ನಾಳೆಯಿಂದ ಬಾಬಾಬುಡನ್‌ಗಿರಿಯಲ್ಲಿ ಉರುಸ್
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ.25
ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಬಾಬಾಬುಡನ್ ಗಿರಿಯಲ್ಲಿ ಮಾ. 27ರಿಂದ ಮೂರು ದಿನ ಉರುಸ್ ನಡೆಯಲಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ದೇಶದ ವಿವಿಧೆಡೆಯಿಂದ ಭಕ್ತರು ಆಗಮಿಸಲಿದ್ದಾರೆ. ಇಲ್ಲಿನ ಪೂಜಾ ವಿಧಾನಕ್ಕೆ ಸಂಬಂಧಿಸಿದಂತೆ ವಿವಾದ ಇಂದಿಗೂ ಜೀವಂತವಾಗಿದ್ದರೂ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಇಳಿಮುಖವಾಗಿಲ್ಲ. ಇಂದಿಗೂ ಕೂಡ ಈ ಕ್ಷೇತ್ರ ಹಿಂದೂ, ಮುಸ್ಲಿಮರ ಭಾವೈಕ್ಯತಾ ಕೇಂದ್ರವಾಗಿ ಉಳಿದುಕೊಂಡಿದೆ. ಮೂರು ದಿನಗಳ ಉರುಸ್‌ನಲ್ಲಿ ಮುಸ್ಲಿಂ ಜನಾಂಗದರು ಮಾತ್ರ ಭಾಗವಹಿಸುವುದಿಲ್ಲ. ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ತಮಿಳುನಾಡು ಹಾಗೂ ದೇಶದ ಇತರೆಡೆಗಳಿಂದ ಹಿಂದೂ ಸಮುದಾಯದ ಭಕ್ತರು ಆಗಮಿಸಲಿದ್ದಾರೆ.
ಗುಹೆಯೊಳಗೆ ಪ್ರವೇಶ: 2008ರಲ್ಲಿ ದತ್ತಪೀಠದ ಗುಹೆ ಕುಸಿದ್ದರಿಂದ ಭಕ್ತರಿಗೆ ಪ್ರವೇಶ ನಿಷೇಧ ಮಾಡಲಾಗಿತ್ತು. ಇದೀಗ ಇಲ್ಲಿನ ಕಾಮಗಾರಿ ಪೂರ್ಣಗೊಂಡಿದ್ದು, ಡಿಸೆಂಬರ್‌ನಲ್ಲಿ ನಡೆದ ದತ್ತಜಯಂತಿಯ ದಿನದಿಂದ ಗುಹೆಯೊಳಗೆ ಪ್ರವೇಶ ನೀಡಲಾಗುತ್ತಿದೆ. ಈಗ ನಿತ್ಯವೂ ಗುಹೆ ಪ್ರವೇಶಕ್ಕೆ ಅವಕಾಶ ಇದೆ. ಹಿಂದಿನ 5 ವರ್ಷಗಳಲ್ಲಿ ಗುಹೆ ಪ್ರವೇಶಕ್ಕೆ ಅವಕಾಶ ಇರಲಿಲ್ಲ. ಇದರಿಂದಾಗಿ ಭಕ್ತರಿಗೆ ನಿರಾಶೆಯಾಗಿತ್ತು. ಆದರೆ, ಈ ಬಾರಿ ನಿರ್ಬಂಧಗಳೇನೂ ಇಲ್ಲ. ಅದುದರಿಂದ ಈ ವರ್ಷದಲ್ಲಿ ಹೆಚ್ಚು ಭಕ್ತರನ್ನು ಉರುಸ್‌ನಲ್ಲಿ ನಿರೀಕ್ಷಿಸಲಾಗಿದೆ.
ಹಿಂದಿನ ಸಂಪ್ರದಾಯದಂತೆ ಮೊದಲನೇ ದಿನ ಚಿಕ್ಕಮಗಳೂರಿನಿಂದ ಸಂದಲ್ ತೆಗೆದುಕೊಂಡು ಹೋಗಿ ಅದನ್ನು ಗೋರಿಗಳಿಗೆ ಹಚ್ಚುವ ಮೂಲಕ ಉರುಸ್‌ಗೆ ಚಾಲನೆ ನೀಡಲಾಗುವುದು. ಮರುದಿನ ದೇಶದ ವಿವಿಧೆಡೆಗಳಿಂದ ಆಗಮಿಸುವ ಫಕೀರರ ಸಭೆ ನಡೆಯಲಿದೆ. ಕೊನೆಯ ದಿನ ಜನ್ನತ್‌ನಗರದಲ್ಲಿ ಉರುಸ್ ನಡೆಯಲಿದೆ.
