ಚಿಕ್ಕಮಗಳೂರು

ರೈತರ ಗಮನಕ್ಕೆ ತಾರದೇ ಚಾನಲ್ ಪ್ರಾರಂಭ

Published On :

ನರಸಿಂಹರಾಜಪುರ: ಬೃಹತ್ ನೀರಾವರಿ ಸಚಿವ ಎಂ.ಬಿ. ಪಾಟೀಲ್ ಅವರು ತಾಲೂಕಿನ ಮುತ್ತಿನಕೊಪ್ಪದಲ್ಲಿನ ಭದ್ರಾ ಮೇಲ್ದಂಡೆ ಯೋಜನೆಯಡಿ ಬರುವ ಪ್ಯಾಕೇಜ್- 1 ರ ನೀರಾವರಿ ಕಾಮಗಾರಿ ವೀಕ್ಷಿಸಲು ಗುರುವಾರ ಬಂದಾಗ ರೈತರು ಸಮಸ್ಯೆ ತೋಡಿಕೊಂಡರು.
ಪ್ರಥಮವಾಗಿ ಪ್ಯಾಕೇಜ್ - 1 ರಲ್ಲಿ ಬರುವ ತುಂಗಾ ಮೇಲ್ದಂಡೆ ಹಿನ್ನೀರು ನಿಂತಿರುವ ಮುತ್ತಿನಕೊಪ್ಪ ಚಬ್ಬಳ್ಳಿಗೆ ಬಂದು ಪರಿಶೀಲಿಸಿ, ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಎಂಜಿನಿಯರ್ ಚೆಲವರಾಜ್ ಅವರೊಂದಿಗೆ  ಮಾಹಿತಿ ಪಡೆದುಕೊಂಡರು.
ದಬ್ಬಾಳಿಕೆ: ಈ ಸಂದರ್ಭದಲ್ಲಿ ಮುಖಂಡ ಡಾ.ಕೆ. ಅಂಶುಮಂತ್, ಬಿ.ಎಸ್.ಸುಬ್ರಮಣ್ಯ ಮತ್ತು ಇತರ ಸ್ಥಳೀಯರು ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಇಲ್ಲಿನ ರೈತರಿಗೆ ಆಗುತ್ತಿರುವ ತೊಂದರೆ ಬಗ್ಗೆ ಮಾಜಿ ಸಚಿವೆ ಮೋಟಮ್ಮ, ಸಂಸದ ಜಯಪ್ರಕಾಶ ಹೆಗ್ಡೆ, ಬಸವರಾಜ ಬೊಮ್ಮಾಯಿ ಅವರಿಗೆ ಮನವರಿಕೆ ಮಾಡಿದ್ದೆವು. ಆದರೆ, ರಾತ್ರೋ ರಾತ್ರಿ ರೈತರ ಗಮನಕ್ಕೆ ತರದೆ ಹಿಟಾಚಿ ಯಂತ್ರ ತಂದು ಚಾನೆಲ್ ಕೆಲಸ ಪ್ರಾರಂಭಿಸಿ ದಬ್ಬಾಳಿಕೆ ಮಾಡಿದರು ಎಂದು ದೂರಿದರು.
ಈ ಭಾಗದ 16 ಸಂತ್ರಸ್ತರಿಗೆ ಮಾತ್ರ ಪರಿಹಾರ ನೀಡಲಾಗಿದೆ. ಉಳಿದವರಿಗೆ ಪರಿಹಾರ ನೀಡಿಲ್ಲ. ಈ ಭಾಗದ ರೈತರಿಗೆ ಅನುಕೂಲವಾಗುವಂತೆ ಕಾಲುವೆ ಪಕ್ಕದಲ್ಲಿ ಟ್ಯಾಂಕ್ ನಿರ್ಮಿಸಿ ನೀರು ಉಪಯೋಗಿಸಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಸಂತ್ರಸ್ತರ ಸಭೆ ಕರೆಯಿರಿ: ಜಿಪಂ ಮಾಜಿ ಅಧ್ಯಕ್ಷ ಟಿ.ಡಿ. ರಾಜೇಗೌಡ ಮಾತನಾಡಿ, ಸಂತ್ರಸ್ತರ ಸಭೆ ಕರೆದು ಚರ್ಚೆ ನಡೆಸಿ, ಸಮಸ್ಯೆಗೆ ನ್ಯಾಯವಾದ ಪರಿಹಾರ ಸಿಗುತ್ತದೆ ಎಂದು ನೀರಾವರಿ ಸಚಿವರನ್ನು ಒತ್ತಾಯಿಸಿದರು. ಭೂಮಿ ಕಳೆದುಕೊಂಡ ಕೆಲವು ಸಂತ್ರಸ್ತರು ಸಚಿವರೊಂದಿಗೆ ಮಾತನಾಡಿ, ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣಕ್ಕೆ ಜಾಗ ಕಳೆದುಕೊಂಡವರಿಗೆ 1 ಎಕರೆಗೆ ರು. 