ಸೀಟ್ ಮ್ಯಾಟ್ರಿಕ್ಸ್ ಪದ್ಧತಿಯಲ್ಲಿ ಬದಲಾವಣೆ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಮೇ 29
ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕೋರ್ಸ್ಗಳಿಗೆ ಪ್ರವೇಶ ಪಡೆಯುವ ಸೀಟ್ ಮ್ಯಾಟ್ರಿಕ್ಸ್ ಪದ್ಧತಿಯಲ್ಲಿ ಹಂತಹಂತವಾಗಿ ಬದಲಾವಣೆಗಳನ್ನು ತಂದು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಕರ್ನಾಟಕ ಪರೀಕ್ಷಾ ಮಂಡಳಿ ನೆರವಾಗಿದೆ ಎಂದು ಸಿ.ಇ.ಟಿ. ಸೆಲ್ನ ನಿವೃತ್ತ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಎಸ್. ನರಸಿಂಹಮೂರ್ತಿ ಅವರು ಹೇಳಿದ್ದಾರೆ.
ನಗರದ ಎಂ.ಇ.ಎಸ್. ಛೇಂಬರ್ ಆಫ್ ಕಾಮರ್ಸ್ ಹಾಗೂ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಸಂಯುಕ್ತಾಶ್ರಯದಲ್ಲಿ ನಗರದ ಎಂ.ಇ.ಎಸ್. ಸಭಾಂಗಣದಲ್ಲಿ ಏರ್ಪಡಿಸಿದ್ದ ಸೀಟ್ ಮ್ಯಾಟ್ರಿಕ್ಸ್ ಬಗೆಗಿನ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಉಪಯುಕ್ತ: ಈ ಶಿಬಿರ ಸಿ.ಇ.ಟಿ. ಮೂಲಕ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕೋರ್ಸ್ಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿದೆ. ಪಿಯುಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳು ಸಿಇಟಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆಯಲು ಬಹಳ ಪ್ರಮುಖವಾಗುತ್ತವೆ ಎಂದ ಅವರು, ಸಿಇಟಿ ಸಂದರ್ಶನಕ್ಕೆ ಅಗತ್ಯದ ದಾಖಲೆಗಳನ್ನು ಹೊಂದಿಸುವಿಕೆ ಹಾಗೂ ರ್ಯಾಂಕಿಂಗ್ ಪದ್ಧತಿ ಬಗ್ಗೆ ಅವರು ವಿವರಿಸಿದರು.
2006ರಲ್ಲಿ ಸಿಇಟಿ ಪ್ರಾರಂಭವಾಯಿತು. 2008 ರಲ್ಲಿ ಕರ್ನಾಟಕ ಪರೀಕ್ಷಾ ಮಂಡಳಿ ಸೆಲ್ ಎಂದು ಮರು ನಾಮಕರಣಗೊಂಡಿತು. ಈಗ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಬೆಂಗಳೂರಿನಲ್ಲಿದ್ದ ಸಿಇಟಿ ಕೇಂದ್ರಕ್ಕೆ ಗುಲ್ಬರ್ಗ, ಬೀದರ್, ಬೆಳಗಾಂ ಮುಂತಾದ ಕಡೆಗಳಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಬರುವುದು ಬಹಳ ಕಷ್ಟದ ಕೆಲಸವೆಂದು ಅರಿತ ಸರ್ಕಾರ ನಂತರ ಏಳು ಸಂಸ್ಥೆಗಳಲ್ಲಿ ಈ ದಿನ 13 ಕಡೆ ಸಿಇಟಿ ಕೇಂದ್ರಗಳನ್ನು ಆರಂಭಿಸಿದೆ ಎಂದರು.
