ಭಾರೀ ಮಳೆಗೆ ಭೀತಿಗೊಂಡ ಜನ
ನರಸಿಂಹರಾಜಪುರ, ಮೇ 21
ಪಟ್ಟಣದ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಸುಮಾರು 2 ಗಂಟೆಗಳ ಕಾಲ ಸುರಿದ ಭಾರೀ ಮಳೆ, ಗುಡುಗು, ಸಿಡಿಲಿನಿಂದ ಹಲವು ಮನೆಯ ವಿದ್ಯುತ್ ಉಪಕರಣ, ಕಂಪ್ಯೂಟರ್, 50 ಕ್ಕೂ ಹೆಚ್ಚು ಯು.ಪಿ.ಎಸ್ ಸುಟ್ಟು ಹೋಗಿದ್ದು ಜನರು ಕಂಗಾಲಾಗುವಂತೆ ಮಾಡಿತು.
ರಾತ್ರಿ 10.30ಕ್ಕೆ ಗುಡುಗು, ಸಿಡಿಲು, ಮಿಂಚಿನೊಂದಿಗೆ ಶುರುವಾದ ಮಳೆ ನಿರಂತರವಾಗಿ 2 ಗಂಟೆ 146 ಮಿ.ಮೀ.ಮಳೆ ಸುರಿದಿದೆ. ಹಲವು ಮನೆಗಳಿಗೆ ನೀರು ನುಗ್ಗಿದೆ. ಹೌಸಿಂಗ್ ಬೋರ್ಡ್ ಕಾಲೋನಿಯ ಸುನೀಲ್ ಎಂಬುವರ ಮನೆಗೆ ಸಿಡಿಲು ಬಡಿದು ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ರಾಜೀವ ನಗರದ ಸಮೀಪದ ಸೌದೆ ಡಿಪೋದ 150 ಅಡಿ ಕಾಂಪೌಂಡು ನೀರಿನಿಂದ ಕೊಟ್ಟಿಕೊಂಡು ಹೋಗಿದೆ.
ಇಂದಿರಾ ನಗರದ ಗಿರಿರಾಜ್ ಅವರ ಮನೆ ಹಿಂಬದಿಯ ಗೋಡೆ ಉರುಳಿದೆ. ಲಿಂಗಾಪುರ ಗ್ರಾಮದ ಮೀನ್ ಕ್ಯಾಂಪ್ ಸಮೀಪದ ರಸ್ತೆಯಲ್ಲಿ ಮರವೊಂದು ವಿದ್ಯುತ್ ಕಂಬದ ಮೇಲೆ ಉರುಳಿ ಬಿದ್ದು, ಸಂಚಾರಕ್ಕೆ ತೊಂದರೆ ಉಂಟಾಯಿತು.
ಪಟ್ಟಣದ ಬಾವಿಹಟ್ಟಿ ರಸ್ತೆಯಲ್ಲಿ ವಿದ್ಯುತ್ ಕಂಬದ ಮೇಲೆ ಮರವೊಂದು ಉರುಳಿ ಬಿದ್ದಿದೆ. ಇನ್ ಕೇಬಲ್ ಕಚೇರಿ ವಿದ್ಯುತ್ ಉಪಕರಣ ಸುಟ್ಟುಗೋಗಿದೆ. ಎಡದಾಳ್ ರಸ್ತೆಯ ಮೋರಿ ಕಿತ್ತು ಹೋಗಿದ್ದು, ರಸ್ತೆ ಮೇಲೆ ನೀರು ಹರಿದಿದೆ.
ಮನೆಯೊಳಗೆ ಹಳ್ಳ ಬಂತು: ರಾಜೀವ್ ನಗರ ಸಮೀಪ 4 ಎಕ್ರೆ ವಿಸ್ತೀರ್ಣದ ಸೌದೆ ಡಿಪೋ ಜಾಗದಲ್ಲಿ ಕೆರೆಯಂತೆ ನೀರು ತುಂಬಿಕೊಂಡು 150 ಅಡಿ ಉದ್ದದ ಕಾಂಪೌಂಡು ಉರುಳಿ ಬಿದ್ದಿದೆ. ಸೌದೆ ಡಿಪೋ ಜಾಗದಲ್ಲಿ ತುಂಬಿಕೊಂಡಿದ್ದ ನೀರು ಏಕಾಏಕಿ ಹಳ್ಳದಂತೆ ಹರಿದು ಪಕ್ಕದಲ್ಲಿದ್ದ ಬಸ್ಸು ಏಜೆಂಟ್ ರಮೇಶ್ ಎಂಬುವರ ಅಂಗಡಿ, ಮನೆಯೊಳಗೆ ನುಗ್ಗಿದೆ. ಇದರಿಂದ ಅಂಗಡಿ ಸಾಮಾನು, ಮನೆಯೊಳಗಿನ ಪರಿಕರಗಳು, ಮನೆಯ ಹೊರಗೆ ಇದ್ದ 3 ಸೈಕಲ್ ಸೇರಿದಂತೆ ಎಲ್ಲಾ ವಸ್ತುಗಳು ನೀರಿನಲ್ಲಿ ಕೊಚ್ಚಿಕೊಂಡು ಪಕ್ಕದಲ್ಲಿದ್ದ ಕೆರೆಗೆ ಸೇರಿದೆ.
