ಜಿಲ್ಲೆಯಲ್ಲಿ ಚುರುಕುಗೊಂಡ ಬಿತ್ತನೆ ಕಾರ್ಯ
ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಮೇ 22
ಜಿಲ್ಲೆಯ ಬಯಲುಸೀಮೆ ಸೇರಿದಂತೆ ಮಲೆನಾಡಿನಲ್ಲಿ ಇತ್ತೀಚೆಗೆ ಬಂದ ಮಳೆಯಿಂದಾಗಿ ಭೂಮಿ ಉಳುಮೆ ಜತೆ ಜತೆಗೆ ಬಿತ್ತನೆ ಕಾರ್ಯವು ಚುರುಕುಗೊಂಡಿದೆ.
ಕಳೆದ ಜನವರಿಯಿಂದ ಮೇ 21ರ ವರೆಗೆ ಜಿಲ್ಲೆಯ ವಾಡಿಕೆಯ ಮಳೆ ಸರಾಸರಿ 141.3 ಮಿ.ಮೀ. ಆದರೆ, ಈವರೆಗೆ ಬಿದ್ದ ಮಳೆ 195.7 ಮಿ.ಮೀ. ಅಂದರೆ ಶೇ.138.5 ರಷ್ಟು ಮಳೆಯಾಗಿದೆ.
ಈ ವರೆಗೆ ಚಿಕ್ಕಮಗಳೂರು ತಾಲೂಕಿನಲ್ಲಿ 327.8 ಮಿ.ಮೀ., ಕಡೂರು- 93.9 ಮಿ.ಮೀ., ಕೊಪ್ಪ- 105.6, ಮೂಡಿಗೆರೆ- 291.5, ಎನ್.ಆರ್.ಪುರ- 265.4, ಶೃಂಗೇರಿ- 155.2, ತರೀಕೆರೆ- 130.3 ಮಿ.ಮೀ. ಮಳೆ ಬಂದಿದ್ದು, ಬರ ಪೀಡಿತ ಕಡೂರು ತಾಲೂಕಿನಲ್ಲಿ ಈ ವರೆಗಿನ ವಾಡಿಕೆಗಿಂತ ಕಡಿಮೆ ಮಳೆ ಬಂದಿದೆ.
ಮುಂಗಾರು ಆರಂಭಗೊಳ್ಳುವ ಮೊದಲು ಬಂದ ಮಳೆಯಿಂದಾಗಿ ಭೂಮಿಯನ್ನು ಉಳುಮೆ ಮಾಡುವ ಜತೆಗೆ ಎಣ್ಣೆಕಾಳು ಬೀಜಗಳ ಬಿತ್ತನೆ ಕಾರ್ಯ ಚುರುಕುಗೊಂಡಿದೆ.
ನೆಲಗಡಲೆ, ಜೋಳ ಬಿತ್ತನೆ: ಮುಂಗಾರಿನಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿತ್ತನೆ ಗುರಿ 1.61 ಲಕ್ಷ ಹೆಕ್ಟೇರ್, ಈವರೆಗೆ 7,190 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ಇದರಲ್ಲಿ ಪ್ರಮುಖವಾಗಿ ಎಳ್ಳು, ಹೆಸರು, ಅಲಸಂದೆ, ಉದ್ದು ಬೆಳೆಗಳು, ಕಡೂರು ತಾಲೂಕಿನಲ್ಲಿ 4800 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದ್ದರೆ, ತರೀಕೆರೆಯಲ್ಲಿ 1500 ಹೆಕ್ಟೇರ್ ಬಿತ್ತನೆಯಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 890 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಮುಸುಕಿನ ಜೋಳ ಹಾಗೂ ನೆಲಗಡಲೆ ಬಿತ್ತನೆ ಕಾರ್ಯ ಚುರುಕುಗೊಂಡಿದೆ.
