ಅಭಿವೃದ್ಧಿಗಿಂತ ಅಪಘಾತವೇ ಹೆಚ್ಚು
ಅನಂತ ನಾಡಿಗ್
ಕ.ಪ್ರ.ವಾರ್ತೆ ಟಿ ತರೀಕೆರೆ ಟಿ ಮೇ 20
ವಾರಕ್ಕೆರಡು ವಾಹನ ಅಪಘಾತ, ಇನ್ನೂ ಬಾಳಿ ಬದುಕಬೇಕಾದ ಅಮೂಲ್ಯ ಜೀವಗಳ ಕಣ್ಮರೆ, ಇದು ಯಾವುದೋ ಸಿನಿಮಾ ಕಥೆಯೋ ಅಥವಾ ಕಾದಂಬರಿಯ ಸಾಲುಗಳಲ್ಲ, ತರೀಕೆರೆ ಪಟ್ಟಣ ಬಿ.ಎಚ್. ರಸ್ತೆಯ ವ್ಯಥೆ.
ಇದೇನು ರಾಜಧಾನಿ ಬೆಂಗಳೂರಿನ ರಸ್ತೆಯೋ ಅಥವಾ ತರೀಕೆರೆ ಬಿ.ಎಚ್. ರಸ್ತೆಯೋ ಎಂದು ಅನುಮಾನ ಪಟ್ಟರೆ ಆದರಲ್ಲಿ ಅಚ್ಚರಿಯಿಲ್ಲ. ಏಕೆಂದರೆ ತರೀಕೆರೆ ಬಿ.ಎಚ್. ರಸ್ತೆಯಲ್ಲಿ ಬೆಂಗಳೂರನ್ನು ಮೀರಿಸುವಂತಹ ಜನದಟ್ಟಣೆ. ಕ್ಷಣ ಹೊತ್ತೂ ಪುರುಸೊತ್ತಿಲ್ಲದಂತೆ ಒಂದರ ಹಿಂದೆ ಒಂದು ಎಡಬಿಡದೆ ಸಂಚರಿಸುವ ಸರಕು ತುಂಬಿದ ಬಾರೀ ವಾಹನ, ಪ್ರಯಾಣಿಕರ ವಾಹನ, ಲಗೇಜು ತುಂಬಿದ ಗಾಡಿ, ಟ್ರ್ಯಾಕ್ಟರ್, ಬೈಕು, ಸೈಕಲ್ ಇತ್ಯಾದಿ ವಾಹನಗಳ ಭರಾಟೆ.
ಜಿಲ್ಲಾ ಕೇಂದ್ರ ಚಿಕ್ಕಮಗಳೂರನ್ನು ಹೊರತುಪಡಿಸಿದರೆ ಇಡೀ ಜಿಲ್ಲೆಯಲ್ಲಿ ತರೀಕೆರೆ ಬಹು ದೊಡ್ಡ ಪಟ್ಟಣ ಕೇಂದ್ರ. ಮುನ್ನೂರಕ್ಕೂ ಹೆಚ್ಚು ಹಳ್ಳಿಗಳಿಂದ ಸುತ್ತವರಿದ ಪ್ರಮಖ ತಾಲೂಕು ಕೇಂದ್ರ. ಮೇಲಾಗಿ, ಮುಖ್ಯ ಕಂದಾಯ ಉಪವಿಭಾಗ ಹೊಂದಿರುವ ತರೀಕೆರೆ ಪಟ್ಟಣದಲ್ಲಿ ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ಸಗಟು ವ್ಯಾಪಾರಿ ಕೇಂದ್ರಗಳು, ವಾರದ ಸಂತೆ ವಹಿವಾಟು, ಅಸಂಖ್ಯ ವಾಣಿಜ್ಯ ಮಳಿಗೆಗಳು, ಅಡಿಕೆ ಬಾಳೆ ತೆಂಗು ಮಾರಾಟ ಮಳಿಗೆಗಳು ಕೇಂದ್ರೀಕೃತವಾಗಿದೆ.
ಮೇಲಾಗಿ ಇದೆಲ್ಕದಕ್ಕಿಂತ ಪಟ್ಟಣದಲ್ಲಿ 206 ರಾ.ಹೆದ್ದಾರಿ ಹಾದು ಹೋಗಿರುವುದರಿಂದ ಸಹಜವಾಗಿಯೇ ದಿನದ 24 ಗಂಟೆಯೂ ಹಗಲು ರಾತ್ರಿ ಎನ್ನದೆ ರಸ್ತೆ ದಟ್ಟ ವಾಹನ ಮತ್ತು ಜನಸಂಚಾರ ಗಳಿಂದ ಕೂಡಿರುತ್ತದೆ.
ಅಪಾಯಕಾರಿ ರಸ್ತೆ: ಶಾಲಾ ಕಾಲೇಜು ವಿದ್ಯಾರ್ಥಿಗಳು ಸಂಚರಿಸಬೇಕಾಗಿರುವುದೂ ಈ ರಸ್ತೆಯಲ್ಲಿ ಮಾತ್ರವೇ. ಪ್ರತಿ ನಾಲ್ಕು ಸೆಕೆಂಡಿಗೆ ಎರಡೂ ಮುಖಗಳಿಂದ ವೇಗವಾಗಿ ವಾಹನ ಚಲಿಸುತ್ತಿರುತ್ತದೆ. ರಸ್ತೆಯ ಒಂದು ಮಗ್ಗುಲಿನಿಂದ ಮತ್ತೊಂದು ಮಗ್ಗುಲಿಗೆ ಹೋಗಬೇಕಾದರೆ ಖಂಡಿತವಾಗಿ ಪಾದಚಾರಿಗಳು ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಹೋಗಬೇಕಾಗಿರುತ್ತದೆ.
