ಚಿಕ್ಕಮಗಳೂರು

ಮತದಾನದಲ್ಲಿ ಪಾಲ್ಗೊಂಡು ಹಕ್ಕು ಚಲಾಯಿಸಿ

Published On :

ಚಿಕ್ಕಮಗಳೂರು: ಉತ್ತಮ ಸರಕಾರವನ್ನು ಆಯ್ಕೆ ಮಾಡುವ ಅಧಿಕಾರ ಮತದಾರನ ಕೈಯಲ್ಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳುವ ಮೂಲಕ ಜನತೆ ತಮ್ಮ ಅತ್ಯುನ್ನತ ಹಕ್ಕನ್ನು ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ವಿ.  ಯಶವಂತ್ ಹೇಳಿದರು.
ನೆಹರು ಯುವಕೇಂದ್ರ ಹಾಗೂ ವಿವಿಧ ಯುವ, ಮಹಿಳಾ ಮಂಡಳಿಗಳ ಸಹಯೋಗದಲ್ಲಿ ನಗರದ ಸ್ಕೌಟ್ ಭವನದಲ್ಲಿ ಸೋಮವಾರ ನಡೆದ ವ್ಯವಸ್ಥಿತ ಮತದಾನದಲ್ಲಿ ಯುವ ಜನತೆ ಪಾಲ್ಗೊಳ್ಳುವಿಕೆ ಕುರಿತು ಜಿಲ್ಲಾ  ಯುವ ಸಮಾವೇಶ ಹಾಗೂ ಯುವ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮತದಾರರ ಪಟ್ಟಿಗೆ: ಯುವಕರು ಮತ್ತು ವಿದ್ಯಾವಂತರು ಮತದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಮತದಾನದ  ಜಾಗೃತಿ ಮೂಡಿಸಲು ಭಾರತ ಚುನಾವಣಾ ಆಯೋಗ ಸ್ವೀಪ್ ಹೆಸರಿನಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ. ಮುಖ್ಯವಾಗಿ 18 ವರ್ಷ ದಾಟಿದವರು ಮತದಾರರ ಪಟ್ಟಿಗೆ ಸೇರ್ಪಡೆಯಾಗಬೇಕು. 2013 ಜ.1ನ್ನು ಅರ್ಹತಾ ವರ್ಷವನ್ನಾಗಿಸಿ 18 ವರ್ಷ ತುಂಬಿದವರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಬಹುದು ಎಂದು ಹೇಳಿದರು.  
ಚಿಕ್ಕಮಗಳೂರು ಜಿಲ್ಲೆಯಲ್ಲಿ 8.01 ಲಕ್ಷ ಮತದಾರರು ಇದ್ದಾರೆ. ಜನಸಂಖ್ಯೆಯ ಶೇ.70ರಷ್ಟು ಮಂದಿ ಮತದಾರರಾಗಿರಬೇಕು ಎಂಬ ರಾಷ್ಟ್ರೀಯ ಮಾನದಂಡ ಇದೆ. ಯುವಜನತೆ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ್ ಮಾತನಾಡಿ, ಮತದಾನ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನ ನೀಡಿರುವ ಹಕ್ಕು, ಮತ ಚಲಾಯಿಸುವ ಮೂಲಕ ಪ್ರಜೆ ತನ್ನ ಧ್ವನಿಯನ್ನು ಎತ್ತಿದಂತಾಗುತ್ತದೆ ಎಂದರು.
ಜವಾಬ್ದಾರಿ ನಾಗರಿಕನ ಕರ್ತವ್ಯ ಕುರಿತು ಭಾರತ್ ಸ್ಕೌಟ್ಸ್ ಗೈಡ್ಸ್ ಮುಖ್ಯ ಆಯುಕ್ತ ಎಂ.ಎನ್. ಷಡಾಕ್ಷರಿ ಹಾಗೂ ವ್ಯವಸ್ಥಿತ ಮತದಾನದಲ್ಲಿ ಯುವ ಜನರ ಪಾಲ್ಗೊಳ್ಳುವಿಕೆ ಕುರಿತು ನಿವೃತ್ತ ಉಪನ್ಯಾಸಕ ಬಿ. ತಿಪ್ಪೇರುದ್ರಪ್ಪ ಉಪನ್ಯಾಸ ನೀಡಿದರು.
ಡಿಡಿಪಿಐ ಕಾಂತರಾಜು, ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ಡಾ.  ಜಗದೀಶ್ ಕುಮಾರ್, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.