ಕನ್ನಡಕ್ಕೆ ಆದ್ಯತೆ ನೀಡಿ ಅನ್ಯ ಭಾಷೆ ಕಲಿಯಿರಿ
ಚಿಕ್ಕಮಗಳೂರು: ಸಾಹಿತ್ಯ ಮನಸ್ಸಿಗೆ ಆನಂದ, ಸಂತೋಷ ನೀಡುತ್ತದೆ ಎಂದು ಜಿ.ಪಂ. ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಹೇಳಿದ್ದಾರೆ.
ಇಲ್ಲಿನ ಕಲ್ಯಾಣನಗರದ ದೀಪಕ್ ದೊಡ್ಡಯ್ಯ ಅವರ ಮನೆ ಸಮರಸದ ಅಂಗಳದಲ್ಲಿ ಭಾನುವಾರ ಸಂಜೆ ಕಸಾಪ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶ ನಮ್ಮ ಪ್ರಾಚೀನ ಸಾಹಿತ್ಯವನ್ನು ಸಮರ್ಥವಾಗಿ ಪೋಷಿಸಿದೆ. ಕನ್ನಡ ಸಾಹಿತ್ಯ ರಾಜಮಹಾರಾಜರ ಕಾಲದಿಂದಲೂ ಪ್ರಾಮುಖ್ಯತೆ ಗಳಿಸಿಕೊಂಡು ಬಂದಿದೆ. ಜನರ ಅನುಭವದ ಹಾಡು, ಕೋಲಾಟ, ಬೀಸೋಪದ ಸೇರಿದಂತೆ ಜನಪದ ಸಾಹಿತ್ಯವೂ ಕನ್ನಡದಲ್ಲಿ ವಿಫುಲವಾಗಿದೆ. ಕನ್ನಡಕ್ಕೆ ಆದ್ಯತೆ ನೀಡಿ ಇತರ ಭಾಷೆಗಳನ್ನೂ ಕಲಿಯಬಹುದೆಂದರು.
ಅನುಭವದಿಂದ ಸಾಹಿತ್ಯ ಸೃಷ್ಟಿಯಾಗಲಿ: ತೇಜಸ್ವಿ ಬದುಕು- ಬರಹ ಕುರಿತು ಮಾತನಾಡಿದ ಸಾಹಿತಿ ಬಿ. ತಿಪ್ಪೇರುದ್ರಪ್ಪ, ಗಟ್ಟಿಯಾದ ಅನುಭವ ದ್ರವ್ಯದಿಂದ ಸಾಹಿತ್ಯ ಕೃಷಿಯಾಗಬೇಕೆಂಬುದು ಅವರ ಅಪೇಕ್ಷೆಯಾಗಿತ್ತು. ಕನ್ನಡ ಸಾಹಿತ್ಯ ಕುವೆಂಪು, ತೇಜಸ್ವಿ ಮತ್ತಿತರರಿಂದ ಗಟ್ಟಿಯಾಗಿದೆ. ಸ್ವತಂತ್ರವಾದ ಪರಿಸರದಲ್ಲಿ ಲೀನವಾಗಿ ಸಾಹಿತ್ಯ ಸೃಷ್ಟಿಸುವ ವಿಶಿಷ್ಟ್ಯ ಗುಣ ಹೊಂದಿದ್ದ ಪೂರ್ಣಚಂದ್ರ ತೇಜಸ್ವಿ ಎಂದೂ ತಮ್ಮ ತಂದೆಯವರ ನೆರಳಿನಲ್ಲಿ ಬೆಳೆಯಲಿಲ್ಲ ಎಂದರು.
