ಬಿಜೆಪಿ ಕೋಟೆ ಛಿದ್ರ: ಜೆಡಿಎಸ್- ಕೈ ಭದ್ರ
ಕ.ಪ್ರ. ವಾರ್ತೆ, ಚಿಕ್ಕಮಗಳೂರು, ಮೇ 8
ಜಿಲ್ಲೆಯ ಬಿಜೆಪಿ ಕೋಟೆ :ಜಿದ್ರವಾಗಿದೆ. ಮತದಾರರು ಮೂರು ಪಕ್ಷಗಳನ್ನು ತೃಪ್ತಿಪಡಿಸುವ ಕೆಲಸ ಮಾಡಿದ್ದಾರೆ.
ಇಲ್ಲಿನ ಐದು ಕ್ಷೇತ್ರಗಳಲ್ಲಿ ಚಿಕ್ಕಮಗಳೂರು ಮತ್ತು ಶೃಂಗೇರಿ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತೆ ಗೆಲವು ಸಾಧಿಸಿದ್ದರೆ, ಜೆಡಿಎಸ್ ಕಡೂರು ಮತ್ತು ಮೂಡಿಗೆರೆ ಕ್ಷೇತ್ರದಲ್ಲಿ ಗೆದ್ದಿದೆ. ಕಾಂಗ್ರೆಸ್ ತರೀಕೆರೆಯಲ್ಲಿ ಜಯಗಳಿಸಿದೆ.
ಬಿಜೆಪಿಗೆ ಮೈನಸ್: 2008ರ ಚುನಾವಣೆಯಲ್ಲಿ ಇಲ್ಲಿನ ಐದು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಯ ಕಮಲ ಅರಳಿತ್ತು. ಕಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿತ್ತು. 2010ರಲ್ಲಿ ಕಡೂರು ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಈ ಮೂಲಕ ಐದೂ ಕ್ಷೇತ್ರಗಳು ಬಿಜೆಪಿ ತನ್ನ ಮಡಿಲಿಗೆ ಹಾಕಿಕೊಂಡಿತು. ಆದರೆ, ಈ ಚುನಾವಣೆ ಬಿಜೆಪಿಗೆ ದೊಡ್ಡ ಪೆಟ್ಟು ನೀಡಿದೆ. ಕೇವಲ ಎರಡು ಕ್ಷೇತ್ರಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನುಳಿದ ಮೂರು ಕ್ಷೇತ್ರಗಳ ಪೈಕಿ ಮೂಡಿಗೆರೆ ಕ್ಷೇತ್ರದಲ್ಲಿ ಆರಂಭದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಪಿ. ಕುಮಾರಸ್ವಾಮಿ ಮುನ್ನಡೆ ಸಾಧಿಸಿದರು. ಕೊನೆಯ ಹಂತದಲ್ಲಿ ಮೂರನೇ ಸ್ಥಾನಕ್ಕೆ ತೆರಳಿದರು. ಇನ್ನುಳಿದಂತೆ ತರೀಕೆರೆ ಮತ್ತು ಕಡೂರು ಕ್ಷೇತ್ರಗಳಲ್ಲಿ ಬಿಜೆಪಿ ಪ್ರತಿಸ್ಪರ್ಧೆಯ ಹಂತಕ್ಕೆ ಬರಲೇ ಇಲ್ಲ. ಈ ಮೂರು ಕ್ಷೇತ್ರಗಳಲ್ಲಿ ಮತದಾರರು ಬಿಜೆಪಿಯನ್ನು ಪೂರ್ಣ ಪ್ರಮಾಣದಲ್ಲಿ ತಿರಸ್ಕರಿಸಿದ್ದಾರೆ.
ನಿರೀಕ್ಷಿತ ಮತಗಳಿಲ್ಲ: ಚಿಕ್ಕಮಗಳೂರು, ಶೃಂಗೇರಿ ಹಾಗೂ ತರೀಕೆರೆ ಕ್ಷೇತ್ರಗಳಲ್ಲಿ ಜೆಡಿಎಸ್ಗೆ ನಿರೀಕ್ಷಿತ ಮಟ್ಟದಲ್ಲಿ ಮತಗಳು ಬಂದಿಲ್ಲ. ಜೆಡಿಎಸ್ ಅಭ್ಯರ್ಥಿಗಳು ಮೂರನೇ ಸ್ಥಾನದಲ್ಲಿಯೇ ನಿಂತುಕೊಳ್ಳುವಂತಾಯಿತು. ಕಾಂಗ್ರೆಸ್ ಮೂಡಿಗೆರೆ, ಚಿಕ್ಕಮಗಳೂರು ಹಾಗೂ ಶೃಂಗೇರಿ ಕ್ಷೇತ್ರಗಳಲ್ಲಿ ಪ್ರತಿಸ್ಪರ್ಧಿಯಾಗಿತ್ತು. ಕಡೂರು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿತ್ತು.
