ಬಾಬಾಬುಡನ್‌ಗಿರಿಯಲ್ಲಿ ಉರುಸ್
ಕ.ಪ್ರ. ವಾರ್ತೆ ಚಿಕ್ಕಮಗಳೂರು ಮಾ. 27
ಬಾಬಾಬುಡನ್‌ಗಿರಿಯಲ್ಲಿ ಬುಧವಾರದಿಂದ ಆರಂಭವಾದ ಮೂರು ದಿನದ ಉರುಸ್‌ಗೆ ಸಂಪ್ರದಾಯದ ಪ್ರಕಾರ ಚಾಲನೆ ಸಿಗಲಿಲ್ಲ.
ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿ ಶಾಖಾದ್ರಿ, ದೇಶದ ವಿವಿಧೆಡೆ ಬಂದಿದ್ದ ಫಕೀರರು ಹಾಗೂ ಮುಸ್ಲಿಮರು ಪ್ರತಿಭಟನೆ ನಡೆಸಿದರು.
ಜಿಲ್ಲಾಡಳಿತದ ಪ್ರಕಾರ ಉರುಸ್‌ಗೆ ಚಾಲನೆ ನೀಡಲಾಗಿದೆ. ಆದರೆ, ಶಾಖಾದ್ರಿ ಪ್ರಕಾರ ಅಧಿಕೃತವಾಗಿ ಚಾಲನೆ ಸಿಗಲಿಲ್ಲ. ಈ ಗೊಂದಲದ ನಡುವೆ ಮೊದಲ ದಿನ ಕಳೆಯಿತು.
ಮಧ್ಯಾಹ್ನ ನಗರದ ಬಡ ಮಖಾನ್‌ನಿಂದ ಗಂಧವನ್ನು ತೆಗೆದುಕೊಂಡು ಅತ್ತಿಗುಂಡಿಗೆ ತೆರಳಿ, ಅಲ್ಲಿ ಮಸೀದಿಯಲ್ಲಿ ಪೂಜೆ ಸಲ್ಲಿಸಿ ಬಳಿಕ ಬಾಬಾಬುಡನ್‌ಗಿರಿಯಲ್ಲಿರುವ ದರ್ಗಾಕ್ಕೆ ತೆರಳಲಾಯಿತು.
ಈ ಸಂಬಂಧದಲ್ಲಿ ಸಾವಿರಾರು ಮುಸ್ಲಿಮರು ಪಾಲ್ಗೊಂಡಿದ್ದರು. ಬ್ಯಾರಿಕೇಡ್ ಮೂಲಕ ಭಕ್ತರು ಗುಹೆಯೊಳಗೆ ಪ್ರವೇಶಕ್ಕೆ ತೆರಳಿದರು. ಆದರೆ, ಪ್ರವೇಶ ದ್ವಾರದಿಂದ ಮುಜಾವರ್‌ಗೆ ಮಾತ್ರ ಹೋಗಲು ಅವಕಾಶ ನೀಡುವುದಾಗಿ ಅಲ್ಲಿದ್ದ ಅಧಿಕಾರಿಗಳು ಹೇಳಿದಾಗ, ಫಕೀರರಿಗೆ ಹಾಗೂ ತಮಗೂ ಅನುಮತಿ ನೀಡಬೇಕು ಎಂದು ಶಾಖಾದ್ರಿ ಸೈಯದ್ ಗೌಸ್ ಮೊಹಿಯುದ್ದೀನ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಅನುಮತಿ ನೀಡದ ಜಿಲ್ಲಾಡಳಿತ: ಆದರೆ, ಇದಕ್ಕೆ ಜಿಲ್ಲಾಡಳಿತ ಒಪ್ಪಲಿಲ್ಲ. ಸುಪ್ರೀಂಕೋರ್ಟ್ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಆದೇಶದ ಪ್ರಕಾರ ಅನುಮತಿ ನೀಡಲಾಗುವುದು ಎಂದು ಹೇಳಿದಾಗ, ಪೀಠದ ಪ್ರವೇಶ ದ್ವಾರದಲ್ಲಿ ಶಾಖಾದ್ರಿ, ಫಕೀರರು ಹಾಗೂ ಮುಸ್ಲಿಮರು ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಹಾಕಿದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿದರು. ಇದೇ ವೇಳೆಯಲ್ಲಿ ಹೊರ ಭಾಗದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಜಿಲ್ಲಾಡಳಿತ ಮುಜಾವರ್ ಅವರಿಂದ ಗುಹೆಯೊಳಗೆ ಧಾರ್ಮಿಕ ಆಚರಣಾ ಕಾರ್ಯಕ್ರಮವನ್ನು ನೆರವೇರಿಸುತ್ತಿತ್ತು. ಆದರೆ, ಈ ಬಾರಿ ಮುಸ್ಲಿಮರು ಮುಜಾವರ್ ಅವರಿಗೆ ಈ ಕಾರ್ಯವನ್ನು ನೆರವೇರಿಸಲು ಅವಕಾಶ ನೀಡಲಿಲ್ಲ.
ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ, ಇದೇ ಮೊದಲ ಬಾರಿಗೆ ಮುಸ್ಲಿಮರು ಸಾಮೂಹಿಕವಾಗಿ ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಂಪ್ರದಾಯ: ಉರುಸ್‌ಗೆ ಹಲವು ವರ್ಷಗಳಿಂದ ಅನುಸರಿಕೊಂಡು ಬಂದಿರುವ ಸಂಪ್ರದಾಯ ಇದೆ.
ಮೊದಲ ದಿನದಂದು ಶಾಖಾದ್ರಿಯವರು ಗೋರಿಗಳಿಗೆ ಗಂಧ ಲೇಪನ ಮಾಡಿ, ಹೂಗಳನ್ನು ಹಾಕಿ, ಹಸಿರು ಬಟ್ಟೆಗಳನ್ನು ಹೊದಿಸಿದರೆ ಮಾತ್ರ ಉರುಸ್‌ಗೆ ಚಾಲನೆ ನೀಡಿದಂತಾಗುತ್ತದೆ.
ಆದರೆ, ಜಿಲ್ಲಾಡಳಿತ ಇದಕ್ಕೆ ಅವಕಾಶ ನೀಡುತ್ತಿಲ್ಲ. ಅಂದರೆ, ಸಂಪ್ರದಾಯಕ್ಕೆ ವಿರೋಧವಾಗಿ ನಡೆದುಕೊಳ್ಳುತ್ತಿದೆ ಎಂಬುದು ಶಾಖಾದ್ರಿಗಳ ಆರೋಪ. ಆದರೆ, ಈ ರೀತಿಯಲ್ಲಿ ನಡೆದುಕೊಳ್ಳಲು ಅನುಮತಿ ನೀಡಿದ್ದೆಯಾದರೆ, ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದಂತಾಗುತ್ತದೆ ಎಂಬುದು ಜಿಲ್ಲಾಡಳಿತದ ಪ್ರತಿವಾದ. ಸಂಜೆ ವೇಳೆಗೆ ಗಿರಿಗೆ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಂ.ಎಲ್. ಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮದ್, ಮಾಜಿ ಶಾಸಕ ಧರ್ಮೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜಪ್ಪ ಅವರು ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವಿ. ಯಶವಂತ್ ಅವರು ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಲೇಬೇಕಾಗಿದೆ ಎಂದು ಮನವರಿಕೆ ಮಾಡಿದ್ದರಿಂದ ಮುಖಂಡರು ಸುಮ್ಮನಾದರು. ಪ್ರತಿಭಟನೆಯ ನಡುವೆಯೇ ಮೊದಲ ದಿನ ಕಳೆಯಿತು. ಗುರುವಾರ ಗಿರಿಯಲ್ಲಿ ಫಕೀರರ ಸಭೆ ನಡೆಯಲಿದೆ. ಶುಕ್ರವಾರ ಜನ್ನತ್‌ನಗರದಲ್ಲಿ ಉರುಸ್ ನಡೆದು ತೆರೆ ಬೀಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

