ಚಿಕ್ಕಮಗಳೂರು

ಪ್ರಾಣ ಹಿಂಡುವ ಗುಂಡಿರಸ್ತೆ

Published On :

ಕ.ಪ್ರ.ವಾರ್ತೆ,ಶೃಂಗೇರಿ, ಮಾ.20
ತಾಲೂಕಿನ ಬೇಗಾರು ಪಂಚಾಯಿತಿ ತಾರೋಳ್ಳಿಕೊಡಿಗೆ- ಬಿದರಗೋಡು ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣ ಕಾಣದೆ ಹಲವು ವರ್ಷಗಳೇ ಕಳೆದಿವೆ. ಕೆಲ ದೂರದವರೆಗೆ ಡಾಂಬರ್ ರಸ್ತೆ ಸಂಪೂರ್ಣ ಹೊಂಡಗಳಿಂದ ಕೂಡಿದ್ದು, ರಸ್ತೆ ತುಂಬಾ ಗುಂಡಿಗಳದ್ದೇ ಸಾಮ್ರಾಜ್ಯವಾಗಿದೆ.
ಮಳೆಗಾಲದಲ್ಲಿ ಮಳೆ ನೀರೆಲ್ಲ ಹೊಂಡದಲ್ಲಿ ತುಂಬಿ ನಿಲ್ಲುತ್ತದೆ. ಇನ್ನುಳಿದ ರಸ್ತೆ ಜಲ್ಲಿ ಕಲ್ಲು ರಸ್ತೆ. ಡಾಮರು  ಕಾಣದೇ ದಶಕಗಳೇ ಕಳೆದಿವೆ. ಜಲ್ಲಿಕಲ್ಲುಗಳು ಕಿತ್ತೆದ್ದಿವೆ. ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿವೆ. ಮಳೆಗಾಲದಲ್ಲಿ ಮಳೆ ನೀರೆಲ್ಲ ರಸ್ತೆಯ ಮೇಲೆಯೇ ಹರಿಯುತ್ತದೆ.
ನಕ್ಸಲ್ ಪ್ರಭಾವಿತ ಪ್ರದೇಶ: ಬೇಗಾರು ಪಂಚಾಯಿತಿ ವ್ಯಾಪ್ತಿಗೆ ಸೇರುವ ಈ ಪ್ರದೇಶ ನಕ್ಸಲ್ ಪ್ರಭಾವಿತ ಪ್ರದೇಶವಾಗಿದ್ದು, ಮೂಲ ಸೌಕರ್ಯದಿಂದ ವಂಚಿತವಾಗಿದೆ. ಬೈಲುಬಾರು, ಬುಡಡಿ ಕೊಪ್ಪ, ಕೋಟೆ, ಶುಂಠಿಹಕ್ಲು ಸೇರಿದಂತೆ ಸುತ್ತಮುತ್ತ ಹತ್ತು ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇಲ್ಲಿ ಬಸ್ ಸಂಚಾರ ವ್ಯವಸ್ಥೆಯಿಲ್ಲ. ಖಾಸಗಿ ವಾಹನಗಳನ್ನು ಬಿಟ್ಟರೆ ಕಾಲ್ನಡಿಗೆಯೇ ಗತಿ.
ಶಾಲಾ ಕಾಲೇಜು, ಆಸ್ಪತ್ರೆ ಸೇರಿದಂತೆ ಇತರೆ ಕಾರ್ಯಗಳಿಗೆ ಬರಬೇಕಾದರೆ ಗ್ರಾಮಸ್ಥರು ಕಾಲ್ನಡಿಗೆಯಲ್ಲಿಯೇ ಬರಬೇಕು. ತುರ್ತು ಚಿಕಿತ್ಸೆಗೆ ಬರಬೇಕಾದರೆ ಪರದಾಡುವ ಪರಿಸ್ಥಿತಿ. ದುಪ್ಪಟ್ಟು ಹಣ ನೀಡಿದರೂ ಖಾಸಗಿ ವಾಹನಗಳು ಬರಲಾರದಷ್ಟು ಕುಲಗೆಟ್ಟಿದೆ ಕಿತ್ತೆದ್ದ ಜಲ್ಲಿಕಲ್ಲು ರಸ್ತೆ.
ಸ್ಪಂದನೆ ಸಿಕ್ಕಿಲ್ಲ: ಇದುವರೆಗಿನ ಜನಸ್ಪಂದನ ಸಭೆ, ಗ್ರಾಮ ಸಭೆಗಳಲ್ಲಿ ಗ್ರಾಮಸ್ಥರ ಯಾವುದೇ ಅಹವಾಲು, ಮನವಿಗಳಿಗೆ ಸ್ಪಂದನೆ ಸಿಕ್ಕಿಲ್ಲ. ಸರ್ಕಾರ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್, ಯೋಜನೆ  ರೂಪಿಸಿ ಕೋಟ್ಯಂತರ ರು. ವ್ಯಯಿಸಿದ್ದರೂ ಈ ಗ್ರಾಮಸ್ಥರು ಮಾತ್ರ ಕಿತ್ತೆದ್ದ ಜಲ್ಲಿಕಲ್ಲು ರಸ್ತೆ, ಹೊಂಡಗುಂಡಿಗಳ ನಡುವೆ ಯಾವುದೋ ದಾರಿ, ಎಲ್ಲಿಗೋ ಪಯಣ ಎಂಬಂತೆ ಓಡಾಡಬೇಕಿದೆ.
ಈ ಬಗ್ಗೆ ಹತಾಶರಾಗಿ ಗ್ರಾಮಸ್ಥರಾದ ಮಂಜುನಾಥ್ ಗೌಡ, ಪರಮೇಶ್ವರ, ದೇವೇಂದ್ರ ಗೌಡ ಸೇರಿದಂತೆ ಗ್ರಾಮಸ್ಥರು ಸರ್ಕಾರ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿ ಹೆಸರಿಲ್ಲಿ ಅನಗತ್ಯವಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದೆ. ಆದರೆ ಸಾವಿರಾರು ಗ್ರಾಮಸ್ಥರು ದಿನನಿತ್ಯ ಓಡಾಡುವ ಅಗತ್ಯ ರಸ್ತೆಯ ದುರಸ್ಥಿಗೆ ಇದುವರೆಗೂ ಮುಂದಾಗಿಲ್ಲ. ಈ ಭಾಗದ ರಸ್ತೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಬೇಕಿದೆ ಎಂದಿದ್ದಾರೆ.
ನಮಗೆ ಸುವ್ಯವಸ್ಥಿತ ರಸ್ತೆ ನಿರ್ಮಾಣದ ಭರವಸೆ ನೀಡಿ ಬೇಡಿಕೆ ಈಡೇರಿಸಬೇಕು. ಇಲ್ಲದದಿದ್ದರೆ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.