ಚಿಕ್ಕಮಗಳೂರು

ಮಾರ್ಗದರ್ಶಿ ಅಧಿಕಾರಿ ಗೈರು: ಪ್ರತಿಭಟನೆ

Published On :

ಕ.ಪ್ರ.ವಾರ್ತೆ, ಕಡೂರು, ನ.16
ತಾಲೂಕಿನ ಮಲ್ಲೇಶ್ವರ ಗ್ರಾಪಂನಲ್ಲಿ ನಡೆದ ಗ್ರಾಮಸಭೆಗೆ ಸಂಬಂಧಿಸಿದ  ಮಾರ್ಗದರ್ಶಿ ಅಧಿಕಾರಿ ಬಾರದಿರುವುದನ್ನು ಸದಸ್ಯರು ಪ್ರತಿಭಟಿಸಿದ ನಂತರ ಬೇರೊಬ್ಬ ಅಧಿಕಾರಿ ಆಗಮಿಸುವ ಮೂಲಕ ಸಭೆ ಮುಂದುವರಿಸಿದ ಘಟನೆ ನಡೆಯಿತು.
ಮಲ್ಲೇಶ್ವರ ಗ್ರಾಪಂ ಗ್ರಾಮ ಸಭೆಯಲ್ಲಿ ಮಾರ್ಗದರ್ಶಿ ಅಧಿಕಾರಿಯಾಗಿದ್ದ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಪಿ. ಲೋಕೇಶ್ ಬಾರದೇ ಇದ್ದುದರಿಂದ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು, ಅಧಿಕಾರಿಯೇ ಇಲ್ಲದ ಮೇಲೆ ಸಭೆ ನಡೆಸುವ ಅಗತ್ಯವಾದರೂ ಏನು ಎಂದು ಸಭೆ ಬಹಿಷ್ಕರಿಸಲು ನಿರ್ಧರಿಸಿದಾಗ ಸಭೆ ಮುಂದೂಡುವಂತೆ ಒತ್ತಾಯಿಸಲಾಯಿತು.
ಸಭೆ ಮುಂದುವರಿಕೆ: ಅನಂತರ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಸ್. ಜಯಪ್ಪ ಶಿಕ್ಷಣಾಧಿಕಾರಿಗಳಿಗೆ ಪರಿಸ್ಥಿತಿ ತಿಳಿಸಿದ ನಂತರ ಮತ್ತೊಬ್ಬ ಅಧಿಕಾರಿ ಹುನಿಯಾನಾಯ್ಕರವರನ್ನು ಕಳಿಸುವ ಮೂಲಕ ಸಭೆ ಮಂದುವರಿಯಿತು.
ಗ್ರಾಪಂ ಅಧ್ಯಕ್ಷ ಎಂ.ಎಚ್. ಸಿದ್ರಾಮಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಂಚಾಯ್ತಿ ಸದಸ್ಯ ಶೂದ್ರ ಶ್ರೀನಿವಾಸ್ ಮಾತನಾಡಿ, ಕಾಟಾಚಾರದ ಸಭೆ ನಡೆಸುವ ಅಗತ್ಯ ಇರುವುದಿಲ್ಲ. ಈ ರೀತಿ ಮಾಡಿದರೆ ಜನರಿಗೆ ಸದಸ್ಯರು ಉತ್ತರ ಹೇಳುವುದಾದರೂ ಹೇಗೆ ಎಂದು ಪ್ರಶ್ನಿಸಿ, ಸರ್ಕಾರದಿಂದ ದೊರಕಬೇಕಾದ ಸವಲತ್ತುಗಳು ನಿಜವಾದ ಫಲಾನುಭವಿಗಳಿಗೆ ದೊರಕುತಿಲ್ಲ. ಅಲ್ಲದೇ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜನರನ್ನು ಉದ್ಯೋಗಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದರು.
ರಾಜ್ಯ ಸರ್ಕಾರ ಗುಡಿಸಲು ಮುಕ್ತ ರಾಜ್ಯ ಮಾಡುವ ಪಣ ತೊಟ್ಟಿದ್ದರೂ, ಗುಡಿಸಲಿನಲ್ಲಿ ಇರುವ ನಿಜವಾದ ಬಡವರಿಗೆ ಮನೆ ನೀಡದೆ ವಂಚಿತರಾಗುತ್ತಿದ್ದಾರೆ. ಅಲ್ಲದೆ ಪಂಚಾಯ್ತಿಯಲ್ಲಿ ಬಹಳಷ್ಟು ಅವ್ಯವಹಾರವಾಗಿದೆ ಎಂದು ಆರೋಪಿಸಿ, ಈ ಬಗ್ಗೆ ತನಿಖೆ ನಡೆಯುವ ಮೂಲಕ ಬಡವರನ್ನು ಗುರುತಿಸಿ ಸರ್ಕಾರಿ ಸವಲತ್ತು ದೊರಕಿಸುವ ಕೆಲಸ ಆಗಬೇಕಿದೆ ಎಂದರು.
ವಾರ್ಡ್ ಸಭೆ ನಡೆಸಿ ಅರ್ಜಿ: ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಸ್. ಜಯಣ್ಣ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿ, ಸರ್ಕಾರದ ಆದೇಶದಂತೆ 2014-15ನೇ ಸಾಲಿಗೆ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಮಗಾರಿ, ವೈಯಕ್ತಿಕ ಸವಲತ್ತು ಸೇರಿದಂತೆ ಮನೆಗಳಿಗೆ ಸದಸ್ಯರು ವಾರ್ಡ್ ಸಭೆ ನಡೆಸಿ ಅರ್ಜಿ ನೀಡಿದ್ದಾರೆ ಎಂದರು.
ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸದಸ್ಯರು ಚರ್ಚೆ ನಡೆಸಿದರು. ಸಭೆಯಲ್ಲಿ ಮಾರ್ಗದರ್ಶಿ ಅಧಿಕಾರಿ ಹುನಿಯಾನಾಯ್ಕ, ಉಪಾಧ್ಯಕ್ಷೆ ಗಂಗಮ್ಮ, ಸದಸ್ಯ ಶೂದ್ರ ಶ್ರೀನಿವಾಸ್, ರಾಜನಾಯ್ಕ, ಕುಮಾರಪ್ಪ,ಪವಿತ್ರ, ಭಾಗ್ಯಮ್ಮ, ಮೀನಾಕ್ಷಿ, ಗೋವಿಂದಪ್ಪ, ಲಲಿತಮ್ಮ, ಲಕ್ಷ್ಮಿ ಮತ್ತು ವಿವಿಧ ಇಲಾಖೆಗೆ ಸಂಬಂಧಿಸಿದವರು  ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.