ಇದರಿಂದ ರಮೇಶ್ ಅವರಿಗೆ ಲಕ್ಷಾಂತರ ರು. ನಷ್ಟ ಉಂಟಾಗಿದೆ. ಸೌದೆ ಡಿಪೋದ 150 ಅಡಿ ಉದ್ದದ ಕಾಂಪೌಂಡು ಸುಮಾರು 10 ಅಡಿ ದೂರಕ್ಕೆ ಎಸೆದು ಬಿದ್ದಂತೆ ಕಾಣುತ್ತಿದೆ. ಇದು ಕಾಂಪೌಂಡಿಗೆ ಸಿಡಿಲು ಬಡಿದಿರುವುದರಿಂದ ಕಾಂಪೌಂಡು ಬಿದ್ದಿರಬಹುದೇ ಅಥವಾ ನೀರಿನ ರಭಸಕ್ಕೆ ಕಾಂಪೌಂಡು ಬಿದ್ದಿರಬಹುದೇ ಎಂಬ ಗೊಂದಲ ಉಂಟಾಗಿದೆ.
ನೋಡಿರಲಿಲ್ಲ: ನನ್ನ ಜೀವನದಲ್ಲೇ ಇಷ್ಟು ಮಳೆ ಕಂಡಿರಲಿಲ್ಲ. ರಾತ್ರಿ 11ಗಂಟೆ ಸುಮಾರಿಗೆ ಏನಾಯಿತು ಎಂದು ನೋಡುವಷ್ಚರಲ್ಲೇ ಸುನಾಮಿ ತರಹ ನೀರಿನ ಪ್ರವಾಹ ನಮ್ಮ ಮನೆಯೊಳಗೆ ನುಗ್ಗಿತು.1 ಗಂಟೆಗೂ ಹೆಚ್ಚು ಕಾಲ ನಮ್ಮ ಮನೆಯೊಳಗೆ ನೀರು ಹರಿಯುತ್ತಿತ್ತು. ರಾತ್ರಿಯಿಡೀ ನಿದ್ರೆ ಮಾಡದೆ ಮಳೆ ನಿಲ್ಲುವುದನ್ನೇ ಕಾಯುತ್ತಿದ್ದೆವು ಎನ್ನುತ್ತಾರೆ ರಮೇಶ್ ಅವರ ಪತ್ನಿ ಅನ್ನಪೂರ್ಣ.
ಪಟ್ಟಣದಲ್ಲಿ ಇಷ್ಟು ಪ್ರಮಾಣದಲ್ಲಿ ಹಿಂದೆಂದೂ ಮಳೆ, ಸಿಡಿಲು ಕಂಡಿರಲಿಲ್ಲ. 2 ಗಂಟೆಗಳ ಕಾಲಕ್ಕೆ 6 ಇಂಚು ಮಳೆ ಅಗಿದೆ.
ಮಳೆ ಜೊತೆಗೆ ಸಿಡಿಲು ಸಹ ಜೋರಾಗಿದ್ದು ವಿದ್ಯುತ್ ಇಲ್ಲದಿದ್ದರೂ ಮಿಂಚು ಬಂದಾಗ ವಿದ್ಯುತ್ ಬಲ್ಪುಗಳು ಉರಿಯುತ್ತಿದ್ದವು. 2 ಗಂಟೆ ಕಾಲ ಜನರು ನಿದ್ರೆ ಮಾಡದೆ ಮಳೆ. ಮಿಂಚು,ಸಿಡಿಲು, ಗುಡುಗು ನಿಲ್ಲುವುದಲ್ಲೇ ಕಾಯುತ್ತಿದ್ದೆವು ಎನ್ನುತ್ತಾರೆ ಪಟ್ಟಣದ ನಾಗರಿಕರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

