ಎಲ್ಲವನ್ನೂ ಕಾನೂನು ಪರಿಮಿತಿಯೊಳಗೆ ತರಲು ಅಸಾಧ್ಯ
ಕ.ಪ್ರ. ವಾರ್ತೆ ಶೃಂಗೇರಿ ನ.13
ಪ್ರತಿಯೊಬ್ಬ ವ್ಯಕ್ತಿಗೆ ಸಮಾಜದಲ್ಲಿ ಜೀವನ ನಡೆಸಲು ತನ್ನದೇ ಆದ ಹಕ್ಕುಗಳಿವೆ. ಎಲ್ಲವನ್ನು ಕಾನೂನು ಪರಿಮಿತಿಯೊಳಗೆ ತರಲು ಸಾಧ್ಯವಿಲ್ಲ. ಸಂಕಷ್ಟದಲ್ಲಿರುವ ಜನಸಾಮಾನ್ಯರ ಅರಣ್ಯರೋಧನಕ್ಕೆ ಸ್ಪಂದಿಸಿ ಅವರ ಕಷ್ಟಗಳನ್ನು ಪರಿಹರಿಸುವ ಕೆಲಸ ಮಾಡಬೇಕು ಎಂದು ರಾಜ್ಯ ಯುವಜನ ಹಾಗೂ ಮೀನುಗಾರಿಕೆ, ಜಿಲ್ಲಾ ಉಸ್ತುವಾರಿ ಸಚಿವ ಅಭಯಚಂದ್ರ ಜೈನ್ ಅಧಿಕಾರಿಗಳಿಗೆ ಸಲಹೆನೀಡಿದರು.
ಬುಧವಾರ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೆರೆ ಪಂಚಾಯಿತಿ ಕೆರೆಕಟ್ಟೆಯಲ್ಸಿ ಆಯೋಜಿಸಲಾಗಿದ್ದ ದೂರದ ಮತ್ತು ಒಳನಾಡು ಪ್ರದೇಶಾಭಿವೃದ್ಧಿ ವ್ಯಾಪ್ತಿಯ ಗ್ರಾಮಗಳ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
ನೈತಿಕ ಧೈರ್ಯ ತುಂಬಿ: ಈ ಭಾಗದಲ್ಲಿ ಸಾಕಷ್ಟು ಕಾನೂನು ತೊಡಕಿನ ಸಮಸ್ಯೆಗಳು ಉಂಟಾಗಿದ್ದು ಮೂಲ ನಿವಾಸಿಗಳು ತೊಂದರೆ, ಕಿರುಕುಳ ಅನುಭವಿಸುತ್ತಿದ್ದಾರೆ. ಪುನರ್ವಸತಿ ಪ್ಯಾಕೇಜ್ಗಳಿಂದ ಕೆಲವರು ಹೊರಹೋದರೆ, ಉಳಿದರ ಪಾಡು ಹೇಳತೀರದಾಗಿದೆ. ಅವರು ಹತಾಶರಾಗಿದ್ದಾರೆ. ಅಂತಹವರಿಗೆ ನೈತಿಕ ಧೈರ್ಯ ತುಂಬುವ ಕೆಲಸ ನಡೆಯಬೇಕಿದೆ ಎಂದರು.
ಕಾಡು ಪ್ರಾಣಿಗಳನ್ನು ಪ್ರೀತಿಸಿ, ಮನುಷ್ಯರನ್ನು ಹಿಂಸಿಸುವ ಪ್ರವೃತ್ತಿ ಬೇಡ. ಕಾಡು, ಕಾಡು ಪ್ರಾಣಿಗಳು ಇರಬೇಕು. ದೇಶದ ಸಂವಿಧಾನ, ಕಾನೂನಿನಲ್ಲಿ ನಾಗರಿಕರಿಗೆ ತನ್ನದೇ ಆದ ಹಕ್ಕು, ಕರ್ತವ್ಯಗಳಿವೆ. ಅವುಗಳನ್ನು ಪಾಲಿಸಿಕೊಂಡು ಹೋಗಲು ಅಡ್ಡಿಪಡಿಸಬಾರದು.
