ಸಂಘಟನೆ ಸಮುದಾಯದ ಏಳಿಗೆಗೆ ಶ್ರಮಿಸಲಿ
ಕ.ಪ್ರ ವಾರ್ತೆ, ಶೃಂಗೇರಿ, ಮಾ.30
ಸಂಘಟನೆಗಳು ಸದಾ ಹರಿಯುವ ನೀರಿನಂತಾಗಿರಬೇಕು. ಸಮುದಾಯದ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಡಾ.ಬಿ.ಎನ್.ವಿ. ಸುಬ್ರಮಣ್ಯ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ರಾಜಾನಗರ ವಿದ್ಯಾಭಾರತೀ ಸಭಾ ಭವನದ ಶಾರದಾ ಮಂಟಪದಲ್ಲಿ ನಡೆಯುತ್ತಿರುವ ಎರಡು ದಿನಗಳ ಕ್ಷೇತ್ರಮಟ್ಟದ ವಿಪ್ರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದವರು ಸಂಘಟನೆಗಾಗಿ ಸಂಘಗಳು ಅನಿವಾರ್ಯವಾಗಿದೆ. ಸಮ್ಮೇಳನಗಳು ಹೊಸ ತಿರುವುಗಳನ್ನು ನೀಡುವಂತಾಗಿರಬೇಕು ಹೊರತು ಇತರರನ್ನು ತೃಪ್ತಿಗೊಳಿಸಲು ಸೀಮಿತವಾಗಿರಬಾರದು ಎಂದರು.
ನಮ್ಮನ್ನು ನಾವು ಅವಲೋಕಿಸಿಕೊಳ್ಳುವಂತಿರಬೇಕು. ಚಿಂತನೆಗೆ ಒಳಪಡಿಸುವಂತಿರಬೇಕು. ಸಮ್ಮೇಳನಗಳಲ್ಲಿ ರಾಜಕೀಯದ ಅಗತ್ಯವಿಲ್ಲ. ರಾಜಕೀಯ ಚಿಂತನೆಗಳಿಗೆ ಇಲ್ಲಿ ಅವಕಾಶವಿಲ್ಲ. ಮತದಾನ ನಮ್ಮ ಅಜನ್ಮ ಸಿದ್ಧ ಹಕ್ಕು. ಪ್ರತಿಯೊಬ್ಬರು ಮತ ಚಲಾಯಿಸುವುದು ಅವರ ಸಾಂವಿಧಾನಿಕ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಸಂಘಟಿತರಾಗಿ: ಬ್ರಾಹ್ಮಣರು ಸಂಘಟಿತರಾಗಬೇಕು. ಇತರೆ ಸಮುದಾಯಗಳ ಜನರು ಸಂಘಟಿತರಾಗಿದ್ದಾರೆ.ಅವರಲ್ಲಿ ಒಗ್ಗಟ್ಟು ಇದೆ. ಆದರೆ ಬ್ರಾಹ್ಮಣರಲ್ಲಿ ಒಗ್ಗಟ್ಟು ಇಲ್ಲದಂತಾಗಿದೆ. ಸ್ವಾಂತಂತ್ರ್ಯಕ್ಕಾಗಿ ಹೋರಾಡಿದ್ದು ತಪ್ಪಾ, ತ್ಯಾಗ ಬಲಿದಾನ ಮಾಡಿದ್ದು ತಪ್ಪಾ, ವಿಚಾರವಾದಿಗಳು ನಮ್ಮವರೆ ಆಗಿದ್ದಾರೆ.ಅವರು ನಮ್ಮನ್ನು ಟೀಕಿಸುತ್ತಿದ್ದಾರೆ. ನಮ್ಮಲ್ಲಿ ಸಂಘಟನೆಯಿಲ್ಲ. ನಾವು ಸಂಘಟಿತರಾಗಬೇಕು. ಮುಂದಿನ ಪೀಳಿಗೆಗೆ ಸಂದೇಶ ನೀಡಬೇಕು ಎಂದು ಹೇಳಿದರು.
