ನೀತಿ ಸಂಹಿತೆ ಉಲ್ಲಂಘನೆ: ಇಬ್ಬರ ವಿರುದ್ಧ ದೂರು
ನರಸಿಂಹರಾಜಪುರ: ಅನುಮತಿ ಪಡೆಯದೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಕರಪತ್ರ ಹಂಚಿದ ಆರೋಪದ ಮೇಲೆ ಚುನಾವಣಾಧಿಕಾರಿಗಳು ಇಬ್ಬರ ಮೇಲೆ ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಠಾಣಾ ಆವರಣದಲ್ಲಿ ಶುಕ್ರವಾರ ಕೆಲ ಕಾಲ ಉದ್ವಿಗ್ನ ವಾತಾವರಣ ಉಂಟಾಗಿತ್ತು.
ಬಿಜೆಪಿ ಮುಖಂಡರು ಮನೆಯಲ್ಲಿ ಮತದಾರರಿಗೆ ಹಣ ಹಂಚಲು ಮನೆಯೊಂದರಲ್ಲಿ ಹಣ ಇಟ್ಟಿದ್ದಾರೆ ಎಂದು ಚುನಾವಣಾಧಿಕಾರಿಗಳಿಗೆ ದೂರು ಬಂದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳ ತಂಡವು ಶೋಧನೆ ನಡೆಸಿತು.
ಆದರೆ, ಯಾವುದೇ ಹಣ ಪತ್ತೆಯಾಗಲಿಲ್ಲ. ಬ್ರಾಹ್ಮಣ ಪರಿಷತ್ನವರು ಅನುಮತಿ ಇಲ್ಲದೆ ಕರಪತ್ರ ಹಂಚುತ್ತಿದ್ದಾರೆ ಎಂಬ ಮತ್ತೊಂದು ದೂರಿನ ಮೇಲೆ ಚುನಾವಣಾಧಿಕಾರಿಗಳು ವ್ಯಾನ್ ಒಂದನ್ನು ತಡೆದು ಕರಪತ್ರಗಳನ್ನು ವಶ ಪಡಿಸಿಕೊಂಡು ಶಿವಕುಮಾರ್ ಮತ್ತು ಚಂದ್ರಮೌಳಿ ಎಂಬುವರನ್ನು ಠಾಣೆಗೆ ಕರೆ ತಂದಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪೊಲೀಸ್ ಠಾಣೆಗೆ ದೌಡಾಯಿಸಿದ್ದೇ ಪರಿಸ್ಥಿತಿ ಉದ್ವಗ್ನಗೊಳ್ಳಲು ಕಾರಣವಾಯಿತು. ಒಂದು ಹಂತದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದವರ ನಡುವೆ ಪೊಲೀಸ್ ಠಾಣೆಯ ಆವರಣದಲ್ಲೇ ವಾಗ್ವಾದ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಮೂರ್ತಿ ಹಾಗೂ ಇತರೆ ಕಾಂಗ್ರೆಸ್ ಮುಖಂಡರು ಠಾಣೆಗೆ ಆಗಮಿಸಿದ ನಂತರ ಪರಿಸ್ಥಿತಿ ತಿಳಿಯಾಯಿತು.
ಸುಳಿವು ನೀಡಿದರು: ಆರೋಪ ಬಿಜೆಪಿ ಮುಖಂಡರ ಮನೆಯಲ್ಲಿದ್ದ ಹಣದ ಬಗ್ಗೆ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದರೂ ಚುನಾವಣಾಧಿಕಾರಿಗಳ ತಂಡವೇ ಬಿಜೆಪಿ ಮುಖಂಡರಿಗೆ ಮೊದಲೇ ಸೂಚನೆ ನೀಡಿದ್ದರು ಎಂದು ಕಾಂಗ್ರೆಸ್ ಆರೋಪಿಸಿತು. ಇದರಿಂದ ಹಣವನ್ನು ಬೇರೆಡೆಗೆ ಸಾಗಿಸಲು ಅನುಕೂಲ ಮಾಡಿಕೊಟ್ಟಿರುವ ಚುನಾವಣಾಧಿಕಾರಿಗಳ ತಂಡದ ವಿರುದ್ದ ಮೇಲಾಧಿಕಾರಿಗಳಿಗೆ ದೂರು ನೀಡುವುದಾಗಿ ಕಾಂಗ್ರೆಸ್ ತಿಳಿಸಿದೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಕರಪತ್ರ ಹಂಚಿದ ಆರೋಪದ ಮೇಲೆ ಶಿವಕುಮಾರ್ ಮತ್ತು ಚಂದ್ರಮೌಳಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ವಾಹನವನ್ನು ನ್ಯಾಯಾಲಯದ ವಶಕ್ಕೆ ನೀಡಲಾಯಿತು.
3 ಜನರ ಮೇಲೆ ದೂರು: ಠಾಣೆಯಲ್ಲಿ ತಮ್ಮನ್ನು ಅವಾಚ್ಯ ಶಬ್ದದಿಂದ ನಿಂದಿಸಿದರು ಎಂದು ಬ್ರಾಹ್ಮಣ ಮಹಾ ಸಭಾದ ಮಾಜಿ ಅಧ್ಯಕ್ಷ ಎಂ.ಆರ್. ರವಿಶಂಕರ್ ಮೂವರು ಬಿಜೆಪಿ ಮುಖಂಡರ ಮೇಲೆ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