ಎಲ್ಲ ಊರುಗಳಲ್ಲಿ ಆದಂತೆ ತರೀಕೆರೆ ಪಟ್ಟಣದಲ್ಲೂ ನಾಲ್ಕು ವರ್ಷಗಳ ಹಿಂದೆ ಬಿ.ಎಚ್.ರಸ್ತೆ ಅಗಲೀಕರಣವಾಯಿತು. ತಾಲೂಕು ಅಡಳಿತದ ಮನವಿ ಮೇರೆಗೆ ತರೀಕೆರೆ ಪಟ್ಟಣ ಸುಂದರವಾಗಿ ಕಂಡರೆ ಸಾಕು ಎಂದು ಜನರೂ ಕೂಡ ಸ್ವಯಂ ಪ್ರೇರಿತರಾಗಿ ರಸ್ತೆ ಅಗಲೀಕರಣಕ್ಕೆ ಮನಃ ಪೂರ್ವಕವಾಗಿ ಸಹಕರಿಸಿದರು. ಆದರೆ ದುರ್ದೈವ ರಸ್ತೆ ಅಗಲೀಕರಣವಾಯಿತೇ ವಿನಃ ರಸ್ತೆ ಸ್ವಲ್ಪವೂ ಅಭಿವೃದ್ಧಿಯಾಗಲೇ ಇಲ್ಲ.
ಅಭಿವೃದ್ಧಿ ಗಗನ ಕುಸುಮ: ಬಿ.ಎಚ್.ರಸ್ತೆ ಹಾದು ಹೋಗಿರುವ ಎಲ್ಲ ಊರುಗಳಲ್ಲೂ ರಸ್ತೆ ಅಗಲೀಕರಣವಾದ ಕೆಲವೇ ತಿಂಗಳುಗಳಲ್ಲಿ ಅಭಿವೃದ್ಧಿಯಾಯಿತು. ಆದರೆ ತರೀಕೆರೆ ಬಿ.ಎಚ್. ರಸ್ತೆ ಮಾತ್ರ ಇಂದಿಗೂ ಅಭಿವೃದ್ಧಿ ಆಗದೇ ಅನಾಥವಾಗಿದೆ.
ಅದೇ ಹಳೇ ಚರಂಡಿ, ಹಳೇ ವಿದ್ಯುತ್ ಕಂಬಗಳು, ರಸ್ತೆ ನಡುವೆಯೇ ಲಾರಿ, ಟ್ರ್ಯಾಕ್ಟಕ್, ಟ್ರಕ್ ಇತ್ಯಾದಿ ವಾಹನಗಳು ಎಲ್ಲೆಂದರಲ್ಲಿ ನಿಂತಿರುತ್ತದೆ. ಪಾದಚಾರಿಗಳು ಸಂಚರಿಸಲು ಸುರಕ್ಷಿತ ಫುಟ್ಪಾತ್ ಇಲ್ಲ. ಹೊರ ಊರಿನಿಂದ ತರೀಕೆರೆ ಪಟ್ಟಣ ಪ್ರವೇಶಿಸುವ ವಾಹನಗಳು ಊರಿನ ಹೊರಗೆ ಇದ್ದ ವೇಗವನ್ನೇ ಪಟ್ಟಣ ವ್ಯಾಪ್ತಿಗೂ ಅಳವಿಡಿಸಿರುತ್ತಾರೆ, ವೇಗ ನಿಯಂತ್ರಣ ಇಲ್ಲವೇ ಇಲ್ಲ.
ಮೇಲಿಂದ ಮೇಲೆ ಅಪಘಾತ: ಅವೈಜ್ಞಾನಿಕ ರಸ್ತೆ ರಚನೆಯಿಂದ ಮತ್ತು ಸಂಚಾರ ನಿಯಂತ್ರಿಸುವ ಯಾವುದೇ ಪ್ರಯತ್ನವಿಲ್ಲದಿರುವುದರಿಂದ ಪಟ್ಟಣದ ವ್ಯ್ಪಾಪ್ತಿಯಲ್ಲಿ ವಾಹನ ಅಪಘಾತ ಮೇಲಿಂದ ಮೇಲೆ ಸಂಭವಿಸಿ ಬಾಳಿ ಬದುಕಬೇಕಾದ ಅಮೂಲ್ಯ ಜೀವಿಗಳ ಪ್ರಾಣ ಹರಣವಾಗುತ್ತಿದೆ. ಬಿ.ಎಚ್. ರಸ್ತೆಯಲ್ಲಿ ಎಗ್ಗಿಲ್ಲದೆ ಸಂಚರಿಸುವ ವಾಹನಗಳು ಯಾರ ಪ್ರಾಣ ಹರಣ ಮಾಡುತ್ತದೆಯೋ ಎಂದು ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳು ಹೆದರಿಕೆಯಿಂದಲೇ ಹೆಜ್ಜೆ ಹಾಕಬೇಕಾಗುತ್ತಿದೆ. ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಅಗಲೀಕರಣವನ್ನು ಮಿಂಚಿನ ವೇಗದಲ್ಲಿ ಮುಗಿಸಿದ ತಾಲೂಕು ಅಡಳಿತ ಇದೀಗ ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಮಾತ್ರ ಆಮೆ ವೇಗದಲ್ಲಿ ಹೆಜ್ಜೆ ಹಾಕುತ್ತಿರುವುದು ಸಾರ್ವಜನಿಕರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