15 ಲಕ್ಷ ಪರಿಹಾರ ನೀಡಲಾಗುತ್ತದೆ. ಇಲ್ಲಿ 3 ಲಕ್ಷ, 5 ಲಕ್ಷ ಪರಿಹಾರ ನೀಡಲಾಗುತ್ತಿದೆ. ಪರಿಹಾರ ಸಾಲದು ಎಂದು ಸಚಿವರಿಗೆ ದೂರು ನೀಡಿದರು.
3 ವರ್ಷದಿಂದ ಬೆಳೆ ಇಲ್ಲವಾಗಿದೆ. ನಾವು ಬದುಕುವುದು ಬೇಡವೇ  ಎಂಬುದು ಸಂತ್ರಸ್ತರ ಪ್ರಶ್ನೆಯಾಗಿತ್ತು. ಗುತ್ತಿಗೆದಾರರು ಕೆಲವು ರೈತರಿಗೆ ರು. 25,000 ಆಮಿಷ ಒಡ್ಡಿ ಜಮೀನು ವಶ ಪಡಿಸಿಕೊಂಡರು. ಅವರಿಗೆ ಮಾತ್ರ ಪರಿಹಾರ ನೀಡಿದ್ದಾರೆ. ಉಳಿದವರಿಗೆ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.
ನೀರಿನ ಟ್ಯಾಂಕ್ ಬಗ್ಗೆ ಪರಿಶೀಲಿಸಿ:  ಸ್ಥಳೀಯರಿಗೆ ಕಾಲುವೆಯಿಂದ ನೀರು ಎತ್ತಿ ಟ್ಯಾಂಕಿಗೆ ತುಂಬಿಸುವ ಬಗ್ಗೆ ಪರಿಶೀಲಿಸುವಂತೆ ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಎಂಜಿನಿಯರ್ ಚೆಲುವರಾಜ್ ಅವರಿಗೆ ನೀರಾವರಿ ಸಚಿವ ಎಂ.ಬಿ. ಪಾಟೀಲ್ ಸ್ಥಳದಲ್ಲೇ ಸೂಚಿಸಿದರು.
ಸಚಿವ ಎಂ.ಬಿ. ಪಾಟೀಲ್ ನೀರಾವರಿ ಯೋಜನೆ ವೀಕ್ಷಿಸುವ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಎಂಜಿನಿಯರ್ ಚೆಲವರಾಜು, ಎಂಜಿನಿಯರ್ ತಿಪ್ಪೇಸ್ವಾಮಿ, ಯೋಜನೆ ವ್ಯವಸ್ಥಾಪಕ ರುದ್ರಯ್ಯ, ಜಿಪಂ ಮಾಜಿ ಅಧ್ಯಕ್ಷ ಟಿ.ಡ. ರಾಜೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್, ಕಾಂಗ್ರೆಸ್  ಮುಖಂಡ ಕೆ.ಎಂ. ಗಂಗಾಧರ್, ಸ್ನ್ ಮೀಗ, ಬಿ.ಎಸ್. ಸುಬ್ರಮಣ್ಯ, ಉಪೇಂದ್ರ, ತರೀಕೆರೆ ಉಪ ವಿಭಾಗಾಧಿಕಾರಿ ಅನುರಾಧಾ, ತಹಸೀಲ್ದಾರ್ ಕೃಷ್ಣಮೂರ್ತಿ, ಪಪಂ ಸದಸ್ಯೆ ಲೇಖಾ ವಸಂತ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಎಲ್ದೋ, ಮುತ್ತಿನಕೊಪ್ಪ ಗ್ರಾಪಂ ಸದಸ್ಯರಾದ ಸಗೀರ್, ಬೆಳ್ಳಪ್ಪ ಮತ್ತಿತರರು ಈ ವಾಳೆ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.