ಸಿದ್ಧತೆ: ದತ್ತಪೀಠದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕೆಂದು ಇತ್ತೀಚೆಗೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ಇದರ ಜತೆಗೆ ಇಲ್ಲಿ ನಡೆಯುವ ಧಾರ್ಮಿಕ ಆಚರಣೆಗೆ ಸಂಬಂಧಿಸಿದಂತೆ ಧಾರ್ಮಿಕ ದತ್ತಿ ಆಯುಕ್ತರು ಹೊರಡಿಸಿರುವ ಆದೇಶವನ್ನು ಪಾಲನೆ ಮಾಡಲಾಗುತ್ತಿದೆ. ಅಂದರೆ ಹೊಸ ಆಚರಣೆಗಳಿಗೆ ಅವಕಾಶ ಇಲ್ಲ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಉರುಸ್‌ಗೆ ಶಾಖಾದ್ರಿ ಚಾಲನೆ ನೀಡಬೇಕು.
ಅದರಂತೆ ತಮಗೆ ಅವಕಾಶ ನೀಡುವಂತೆ ಸೈಯದ್ ಗೌಸ್ ಮೊಹಿಯುದ್ದೀನ್ ಶಾಖಾದ್ರಿ ಅವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಆದರೆ, ಈ ಕೆಲಸ ಮುಜಾವರ್ ಅವರಿಂದಲೇ ಮಾಡಿಸಲು ಜಿಲ್ಲಾಡಳಿತ ಉದ್ದೇಶಿಸಿದೆ. ಇದಕ್ಕೆ ಶಾಖಾದ್ರಿ ವಿರೋಧ ವ್ಯಕ್ತಪಡಿಸಿದ್ದಾರೆ.
ಮೈಸೂರು ಮುಜರಾಯಿ ಕೈಪಿಡಿಯಲ್ಲಿ ಉಲ್ಲೇಖಿಸಿರುವ ಪ್ರಕಾರ ಉರುಸ್ ದಿನದಂದು ಗೋರಿಗಳಿಗೆ ಸಂದಲ್ ಹಚ್ಚಿ, ಹಸಿರು ಬಟ್ಟೆ ಹೊದಿಸಿ ಅವರಿಗೆ ಹೂವು ಹಾಕಬೇಕು. ಈ ಕೆಲಸ ಶಾಖಾದ್ರಿ ಮಾಡಿದರೆ ಮಾತ್ರ ಅಧಿಕೃತವಾಗಿ ಉರುಸ್‌ಗೆ ಚಾಲನೆ ನೀಡಿದಂತಾಗುತ್ತಿದೆ.
ಈ ಕೆಲಸ ಮುಜಾವರ್ ಅವರಿಂದ ಮಾಡಿಸಿದರೆ, ಅದು ಉರುಸ್‌ನ ಸಂಪ್ರದಾಯ ಮುರಿದಂತೆ ಎಂದು ಶಾಖಾದ್ರಿಯವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುವಾಗ ತಿಳಿಸಿದರು.
ಪರಿಸ್ಥಿತಿ ಆಧರಿಸಿ ತೀರ್ಮಾನ: ಉರುಸ್ ದಿನದಂದು ಜಿಲ್ಲಾಡಳಿತ ಮೊದಲು ಫಕೀರರಿಗೆ ಗುಹೆ ಪ್ರವೇಶಕ್ಕೆ ಅವಕಾಶ ನೀಡಬೇಕು. ಬಳಿಕ, ಇಲ್ಲಿಗೆ ಬರುವ ಗಣ್ಯರಿಗೆ, ನಂತರ ತಮಗೆ ಅವಕಾಶ ನೀಡಬೇಕು.
ಮಾ.27ರಂದು ಇದಕ್ಕೆ ಅವಕಾಶ ನೀಡದೆ ಹೋದರೆ ಪರಿಸ್ಥಿತಿಯ ಆಧಾರದ ಮೇಲೆ ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಅದುದರಿಂದ ಈ ಬಾರಿಯೂ ಕೂಡ ಉರುಸ್ ವಿವಾದಕ್ಕೆ ಸಿಲುಕಿದೆ. ಮುಂದಿನ ಬೆಳವಣಿಗೆ ಕಾಲವೇ ನಿರ್ಧರಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