ಕೊನೆ ಕ್ಷಣ: ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಕಡೂರು ಕ್ಷೇತ್ರದ ಮತ ಎಣಿಕೆ ಆರಂಭದಲ್ಲಿಯೇ ಜೆಡಿಎಸ್ನ ವೈಎಸ್ವಿ ದತ್ತ ಅವರು ಮುನ್ನಡೆ ಸಾಧಿಸುತ್ತಲೇ ಬಂದರು. ಇನ್ನುಳಿದ ನಾಲ್ಕು ಕ್ಷೇತ್ರಗಳ ಫಲಿತಾಂಶ ಕೊನೆ ಕ್ಷಣದವರೆಗೂ ಕುತೂಹಲ ಮೂಡಿಸಿತ್ತು.
ತೀವ್ರ ಪೈಪೋಟಿ: ತರೀಕೆರೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೋಪಿಕೃಷ್ಣ ಅವರು ಕಾಂಗ್ರೆಸ್ ಮತ್ತು ಕೆಜೆಪಿ ಅಭ್ಯರ್ಥಿಗಳನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದ್ದರು. ಕೆಜೆಪಿಯ ಡಿ.ಎಸ್. ಸುರೇಶ್ ಮತ್ತು ಕಾಂಗ್ರೆಸ್ ಜಿ.ಎಚ್. ಶ್ರೀನಿವಾಸ್ ನಡುವೆ ತೀವ್ರ ಪೈಪೋಟಿ ನಡೆಯಿತು. ಜಿ.ಎಚ್. ಶ್ರೀನಿವಾಸ್ ಅವರು 35,817 ಮತಗಳನ್ನು ಪಡೆದುಕೊಂಡಿದ್ದರೆ, ಸಮೀಪದ ಪ್ರತಿಸ್ಪರ್ಧಿ ಕೆಜೆಪಿಯ ಡಿ.ಎಸ್. ಸುರೇಶ್ 34,918 ಮತಗಳನ್ನು ಪಡೆದುಕೊಂಡಿದ್ದು, ಶ್ರೀನಿವಾಸ್ ಅವರು 899 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಈ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗೋಪಿಕೃಷ್ಣ 33,554 ಮತಗಳನ್ನು ಪಡೆದುಕೊಂಡು ಮೂರನೇ ಸ್ಥಾನದಲ್ಲಿದ್ದರು.
ನೇರ ಸ್ಪರ್ಧೆ: ಶೃಂಗೇರಿ ಕ್ಷೇತ್ರದ ಮತ ಎಣಿಕೆ ಆರಂಭವಾದಾಗ ಮೊದಲ ನಾಲ್ಕು ಸುತ್ತುಗಳಲ್ಲಿ ಕಾಂಗ್ರೆಸ್ನ ಟಿ.ಡಿ. ರಾಜೇಗೌಡ ಮುನ್ನಡೆ ಸಾಧಿಸಿದ್ದರು. ನಂತರದ ಸುತ್ತುಗಳಲ್ಲಿ ಬಿಜೆಪಿಯ ಡಿ.ಎನ್. ಜೀವರಾಜ್ ಹಾಗೂ ರಾಜೇಗೌಡರ ನಡುವೆ ಕೊನೆ ಕ್ಷಣದವರೆಗೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಟಿ.ಡಿ. ರಾಜೇಗೌಡ ಅವರು 54,950 ಮತಗಳನ್ನು ಪಡೆದುಕೊಂಡಿದ್ದರೆ, ಡಿ.ಎನ್. ಜೀವರಾಜ್ 58,402 ಮತಗಳನ್ನು ಪಡೆಯುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದರು.
