ಮತದಾರ ಪಟ್ಟಿ: ಹೆಸರು ನೋಂದಣಿಗೆ ಸೂಚನೆ
ಕ.ಪ್ರ. ವಾರ್ತೆ ಚಿಕ್ಕಮಗಳೂರು ಮಾ. 27
ಜಿಲ್ಲೆಯ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿ. ಯಶವಂತ್ ಹೇಳಿದ್ದಾರೆ.
ನಗರದ ವಾರ್ತಾ ಇಲಾಖೆ ಸಭಾಂಗಣದಲ್ಲಿ ಜಿಲ್ಲಾಡಳಿತ ಬುಧವಾರ ಏರ್ಪಡಿಸಿದ್ದ ಮತದಾರರ ಶಿಕ್ಷಣ ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಿಕೆ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾಗೃತ ಮತದಾನ ಮಾಡುವುದರ ಮೂಲಕ ಜವಾಬ್ದಾರಿಯುತ ಸರ್ಕಾರ ಹೊಂದಿ ದೇಶದ ಪ್ರಗತಿ ಸಾಧಿಸಲು ಸಾಧ್ಯ ಎಂದು ತಿಳಿಸಿದರು.
ಹೆಸರು ನೋಂದಾಯಿಕೊಳ್ಳಿ: ಜಿಲ್ಲೆಯಲ್ಲಿ ಮೇ 5 ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಮತದಾರ ಪಟ್ಟಿಯಲ್ಲಿ ಪ್ರತಿಯೊಬ್ಬ ನಾಗರಿಕರನು ಹೆಸರು ನೋಂದಾಯಿಸಲು ಅವಕಾಶವಿದ್ದು, ನಿಮ್ಮ ಗ್ರಾಮ ಅಥವಾ ನಗರ ಪ್ರದೇಶದಲ್ಲಿ ಹೆಸರುಗಳನ್ನು ಮತದಾರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಬಹುದೆಂದರು.
ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ಹೆಸರು, ತಂದೆಯ ಹೆಸರು, ವಾಸಸ್ಥಳ, ಜನ್ಮ ದಿನಾಂಕ, ವಯಸ್ಸು, ಲಿಂಗ ಮತ್ತಿತರ ದೋಷದ ತಿದ್ದುಪಡಿಗೆ ಬೂತ್ ಮಟ್ಟದ ಅಧಿಕಾರಿ ಅಥವಾ ತಾಲೂಕು ಕಚೇರಿಯಲ್ಲಿ ನಿಗಧಿತ ನಮೂನೆಯಲ್ಲಿ ಏ.7ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಆರ್ಥಿಕವಾಗಿ ಮುಂದುವರೆದವರು ಹಾಗೂ ನಗರ ಪ್ರದೇಶದವರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಿಕೆ ಹಿನ್ನೆಡೆ ಕಾಣುತ್ತಿದೆ ಎಂದ ಅವರು, ಪ್ರತಿಯೊಬ್ಬ ಸಾರ್ವಜನಿಕರು ತಪ್ಪದೇ ಮತದಾನ ಮಾಡುವುದರ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕೆಂದರು.
ಜಿಲ್ಲೆಯಲ್ಲಿ 11 ಲಕ್ಷದ 37 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಇದರಲ್ಲಿ 8 ಲಕ್ಷದ 1 ಸಾವಿರಕ್ಕೂ ಹೆಚ್ಚು ಜನರು ಮತ ಪಟ್ಟಿಯಲ್ಲಿ ನೋಂದಣಿ ಹೊಂದಿದ್ದು, ಒಟ್ಟು ಜನಸಂಖ್ಯೆಯಲ್ಲಿ ಶೇ. 70.48 ಮತದಾರರ ನೋಂದಣಿಯಾಗಿದೆ ಎಂದ ಅವರು, ಪ್ರತಿ ವರ್ಷ 17 ವರ್ಷದ ನಂತರ 18 ವರ್ಷ ತುಂಬಿದವರು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸುವುದು ಅವಶ್ಯ ಎಂದರು.
ಗೊಂದಲ ನಿರ್ಮೂಲನೆ: ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ್ ಮಾತನಾಡಿ, 6 ತಿಂಗಳ ಕಾಲಾವಧಿಯಲ್ಲಿ ಸಾಮಾನ್ಯವಾಗಿ ಒಂದೆಡೆ ವಾಸಿಸುತ್ತಿರುವವರು ಅಗತ್ಯ ದಾಖಲೆಗಳಾದ ರೇಷನ್ ಕಾರ್ಡ್, ಆಧಾರ್ ಅಥವಾ ವಿಳಾಸ ದೃಢೀಕರಣ ಹಾಗೂ ವಯಸ್ಸಿನ ದೃಢೀಕರಣದೊಂದಿಗೆ ಮತದಾರರ ಪಟ್ಟಿ ನೋಂದಣಿಗೆ ಅರ್ಜಿ ಸಲ್ಲಿಸಬಹುದು. ಚುನಾವಣಾ ಆಯೋಗ, ರಾಜಕೀಯ ಪಕ್ಷದ ಬೂತ್ ಮಟ್ಟದ ಏಜೆಂಟ್ ಹಾಗೂ ಬೂತ್ ಮಟ್ಟದ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸುವುದರಿಂದ ಮತದಾರರ ಪಟ್ಟಿಯಲ್ಲಾಗುವ ಗೊಂದಲಗಳನ್ನು ನಿರ್ಮೂಲನೆ ಮಾಡಬಹುದೆಂದರು.
ಸಭೆಯಲ್ಲಿ ಹಿಂದುಳಿದ ವರ್ಗಗಳ ಜಿಲ್ಲಾ ಮಟ್ಟದ ಅಧಿಕಾರಿ ಡಾ. ಜಗದೀಶ್ ಕುಮಾರ್ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರಯ್ಯ, ವಿವಿಧ ಕಾಲೇಜುಗಳ ಪ್ರಾಚಾರ್ಯರು, ಸರ್ಕಾರೇತರ ಸಂಘ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

