ಧರ್ಮದ ದಶಸೂತ್ರಗಳು ಸರ್ವರಿಗೂ ದಾರಿದೀಪ
ಕ.ಪ್ರ.ವಾರ್ತೆ ಟಿ ನರಸಿಂಹರಾಜಪುರ ಟಿ ಮಾ.25
ವಿಶ್ವ ಬಂಧುತ್ವ ಸಾರಿದ ವೀರಶೈವ ಧರ್ಮ ಸ್ಥಾಪಕರಾದ ಜಗದ್ಗುರು ರೇಣಕಾಚಾರ್ಯರು ಬೋಧಿಸಿದ ಮಾನವೀಯತೆಯ ಧರ್ಮದ ದಶಸೂತ್ರಗಳು ಸರ್ವ ಕಾಲಕ್ಕೂ ಸರ್ವರಿಗೂ ದಾರಿದೀಪ ಎಂದು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಭಗವಾತ್ಪಾದರು ಅಭಿಪ್ರಾಯಪಟ್ಟರು.
ಸೋಮವಾರ ಬಾಳೆಹೊನ್ನೂರಿನಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾ ರಥೋತ್ಸವದ ಅಂಗವಾಗಿ ಆಯೋಜಿಸಿದ್ದ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರಧಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಲೋಕ ಕಲ್ಯಾಣವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡ ರೇಣುಕಾಚಾರ್ಯರು ಧರ್ಮ ಕಾರ್ಯದೊಂದಿಗೆ ಅದ್ಭುತ ಸಾಮಾಜಿಕ ಸತ್ಕೃಂತಿ ಮಾಡಿದ್ದು ಅವಿಸ್ಮರಣೀಯವಾಗಿದೆ. ನೊಂದವರ, ದೀನ ದಲಿತರ, ದುರ್ಬಲರ, ಮಹಿಳೆಯರ ಏಳ್ಗೆಗಾಗಿ ಶ್ರಮಿಸಿದ ಸಾಧನೆ ಅನನ್ಯ. ಅವರು ಜಾತಿ ಜಂಜಾಟಗಳ ನಡುವೆ ಜಗತ್ತಿನಲ್ಲಿ ನೀತಿಯು ಅತಿ ಮುಖ್ಯ ಎಂದು ಸಾರಿದ್ದರು ಎಂದರು.
ಉಜ್ಜಯನಿ ಸದ್ದರ್ಮ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರದ ಶಿವಾಚಾರ್ಯ ಭಗವಾತ್ಪದರು ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಪ್ರಶಸ್ತಿ ಪ್ರದಾನ: 2013ನೇ ಸಾಲಿನ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿಯನ್ನು ಶತಾಯುಷಿ, ನಾಡೋಜ, ಹಿರಿಯ ರಂಗಭೂಮಿ ಕಲಾವಿದ ಡಾ. ಏಣಗಿ ಬಾಳಪ್ಪ ಅವರಿಗೆ ಘೋಷಿಸಲಾಗಿದೆ. ಅವರ ಅನಾರೋಗ್ಯದ ನಿಮಿತ್ತ ಅವರ ಅನುಪಸ್ಥಿತಿಯಲ್ಲಿ ಅವರ ಪುತ್ರ ಸುಭಾಸ ಏಣಗಿ ಅವರಿಗೆ ರಂಭಾಪುರಿ ಜಗದ್ಗುರುಗಳು ಪ್ರಶಸ್ತಿ ಪ್ರದಾನ ಮಾಡಿದರು.
ಕಲಾದಗಿಯ ಚಂದ್ರಶೇಖರ ಶಿವಾಚಾರ್ಯರು ರಂಭಾಪುರಿ ಬೆಳಗು ಎಂಬ ಮಾಸಿಕ ಗ್ರಂಥ ಬಿಡುಗಡೆ ಮಾಡಿದರು. ಅ.ಭಾ.ವೀ.ಮ.ಸ. ಪ್ರಧಾನ ಕಾರ್ಯದರ್ಶಿ ಬಿ.ಎಸ್. ವಾಗೀಶ ಪ್ರಸಾದ ಅವರು ರಂಭಾಪುರಿ ವೀರ ಗಂಗಾಧರ ಜಗದ್ಗುರುಗಳ ಧರ್ಮ ಸಂದೇಶ ಎಂಬ ಸಿಡಿ ಬಿಡುಗಡೆ ಮಾಡಿದರು. ಪಂಚಾಚಾರ್ಯ ಪ್ರಭಾ ಪತ್ರಿಕೆಯನ್ನು ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಬಿಡುಗಡೆ ಮಾಡಿದರು.
ಮಾನಿಹಳ್ಳಿ ಪುರವರ್ಗ ಮಠದ ಮಳೆ ಯೋಗಿಶ್ವರ ಶಿವಾಚಾರ್ಯರು ಸೇರಿದಂತೆ 50ಕ್ಕೂ ಹೆಚ್ಚು ವಿವಿಧ ಮಠಗಳ ಶಿವಾಚಾರ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಗುರುರಕ್ಷೆ: ಗೌಡಗಾಂವದ ಡಾ. ಜಯ ಸಿದ್ದೇಶ್ವರ ಶಿವಾಚಾರ್ಯರು, ಕೂಡ್ಲಿಗಿ ಮಲ್ಲಿಕಾರ್ಜುನ ಶಿವಾಚಾರ್ಯರು, ಬೆಲಗೂರು ಬಿಂದು ಮಾದವ ಶರ್ಮಾಜಿ, ಗಂಗಾವತಿಯ ರವೀಂದ್ರನಾಥ, ಸೊಲ್ಲಾಪುರದ ದಯಾನಂದ ಬಿಜಾಪುರೆ ಅವರಿಗೆ ಗುರುರಕ್ಷೆ ನೀಡಿ ಆಶೀರ್ವಚನ ಮಾಡಿದರು.
ರೇಣುಕಾಚಾರ್ಯ ಗುರುಕುಲದವರು ವೇದಘೋಷ ಮಾಡಿದರು. ಎಚ್.ಎಂ. ಲೋಕೇಶ್ ಸ್ವಾಗತಿಸಿ, ಗಿರಿಜಾದೇವಿ ಕಾರ್ಯಕ್ರಮ ನಿರೂಪಿಸಿದರು. ಬೆಂಗಳೂರಿನ ಮೇಘನಾ ಅವರಿಂದ ಭರತನಾಟ್ಯ ನಡೆಯಿತು. ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