ಮೂಡಿಗೆರೆ ಕ್ಷೇತ್ರದಲ್ಲಿ ಮೊದಲ ಐದು ಸುತ್ತುಗಳಲ್ಲಿ ಬಿಜೆಪಿಯ ಎಂ.ಪಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ನ ಬಿ.ಬಿ. ನಿಂಗಯ್ಯ ಅವರ ನಡುವೆ ನೇರ ಸ್ಪರ್ಧೆ ಕಂಡು ಬಂದಿತು. ಆದರೆ, ನಂತರದ ಸುತ್ತುಗಳಲ್ಲಿ ಕಾಂಗ್ರೆಸ್ನ ಬಿ.ಎನ್. ಚಂದ್ರಪ್ಪ ಹಾಗೂ ಜೆಡಿಎಸ್ನ ಬಿ.ಬಿ. ನಿಂಗಯ್ಯ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಬಿ.ಎನ್. ಚಂದ್ರಪ್ಪ 31,782 ಮತಗಳನ್ನು ಪಡೆದುಕೊಂಡಿದ್ದರೆ ಬಿ.ಬಿ. ನಿಂಗಯ್ಯ 32,417 ಮತಗಳನ್ನು ಪಡೆದು ಜಯಗಳಿಸಿದರು. ಎಂ.ಪಿ. ಕುಮಾರಸ್ವಾಮಿ 29,309 ಮತಗಳನ್ನು ಪಡೆದುಕೊಂಡರು.
ಕಡೂರು ಕ್ಷೇತ್ರದ ಮತ ಎಣಿಕೆಯ ಆರಂಭದಿಂದಲೇ ಜೆಡಿಎಸ್ನ ವೈಎಸ್ವಿ ದತ್ತ ಹಾಗೂ ಕೆಜೆಪಿಯ ಬೆಳ್ಳಿ ಪ್ರಕಾಶ್ ನಡುವೆ ನೇರ ಸ್ಪರ್ಧೆ ಇತ್ತು. ಆದರೆ, ಮತ ಎಣಿಕೆಯ ಸುತ್ತುಗಳು ಹೆಚ್ಚಳವಾಗುತ್ತಿದ್ದಂತೆ ದತ್ತ ಅವರ ಮತಗಳ ಅಂತರ ಏರು ದಾರಿಯಲ್ಲಿ ಸಾಗಿತು. ಬೆಳ್ಳಿ ಪ್ರಕಾಶ್ 26,300 ಮತಗಳನ್ನು ಪಡೆದುಕೊಂಡಿದ್ದರೆ, ವೈಎಸ್ವಿ ದತ್ತ 68,733 ಮತಗಳನ್ನು ಪಡೆದು, 42,433 ಮತಗಳ ಅಂತರದಿಂದ ಗೆಲವು ಸಾಧಿಸಿದರು. ಈ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದವರೆಂಬ ಹೆಗ್ಗಳಿಕೆಗೆ ದತ್ತ ಪಾತ್ರರಾದರು. ಕಾಂಗ್ರೆಸ್ನ ಕೆ.ಬಿ. ಮಲ್ಲಿಕಾರ್ಜುನ ಅವರು ಪಡೆದ ಮತ 24,745.
ಚಿಕ್ಕಮಗಳೂರು ಕ್ಷೇತ್ರದ ಮತ ಎಣಿಕೆ ಆರಂಭದಲ್ಲಿ ಸಿ.ಟಿ. ರವಿ ಮುನ್ನಡೆ ಸಾಧಿಸಿದರು. ಮತಗಳ ಅಂತರ ಕೊನೆಯ ಸುತ್ತಿನವರೆಗೆ ಕುತೂಹಲ ಮೂಡಿಸಿತು. ಸಿ.ಟಿ. ರವಿ ಹಾಗೂ ಕಾಂಗ್ರೆಸ್ನ ಕೆ.ಎಸ್. ಶಾಂತೇಗೌಡರ ನಡುವೆ ನೇರ ಸ್ಪರ್ಧೆ ನಡೆಯಿತು. ಸಿ.ಟಿ. ರವಿ 58,683 ಮತಗಳನ್ನು ಪಡೆದುಕೊಂಡಿದ್ದರೆ, ಶಾಂತೇಗೌಡ 47,695 ಮತಗಳನ್ನು ಪಡೆದರು. ಜೆಡಿಎಸ್ನ ಎಸ್.ಎಲ್. ಧರ್ಮೇಗೌಡ 24,913 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಲುಪಿದ್ದಾರೆ. ಸಿ.ಟಿ. ರವಿ ಅವರು 10,988 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.
ಒಟ್ಟಾರೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವಿನ ಜಗಳ ಅವರಿಗೆ ನಷ್ಟ ಉಂಟು ಮಾಡಿದ್ದು, ಜೆಡಿಎಸ್ಗೆ ಲಾಭವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