ಇಂತಹ ಸಮ್ಮೇಳನಗಳ ಮೂಲಕ ಆತ್ಮವಲೋಕನ ಮಾಡಿಕೊಂಡು ನಮ್ಮ ಧರ್ಮ,ಪರಂಪರೆ, ಸಂಸ್ಕೃತಿ, ಪರಂಪರೆ ಉಳಿಸುವುದು ಕರ್ತವ್ಯ ಎಂಬುದನ್ನು ಅರಿತುಕೊಂಡು ಜಾಗೃತರಾದಾಗ ಮಾತ್ರ ಸಂಘಟಿತರಾಗಲು ಸಾಧ್ಯ ಎಂದರು. ಸಮ್ಮೇಳನದ ಉದ್ದೇಶ ನಾವು ಸಂಘಟಿತರಾಗುವುದು. ನಾವು ದೇಶದ ಪ್ರಜೆಗಳು, ನಮ್ಮನ್ಮು ಟೀಕೆ ಮಾಡಲು ನಾವೇನು ದೇಶದ್ರೋಹದ ಕೆಲಸ ಮಾಡಿಲ್ಲ. ಇತರರಂತೆ ಸೌಹಾರ್ಧಯುತವಾದ ಜೀವನ ನಡೆಸುತ್ತಿದ್ದೇವೆ. ಸಮುದಾಯದ ಪ್ರತಿಯೊಬ್ಬ ಬಂಧು ಕಾಯ, ವಾಚಾ, ಸಾಹಿತ್ಯ, ಹಣ ಒಂದಲ್ಲ ಒಂದು ರೀತಿಯಲ್ಲಿ ಸಮುದಾಯಕ್ಕೆ ಕೊಡುಗೆ ನೀಡಿ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಕರೆ ನೀಡಿದರು.
ಇನ್ನಷ್ಟು ನಡೆಯಲಿ: ಸಮಾಜದಲ್ಲಿ ನಮ್ಮಕೆಲಸವನ್ನು ನಾವೇ ಮಾಡಿಕೊಳ್ಳಬೇಕು. ಇಡೀ ರಾಜ್ಯದ ಬ್ರಾಹ್ಮಣರು ಸಂಘಟಿತರಾಗಬೇಕು. ಇಂತಹ ಸಮ್ಮೇಳನಗಳು ಇನ್ನಷ್ಟು ನಡೆಯಬೇಕು ಎಂದರು. ಇದೇ ಸಂದರ್ಭದಲ್ಲಿ ಸಮ್ಮೇಳನದ ಸ್ಮರಣ ಸಂಚಿಕೆ ವಿಪ್ರ ಭಾರತೀಯನ್ನು ಶಕಟಪುರ ಬದರಿ ಶಂಕರಾಚಾರ್ಯ ಸಂಸ್ಥಾನಂ ಕಾರ್ಯಂ ಚಂದ್ರಮೌಳೀಶ್ವರನ್ ಬಿಡುಗೊಡೆಗೊಳಿಸಿದರು.
ಕ್ಷೇತ್ರ ವಿಪ್ರ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎಸ್. ಚಂದ್ರಶೇಖರ್ ರಾವ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅಥಿಥಿಗಳಾಗಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಡಿ.ಎಚ್. ನಟರಾಜ್, ಚಕ್ರಪಾಣಿ ಕಡೇಗೆದಜ್ದೆ, ಗುರುಮೂರ್ತಿ, ಕೆ.ಎಸ್.ಶ್ರೀನಿವಾಸ್ ರಾವ್, ಶೃಂಗೇಶ್ವರ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಹರಿಹರಪುರದ ಶಾರದಾ ಲಕ್ಷ್ಮಿನೃಸಿಂಹ ಪೀಠಂ ಆಡಳಿತಾಧಿಕಾರಿ ವಿಶ್ವನಾಥನ್ ವಸ್ತು ಪ್ರದರ್ಶನ ಉದ್ಘಾಟಿಸಿದರು. ಶಿವಮೊಗ್ಗ ಆದಿತ್ಯ ಕನ್ಸಟ್ರಕ್ಷನ್ ಶಿವಶಂಕರ್ ಚಿತ್ರ ಪ್ರದರ್ಶನ ಉದ್ಘಾಟಿಸಿದರು. ಜಿ.ಎಸ್. ಮಹಾಬಲರಾವ್ ಸ್ವಾಗತಿಸಿದರು. ಗುರುಮೂರ್ತಿ ನಿರೂಪಿಸಿದರು. ಜಿ.ಎಂ. ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಂತರ ವಿವಿಧ ಗೋಷ್ಠಿಗಳು ನಡೆಯಿತು. ಮಳೆನಾಡಿನ ಬ್ರಾಹ್ಮಣ ಸಮುದಾಯದ ಬದುಕು ಬವಣೆ, ಮಹಿಳಾ ಗೋಷ್ಠಿ, ಪುಸ್ತಕ ಬಿಡುಗಡೆ, ವೃತ್ತಿ ಮಾರ್ಗದರ್ಶನ, ಸಾಧನೆ ಮನ್ನಣೆ ಕಾರ್ಯಕ್ರಮ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