ಬಿತ್ತನೆ ಬೀಜ: ಜಿಲ್ಲೆಗೆ 14,535 ಕ್ವಿಂಟಾಲ್ ಬಿತ್ತನೆ ಬೀಜದ ಅವಶ್ಯಕತೆ ಇದ್ದು, ಈ ಪೈಕಿ ಈಗಾಗಲೇ ಜಿಲ್ಲೆಗೆ 6250 ಕ್ವಿಂಟಾಲ್ ಬಿತ್ತನೆ ಬೀಜ ಸರಬರಾಜು ಆಗಿದೆ. ಎಳ್ಳು, ಅಲಸಂದೆ, ಉದ್ದು ಬಿತ್ತನೆ ಬೀಜಗಳನ್ನು ರೈತರು ಖರೀದಿ ಮಾಡಿ ಬಿತ್ತನೆ ಮಾಡಿದ್ದಾರೆ. ಮೇ ಅಂತ್ಯದವರೆಗೆ ಜಿಲ್ಲೆಗೆ 27,270 ಟನ್ ರಸಗೊಬ್ಬರದ ಬೇಡಿಕೆ ಇದ್ದು, ಈ ಪೈಕಿ 26,380 ಟನ್ ಗೊಬ್ಬರ ಪೂರೈಕೆಯಾಗಿದೆ. ಇದರಲ್ಲಿ ಚಿಕ್ಕಮಗಳೂರು ಹಾಗೂ ಕಡೂರಿನಲ್ಲಿರುವ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದಲ್ಲಿ 19,806 ಟನ್ ಗೊಬ್ಬರ ದಾಸ್ತಾನು ಇದೆ. ಇದರಲ್ಲಿ ಡಿಎಪಿ, ಎಂಓಪಿ, ಯೂರಿಯಾ ಗೊಬ್ಬರ ಇದೆ. ಸದ್ಯ ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕೊರತೆ ಇಲ್ಲ.
ಆಲೂಗಡ್ಡೆ: ಆಲೂಗಡ್ಡೆ ಬಿತ್ತನೆಗೆ ಇದು ಸಕಾಲ, ಅದುದರಿಂದ ರೈತರು ಬಿತ್ತನೆ ಕಾರ್ಯದಲ್ಲಿ ಬಿಜಿಯಾಗಿದ್ದಾರೆ. ಇದಕ್ಕಾಗಿ ಭೂಮಿಯನ್ನು ಹದಗೊಳಿಸುವ ಕೆಲಸದಲ್ಲಿ ತೊಡಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಲೂಗಡ್ಡೆ ಬಿತ್ತನೆ ಬೀಜ ಸಿಗುವುದಿಲ್ಲ. ಅದುದರಿಂದ ನೆರೆಯ ಹಾಸನ ಜಿಲ್ಲೆಯಿಂದ ಬೀಜ ಖರೀದಿ ಮಾಡಿ ತರುತ್ತಿದ್ದಾರೆ.
ಜಿಲ್ಲೆಯಲ್ಲಿ ಆಲೂಗಡ್ಡೆ ಬಿತ್ತನೆಯ ಗುರಿ 2500 ಹೆಕ್ಟೇರ್. ಆದರೆ, ಕಳೆದ ವರ್ಷ ಬಿತ್ತನೆಯಾಗಿದ್ದು 1500 ಹೆಕ್ಟೇರ್ ಮಾತ್ರ. ಅಂದರೆ ನಿರೀಕ್ಷಿತ ಗುರಿಯನ್ನು ಮುಟ್ಟಲು ಸಾಧ್ಯವಾಗಿಲ್ಲ. ಸಕಾಲದಲ್ಲಿ ಮಳೆ ಇಲ್ಲದೆ ಕೆಲವೆಡೆ ರೈತರು ಬೆಳೆ ಕಳೆದುಕೊಂಡಿದ್ದರು. ಆದರೆ ಕೈಗೆ ಸಿಕ್ಕಿದ್ದ ಅಲ್ಪಸ್ವಲ್ಪ ಬೆಳೆಗೆ ಬಂಪರ್ ಬೆಲೆ ಸಿಕ್ಕಿತ್ತು. ಅದ್ದರಿಂದಲೇ ಈ ಬಾರಿಯೂ ಕೂಡ ಹೆಚ್ಚು ಬಿತ್ತನೆಯನ್ನು ನಿರೀಕ್ಷಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