ಭಾಷೆ ಬಹಿರ್ಮುಖಿಯಾದರೆ, ಸಾಹಿತ್ಯ ಅಂತರಗಂಗೆಯಾಗಿ ಪ್ರವಹಿಸುತ್ತದೆ. ಅತ್ಯಂತ ಸಮೃದ್ಧವಾದ ಭಾಷೆ ಕನ್ನಡ. ಕನ್ನಡದಲ್ಲಿ ವಿಫುಲವಾದ ವೈವಿಧ್ಯಮಯವಾದ ಪದಸಂಪತ್ತಿದೆ ಎಂದ ಅವರು, ಇಂಗ್ಲೀಷ್ ಭಾಷೆಯಲ್ಲಿ ಸೀಮಿತವಾದ ಪದಗಳಿವೆ ಎಂದು ವಿಶ್ಲೇಷಿಸಿದರು.
ಸಾಹಿತ್ಯವನ್ನು ಆಹ್ವಾದಿಸಿ: ಕಸಬಾ ಹೋಬಳಿ ಕಸಾಪ ಅಧ್ಯಕ್ಷ ದೀಪಕ್ ದೊಡ್ಡಯ್ಯ ಮಾತನಾಡಿ, ಕನ್ನಡದ ಹಿರಿಮೆ, ಗರಿಮೆ ಅರಿವು ನಮಗಿರಬೇಕು. ಸಾಹಿತ್ಯವನ್ನು ಕೇಳಿಸಿಕೊಳ್ಳುವ ಆಸ್ವಾದಿಸುವ ಆಸಕ್ತಿ ನಮ್ಮದಾಗಬೇಕು. ಕನ್ನಡದ ಬಗ್ಗೆ ನಿಜವಾದ ಪ್ರೀತಿ, ಆದರ, ನಿಷ್ಠೆ, ಶ್ರದ್ಧೆ ಕನ್ನಡಿಗರೆಲ್ಲರದಾಗಬೇಕು ಎಂದರು.
ಆಶಾಕಿರಣ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣೇಗೌಡ ಮಾತನಾಡಿ, 2,500 ವರ್ಷಗಳ ಇತಿಹಾಸವಿರುವ ಕನ್ನಡಕ್ಕೆ ವಿಶ್ವದಲ್ಲಿ 30ನೇ ಸ್ಥಾನವಿದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡದ ಮಡಿಲಲ್ಲಿವೆ. ತೇಜಸ್ವಿ ಸಾಹಿತ್ಯದ ಮೂಲಕ ಚಿರಸ್ಥಾಯಿಯಾಗಿ ಕನ್ನಡಿಗರ ಮನದಲ್ಲಿ ಉಳಿದಿದ್ದಾರೆ ಎಂದು ಹೇಳಿದರು.
ಎಐಟಿ ಪ್ರಾಂಶುಪಾಲ ಡಾ. ಸಿ.ಕೆ. ಸುಬ್ರಾಯ, ಛಾಯಾಗ್ರಾಹಕ ಗಿರಿಧರ ಯತೀಶ್ ಅಧ್ಯಕ್ಷತೆ ವಹಿಸಿದ್ದ ಮೋಹನಕುಮಾರ್ ಮಾತನಾಡಿದರು. ಕಸಾಪ ಜಿಲ್ಲಾ ಅಧ್ಯಕ್ಷ ಶಿವಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಶಿವಾನಂದಸ್ವಾಮಿ ಸ್ವಾಗತಿಸಿದರು, ಕುಂದೂರು ಅಶೋಕ್ ಕಾರ್ಯಕ್ರಮ ನಿರೂಪಿಸಿದರು, ವಾಣಿನಾಯ್ಡು ವಂದಿಸಿದರು. ವಸಂತ ರವೀಂದ್ರ ಪ್ರಾರ್ಥಿಸಿದರು. ಮಲ್ಲಿಗೆ ಸುಧೀರ್ ಮತ್ತು ಸಂಪಿಗೆ ಸುಧೀರ್ ಹಾಗೂ ನಾಗರಾಜರಾವ್ ಕಲ್ಕಟ್ಟೆ ಅವರ ಗೀತಗಾಯನ ಗಮನ ಸೆಳೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

