ಚಿಕ್ಕಮಗಳೂರು

ನೈತಿಕತೆ ಜಾಗೃತಿಯಿಂದ ಏಡ್ಸ್ ನಿಯಂತ್ರಣ

Published On :

ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ  ಮಾ.26
ನೈತಿಕತೆ ಜಾಗೃತಿಗೊಳಿಸುವುದರಿಂದ ಏಡ್ಸ್‌ನಂತಹ ಅನಿಷ್ಟಗಳನ್ನು ನಿಯಂತ್ರಿಸಬಹುದೆಂದು ಜಿಲ್ಲಾ ಕ್ಯಾಥೋಲಿಕ್ ಕ್ರೈಸ್ತರ ಧರ್ಮಕ್ಷೇತ್ರದ ಅಧ್ಯಕ್ಷ ಡಾ. ಟಿ. ಅಂಥೋನಿಸ್ವಾಮಿ ಹೇಳಿದ್ದಾರೆ.
ನಗರದ ಐ.ಡಿ.ಎಸ್.ಜಿ. ಸರ್ಕಾರಿ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ ಆಯೋಜಿಸಿದ್ದ ಏಡ್ಸ್ ಜಾಗೃತಿ- ಸಂವಾದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಸಂದೇಶ ನೀಡಿದರು.
ನೈತಿಕ ಸಂಬಂಧಕ್ಕೆ ದಾರಿ: ಮನಸ್ಸನ್ನು ಕೆಡಿಸುವ ಸಂಗತಿಗಳು ಸುತ್ತಲಿನ ಪರಿಸರವನ್ನು ಕಲುಷಿತಗೊಳಿಸಿದೆ. ಅಂತರರ್ಜಾಲ ಹಾಗೂ ಫೇಸ್ ಬುಕ್‌ನಂತಹ ಮಾಧ್ಯಮದಲ್ಲಿ ನೀಲಿಚಿತ್ರಗಳು ಹಾಗೂ ಇನ್ನಿತರ ಅಶ್ಲೀಲ ಚಿತ್ರಗಳು ಯುವಕರ ಮನಸ್ಥಿತಿಯನ್ನು ಬದಲಿಸಿ ಲೈಂಗಿಕ ಆಸಕ್ತಿ ಕೆರಳಿಸುತ್ತಾ ಅನೈತಿಕ ಸಂಬಂಧಕ್ಕೆ ದಾರಿ ಮಾಡಿ ಕೊಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ಮಾಧ್ಯಮಗಳ ಮೂಲಕ ತಪ್ಪು ಹಾದಿ ಹಿಡಿಯುತ್ತಿರುವ ಸಂಗತಿಗಳು ಹೆಚ್ಚಾಗುತ್ತಿವೆ. ಒಳ್ಳೆಯ ಸಂಗತಿಗಳನ್ನು ಯುವಕರಿಗೆ ಮನದಟ್ಟು ಮಾಡಬೇಕಾಗಿದೆ. ನೈತಿಕತೆ ಮೌಲ್ಯಗಳು ಹಾಗೂ ಸಾಮಾಜಿಕ ಚಿಂತನೆಗಳತ್ತ ಅವರನ್ನು ಮುನ್ನಡೆಸುವ ಅಗತ್ಯವಿದೆ ಎಂದು ಹೇಳಿದರು.
ಮಾನವೀಯತೆಯಿಂದ ವರ್ತಿಸಿ: ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎಚ್.ಡಿ. ತಮ್ಮಯ್ಯ ಮಾತನಾಡಿ, ಏಡ್ಸ್ ಒಮ್ಮೊಮ್ಮೆ ನಮ್ಮ ಉದಾಸೀನತೆ ಹಾಗೂ ಅಜಾಗರೂಕತೆಯಿಂದ ಬರಬಹುದು. ಏಡ್ಸ್ ಪೀಡಿತರೊಂದಿಗೆ ಮಾನವೀಯತೆಯ ನೆಲೆಯಲ್ಲಿ ನಡೆದುಕೊಳ್ಳಬೇಕೆಂದು ಸಲಹೆ ಮಾಡಿ, ವಿಶೇಷವಾಗಿ ಯುವ ಜನತೆ ಏಡ್ಸ್ ಬಗ್ಗೆ ಜಾಗೃತರಾಗಬೇಕೆಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಶಾಖಾ ಸಭಾಪತಿ ಡಾ. ಕೆ. ಸುಂದರಗೌಡ ಮಾತನಾಡಿ, ಶಿಸ್ತು ಹಾಗೂ ಸುರಕ್ಷಿತ ಲೈಂಗಿಕತೆಯಿಂದ ಏಡ್ಸ್‌ನ್ನು ದೂರ ಮಾಡಬಹುದು. ಯುವ ಪೀಳಿಗೆಯು ಜವಾಬ್ದಾರಿಯಿಂದ ಮುನ್ನಡೆಯುವಂತೆ ಕಾರ್ಯೋನ್ಮುಖರಾಗಬೇಕೆಂದರು.
ಕಾಲೇಜು ಉಪ ಪ್ರಾಂಶುಪಲ ಪ್ರೊ. ಟಿ.ಸಿ. ಬಸವರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, ತಾತ್ಕಾಲಿಕ ಸುಖಕ್ಕಾಗಿ ಸುರಕ್ಷಿತವಲ್ಲದ ಲೈಂಗಿಕ ಕ್ರಿಯೆಯಿಂದ ಏಡ್ಸ್ ವ್ಯಾಪಿಸುತ್ತದೆ. ಒಮ್ಮೆ ಏಡ್ಸ್ ಬಂದರೆ ಜೀವನದಲ್ಲಿ ಸಾಧಿಸುವ ಮನಸ್ಥಿತಿಯನ್ನೆ ಕಳೆದು ಕೊಳ್ಳಬೇಕಾಗುತ್ತದೆ ಎಂದರು.
ಬಾಂಧವ್ಯ ನೆಟ್‌ವರ್ಕ್‌ನ ಸಂಯೋಜನಾಧಿಕಾರಿ ಶಿವಕುಮಾರ್ ಹಾಗೂ ಅಧ್ಯಕ್ಷೆ ಫಿಲೋಮಿನಾ ಲೋಬೊ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿ ಪೌಷ್ಟಿಕ ಆಹಾರ, ನಿಗದಿತ ವ್ಯಾಯಾಮ ಮತ್ತು ಔಷದೋಪಚಾರದಿಂದ ಏಡ್ಸ್‌ನ ಹರಡುವಿಕೆಯನ್ನು ದೀರ್ಘಕಾಲದವರೆಗೆ ಹಿಮ್ಮೆಟಿಸಬಹುದೆಂದರು. ನರೇಂದ್ರ ಪೈ, ಆರ್. ಶ್ರೀನಿವಾಸ್ ವೇದಿಕೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.