ಕಾನೂನಿನ ಬಲಪ್ರಯೋಗ ಬೇಡ. ಜನರಿಗೆ ತೊಂದರೆ ನೀಡಬಾರದು. ಅವರ ಸ್ವಾಭಿಮಾನದ ಬದುಕಿಗೆ ಧಕ್ಕೆ ತರುವ ಕೆಲಸ ಮಾಡಬಾರದು ಎಂದು ಹೇಳಿದರು.
ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಒಳ್ಳೆಯ ಕೆಲಸ ಮಾಡಬೇಕು. ಏಕಾಏಕಿ ದೌರ್ಜನ್ಯ ನಡೆಸುವುದು ಸರಿಯಲ್ಲ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಮೂಲ ನಿವಾಸಿಗಳು ತಲೆ ತಲಾಂತರ ವರ್ಷಗಳಿಂದ ಬದುಕುತ್ತಿದ್ದಾರೆ. ಕಾನೂನು ಕಾಯ್ದೆಯ ಹೆಸರಿನಲ್ಲಿ ಅವರಿಗೆ ಕಿರುಕುಳ, ತೊಂದರೆ ಕೊಡುವುದನ್ನು ನಿಲ್ಲಿಸಬೇಕು. ಅವರು ಈ ದೇಶದ ನಾಗರಿಕರು. ಅರಣ್ಯ ಕಾಯ್ದೆ, ಕಾಡುಗಳು ಜಡ್ಜ್ಗಾಗಿ ಇರುವುದಲ್ಲ. ಜನರಿಗಾಗಿ ಇರುವುದು. ಎಲ್ಲವನ್ನು ಕಾನೂನು ವ್ಯಾಪ್ತಿಗೆ ಪರಿಗಣಿಸದೇ ಜನರ ಹಕ್ಕು ಕರ್ತವ್ಯಗಳ ಬಗ್ಗೆ ಚಿಂತಿಸಬೇಕು. ನಾವು ಸಹ ಜನಸಾಮಾನ್ಯರಾಗಿಯೇ ಜನಪ್ರತಿನಿಧಿಗಳಾಗಿರುವುದು. ಮೂಲ ಸೌಕರ್ಯಗಳು, ಅಭಿವೃದ್ಧಿ ಕಾರ್ಯಗಳು ನಡೆಸಬೇಕು ಎಂದು ಸಲಹೆ ನೀಡಿದರು.
ಮರಳು ನೀತಿಯ ಬಗ್ಗೆ ಶೀಘ್ರದಲ್ಲಿ ಪರಿಹಾರ ಕ್ರಮ ತೆಗೆದುಕೊಳ್ಳಲಾಗುವುದು. ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗಿದೆ. ಇನ್ನು ಹದಿನೈದು ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯಲಿದೆ ಎಂದರು.
ಸಮಸ್ಯೆ ಅರಿವಿಗೆ ಬಂದಿದೆ: ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಈಗಾಗಲೇ ಈ ಪ್ರದೇಶಗಳಲ್ಲಿರುವ ಮೂಲ ನಿವಾಸಿಗಳ ಸಮಸ್ಯೆಗಳು ಅರಿವಿಗೆ ಬಂದಿದೆ. ಈ ಬಗ್ಗೆ ಶೀಘ್ರದಲ್ಲಿ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಮಾವಿನಕಾಡು ರಂಗನಾಥ್, ಬಿ. ಶಿವಶಂಕರ್, ತಾಪಂ ಮಾಜಿ ಅಧ್ಯಕ್ಷ ಅರುಣ್ಕುಮಾರ್,ನೂತನ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಮಸ್ಥರು ಮನವಿಗಳನ್ನು ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಯೋಜನೆಗಳು ಫಲಾನುಭವಿಗಳಿಗೆ ಅನುದಾನ ಪತ್ರ, ಚೆಕ್ಗಳನ್ನು ವಿತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

