ಕ್ಷೇತ್ರಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ
ಚಿಕ್ಕಮಗಳೂರು ಮೇ 26
ತಾವು ವಿರೋಧ ಪಕ್ಷದ ಶಾಸಕರಾದರೂ ಆಡಳಿತಾರೂಢ ಕಾಂಗ್ರೆಸ್ ಪಕ್ಷದಿಂದ ಕ್ಷೇತ್ರಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ನೆಟ್ಟೆಕೆರೆಹಳ್ಳಿ, ಕುರುವಂಗಿ, ಬಿಳೆಕಲ್ಲು ಗ್ರಾಮಗಳಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮತದಾರರಿಗೆ ಕೃತಜ್ಞತಾ ಸಭೆಗಳಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸರ್ಕಾರದಲ್ಲಿ ಅಭಿವೃದ್ಧಿಗೆ ಸಿಂಹಪಾಲು ಸಿಗುವುದಿಲ್ಲ ಎಂದು ಸುಮ್ಮನೆ ಕೂರುವುದಿಲ್ಲ. ಟೇಬಲ್ ಗುದ್ದಿ ಅನುದಾನ ತರುತ್ತೇನೆ. ಈ ಚುನಾವಣೆಯಲ್ಲಿ ಕಾಂಗ್ರೆಸಿಗರು 11 ಸಾವಿರ ಮತಗಳ ಅಂತರದಲ್ಲಿ ಸೋತಿದ್ದಾರೆ. ಈಗ ಅಭಿವೃದ್ಧಿಗೆ ಅಡ್ಡಗಾಲು ಹಾಕಲು ಮುಂದಾದರೆ ಮುಂದೆ ಕ್ಷೇತ್ರದಲ್ಲಿ ಠೇವಣಿ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ನಮಗೆ ಅಧಿಕಾರ ಮುಖ್ಯವಲ್ಲ ಅಭಿವೃದ್ಧಿಗಾಗಿ ಕುಸ್ತಿ ಮಾಡಿ, ಧರಣಿ ಮಾಡಿ ಅನುದಾನ ತರುತ್ತೇನೆ ಎಂದು ತಿಳಿಸಿದರು.
ಕ್ಷೇತ್ರ ಅಭಿವೃದ್ಧಿಯಾಗಿದೆ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ಹೆಚ್ಚು ಅನುದಾನ ತಂದು ಕೆಲಸ ಮಾಡಿದ್ದೇನೆ. ಸರ್ಕಾರವೂ ಇದಕ್ಕೆ ಒತ್ತು ನೀಡಿತ್ತು. ನಿಮ್ಮೆಲ್ಲರ ಬೆಂಬಲವೂ ಇತ್ತು.
ಇದೇ ಕಾರಣಕ್ಕೆ ಮೂರನೇ ಬಾರಿಗೆ ಗೆದ್ದು ಬರಲು ಸಾಧ್ಯವಾಯಿತು. ನಿಮ್ಮ ಜೊತೆ ಪ್ರೀತಿ ವಿಶ್ವಾಸದಿಂದ ನಡೆದುಕೊಂಡು ಆಡಳಿತ ಪಕ್ಷದಲ್ಲಿ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ಅಭಿವೃದ್ಧಿ ಮತ್ತು ನಮ್ಮ ನಡವಳಿಕೆ ನನ್ನನ್ನು ಗೆಲ್ಲಿಸಿದೆ ಎಂದರು.
ಹೋರಾಟಕ್ಕೆ ಸಿದ್ಧ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ತಾವು ಮಂಜೂರು ಮಾಡಿಸಿದ್ದ ಇಂಜಿನಿಯರಿಂಗ್ ಕಾಲೇಜು ಮತ್ತು ಮೆಡಿಕಲ್ ಕಾಲೇಜುಗಳ ಅನುಷ್ಠಾನಕ್ಕೆ ಈಗಿನ ಕಾಂಗ್ರೆಸ್ ಸರ್ಕಾರ ಅವಕಾಶ ನೀಡುವುದಿಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ. ಯಾವುದೇ ಕಾರಣಕ್ಕೆ ಈ ಎರಡೂ ಕಾಲೇಜು ಹಿಂದಕ್ಕೆ ಹೋಗಲು ಬಿಡುವುದಿಲ್ಲ. ಅಂತಹ ಕೆಲಸಕ್ಕೆ ಸರ್ಕಾರ ಮುಂದಾದಲ್ಲಿ ಎಂತಹ ಹೋರಾಟಕ್ಕೂ ಸಿದ್ಧನಿದ್ದೇನೆ. ನಿಮ್ಮ ಬೆಂಬಲ ಇರಬೇಕು ಎಂದು ಹೇಳಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಶಾಸಕರು ಕುರುವಂಗಿಯನ್ನು ತಮ್ಮ ಸ್ವಂತ ಊರು ಎನ್ನುವಷ್ಟು ಅಭಿಮಾನವಿಟ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದವರು ಹೇಳಿದರು.
ಈಗ ವಿರೋಧ ಪಕ್ಷದಲ್ಲಿರುವ ಕಾರಣಕ್ಕೆ ಆಡಳಿತ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಅಡ್ಡಗಾಲು ಹಾಕಿದರೆ ಶಾಸಕರ ಹೋರಾಟಕ್ಕೆ ಹೆಗಲುಕೊಟ್ಟು ನಿಲ್ಲುತ್ತೇವೆ ಎಂದರು.
ತಾಲೂಕು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಕನಕರಾಜ್, ಸಿಡಿಎ ಮಾಜಿ ಅಧ್ಯಕ್ಷ ಕೋಟೆ ರಂಗನಾಥ್, ಗ್ರಾ.ಪಂ. ಸದಸ್ಯ ಧರ್ಮ, ಪಾರ್ವತಿ, ಪಾಂಡುರಂಗಶೆಟ್ಟಿ, ಉಪಾಧ್ಯಕ್ಷ ನಾಗರಾಜು, ಮಾಜಿ ಉಪಾಧ್ಯಕ್ಷ ಪುಟ್ಟಸ್ವಾಮಿ ಶೆಟ್ಟಿ, ಉಮೇಶ್, ಸಿದ್ದಯ್ಯ ಉಪಸ್ಥಿತರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

