದಿಕೊಂಡಂತೆ ಉದ್ಯಾನವನಕ್ಕೆ ಸೇರಿದ ಜಾಗವಿದೆ. ಅದಕ್ಕೆ ಯಾವುದೇ ರೀತಿಯ ರಕ್ಷಣಾ ಬೇಲಿ ಇಲ್ಲ. ಅದುದರಿಂದ ಈ ಜಾಗವನ್ನು ಒತ್ತುವರಿ ಮಾಡಿಕೊಂಡು ಪೆಟ್ರೋಲ್ ಬಂಕ್ ನಿರ್ಮಾಣ ಮಾಡಲಾಗುತಿತ್ತು. ಈ ಜಾಗದ ಒಟ್ಟು ಸುತ್ತಳತೆ 2800 ಅಡಿ, ಅಂದರೆ ಹಾಲಿ ಇದರ ಮೌಲ್ಯ ಸುಮಾರು 50 ಲಕ್ಷ ಇರಬಹುದು.
ಅಕ್ರಮವಾಗಿ ನಿರ್ಮಾಣ: ಪಾರ್ಕ್ ಜಾಗದಲ್ಲಿ ಪೆಟ್ರೋಲ್ ಬಂಕ್ ನಿರ್ಮಾಣ ಮಾಡುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಎಚ್.ಡಿ. ಕುಮಾರಸ್ವಾಮಿ ಅಭಿಮಾನಿಗಳ ಸಂಘದ ನೇತೃತ್ವದಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಈ ಸಂಬಂಧ ಒತ್ತುವರಿ ತೆರವುಗೊಳಿಸುವುದಾಗಿ ಅಂದು ಭರವಸೆ ನೀಡಿದ್ದ ಅಧಿಕಾರಿಗಳು ಭಾನುವಾರ ಬೆಳಿಗ್ಗೆ ಜೆಸಿಬಿಯೊಂದಿಗೆ ಆಗಮಿಸಿ, ಪಾರ್ಕ್ ಜಾಗಕ್ಕೆ ಟ್ರಂಚ್ ಹೊಡೆದು ಅಕ್ರಮವಾಗಿ ನಿರ್ಮಾಣ ಮಾಡಿದ್ದ ಗೋಡೆಯನ್ನು ತೆರವುಗೊಳಿಸಿದರು. ಇದಕ್ಕೆ ಹೊಂದಿಕೊಂಡಂತೆ ರಸ್ತೆಯನ್ನು ನಿರ್ಮಿಸಿದರು.
ಪೌರಾಯುಕ್ತ ಎಚ್.ಜಿ. ಪ್ರಭಾಕರ್ ಇದೇ ಸಂದರ್ಭದಲ್ಲಿ ಮಾತನಾಡಿ, ಯಾವುದೇ ಖಾಸಗಿ ವ್ಯಕ್ತಿಗಳು ಸರ್ಕಾರಿ ಜಾಗ ಒತ್ತುವರಿ ಮಾಡಿರುವುದನ್ನು ತಮ್ಮ ಗಮನಕ್ಕೆ ತಂದರೆ ಯಾರ ಪ್ರಭಾವಕ್ಕೂ ಮಣಿಯದೆ ತೆರವುಗೊಳಿಸಲಾಗುವುದು ಎಂದರು. ನಗರಸಭೆಯ ಕಂದಾಯಾಧಿಕಾರಿ ಬಸವರಾಜು, ಆಧೀಶ್, ಸುನೀಲ್ ಈ ಸಂದರ್ಭದಲ್ಲಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