ಕುಳಿತಲ್ಲೇ ಮಾಹಿತಿ: ಕಳೆದ ವರ್ಷದಿಂದ ಈ ವ್ಯವಸ್ಥೆ ಪರಿಣಾಮಕಾರಿಯಾಗಲು ಮನೆಯಲ್ಲೇ ಕುಳಿತು ಕಾಲೇಜುಗಳಲ್ಲಿ ಪ್ರವೇಶ ಪಡೆಯಬಹುದಾಗಿದೆ. ಮೆಡಿಕಲ್ ಅಥವಾ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಮೊದಲು ಅರ್ಹತೆ ಇರಬೇಕು.
ಪಿಯುಸಿಯಲ್ಲಿ ಅಗತ್ಯ ಅಂಕಗಳಿಸಿರಬೇಕು. ಜನರಲ್ ಮೆರಿಟ್ ಶೇ. 50ಕ್ಕಿಂತ ಕಡಿಮೆ ಇರಬಾರದು. 2013 ರ ಡಿಸೆಂಬರ್ 31ಕ್ಕೆ 17 ವರ್ಷ ವಯಸ್ಸಾಗಿರಬೇಕು. ಪಿಯು ಪರೀಕ್ಷೆಯಲ್ಲಿ ಗಳಿಸಿದ ಅಂಕಗಳಿಗೆ ಅನುಗುಣವಾಗಿ ರ್ಯಾಂಕ್ ನೀಡಲಾಗುತ್ತದೆ ಎಂದು ಹೇಳಿದರು.
ಶಿಕ್ಷಣ ನೀಡುವುದು ರಾಜ್ಯದ ವಿಷಯವಾದರೂ ವೃತ್ತಿಪರ ಕೋರ್ಸ್ಗಳಾದ ಮೆಡಿಕಲ್ ಡೆಂಟಲ್ ಮತ್ತು ಆರ್ಕಿಟೆಕ್ಟ್ ಕೋರ್ಸ್ಗಳಿಗೆ ಅವಕಾಶದ ಅಧಿಕಾರ ಕೇಂದ್ರ ಸರ್ಕ್ಕಾರದ ಹಿಡಿತದಲ್ಲಿದೆ. ಅವರೇ ಅರ್ಹತೆಯನ್ನು ನಿಗದಿಗೊಳಿಸುತ್ತಾರೆಂದರು.
ಆರ್ಕಿಟೆಕ್ಟ್ ಎಂಜಿನಿಯರಿಂಗ್ ಕೋರ್ಸ್ಗೆ ನಾಟ ಪರೀಕ್ಷೆಯಲ್ಲಿ (ನ್ಯಾಷನಲ್ ಆಟಿಟ್ಯೂಡ್ ಟೆಸ್ಟ್ ಫಾರ್ ಆರ್ಕಿಟೆಕ್ಚರ್) ಹೆಚ್ಚು ಅಂಕಗಳಿಸಬೇಕಾಗಿದೆ. ಭಾರತದಲ್ಲಿ ಕೇವಲ 15 ಕಾಲೇಜುಗಳಲ್ಲಿ ಈ ಕೋರ್ಸ್ಗಳಿದ್ದು 462 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ದೊರಕುತ್ತದೆ. ಆರ್ಕಿಟೆಕ್ಟ್ ಇಂಜಿನಿಯರಿಂಗ್ 5 ವರ್ಷದ ಕೋರ್ಸ್ ಆಗಿದೆ ಎಂದರು.
ಎಂ.ಇ.ಎಸ್. ಜಂಟಿ ಕಾರ್ಯದರ್ಶಿ ಎಸ್. ಶ್ರೀಧರ್ ಮಾತನಾಡಿ, ಈ ಕಾರ್ಯಾಗಾರ ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿನ ಗೊಂದಲ ನಿವಾರಿಸಲು ಏರ್ಪಡಿಸಲಾಗಿದೆ ಎಂದು ಹೇಳಿದರು.
ಪ್ರಾಂಶುಪಾಲ ವಿಷ್ಣುವರ್ಧನ್ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕ ಮಂಜುನಾಥ್ ಭಟ್ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

