ಚಿಕ್ಕಮಗಳೂರು

ರಕ್ತದಾನವನ್ನು ಕರ್ತವ್ಯವೆಂದು ಭಾವಿಸಿ

Published On :

ಕ.ಪ್ರ.ವಾರ್ತೆ  ಚಿಕ್ಕಮಗಳೂರು   ನ.17
ದೇಶದ ಪ್ರತಿಯೊಬ್ಬ ವ್ಯಕ್ತಿಯೂ ರಕ್ತದಾನವನ್ನು ತನ್ನ ಕರ್ತವ್ಯವೆಂದು ಬಾವಿಸಿ ಆಗಾಗ ರಕ್ತದಾನ ಮಾಡಿದಲ್ಲಿ ಮಾತ್ರ ರಾಷ್ಟ್ರದಲ್ಲಿ ಸಂಭವಿಸುವ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯ ಎಂದು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಸರ್ಜನ್ ಡಾ. ಆರ್. ದೊಡ್ಡಮಲ್ಲಪ್ಪ ಹೇಳಿದ್ದಾರೆ.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾ ಮೊಗವೀರ ಮಹಾಜನ ಸಂಘ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಗರಿಕರು ರಕ್ತದಾನ ಮಾಡಿದಾಗ ಮಾತ್ರ ರೋಗಿಗಳು ಮತ್ತು ಅಪಘಾತದಲ್ಲಿ ಗಾಯಗೊಂಡವರನ್ನು ಉಳಿಸಲು ವೈದ್ಯರಿಗೆ ಸಾಧ್ಯವಾಗುತ್ತದೆ ಎಂದರು.
ಪರ್ಯಾಯ ವಸ್ತುವಿಲ್ಲ: ರಕ್ತಕ್ಕೆ ಪರ್ಯಾಯವಾದ ವಸ್ತುವಿಲ್ಲ, ಅದನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ ಅದನ್ನು ದಾನದಿಂದ ಮಾತ್ರ ಪಡೆಯಬಹುದು ಎಂದ ಅವರು, ಇದನ್ನು ಅರಿತು ಸಾರ್ವಜನಿಕರು ಭಯ ಮತ್ತು ಹಿಂಜರಿಕೆಯನ್ನು ಬಿಟ್ಟು ರಕ್ತದಾನ ಮಾಡುವ ಮೂಲಕ ಪ್ರಾಣ ದಾನಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ರಕ್ತದಾನ ಮಾಡುವುದು ಉತ್ತಮ ಆರೋಗ್ಯಕ್ಕೆ ಸಹಕಾರಿಯಗುತ್ತದೆ ರಕ್ತದಾನದಿಂದ ಹೃದಯಾಘಾತದ ಸಂಭವ ಮತ್ತು ದೇಹದಲ್ಲಿನ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ, ಕೇವಲ 24 ಗಂಟೆಗಳಲ್ಲಿ ದಾನಿ ನೀಡಿದ ರಕ್ತದಷ್ಟು ಪ್ರಮಾಣದ ರಕ್ತ ಮತ್ತೆ ಆತನ ದೇಹದಲ್ಲಿ ಉತ್ಪಾದನೆಯಾಗುತ್ತದೆ ಎಂದು ತಿಳಿಸಿದರು.
ರಕ್ತದಾನ ಮಾಡಿ: ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಶಿವದತ್ ಮಾತನಾಡಿ, ಕಳೆದ 5 ವರ್ಷಗಳಿಂದ ನಿರಂತರವಾಗಿ ರಕ್ತದಾನ ಮಾಡುತ್ತಿರುವ ಜಿಲ್ಲಾ ಮೊಗವೀರ ಮಹಾಜನ ಸಂಘದ ಕಾರ್ಯವನ್ನು ಶ್ಲಾಘಿಸಿದ ಅವರು, ಇನ್ನಿತರ ಸಂಘ ಸಂಸ್ಥೆಗಳೂ ಇದರಿಂದ ಪ್ರೇರಣೆ ಪಡೆದು ರಕ್ತದಾನ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಎಲ್. ಶಂಕರ್ನಾಥ್, ನಾಡು ನುಡಿಗಾಗಿ ಹೋರಾಟ ನಡೆಸಿದವರ ಸ್ಮರಣೆಗಾಗಿ ಈ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಂಘದ ಅಧ್ಯಕ್ಷ ಕೆ. ರಾಮಣ್ಣ ಮಾತನಾಡಿ, ಉಡುಪಿಯ ಡಾ. ಜಿ. ಶಂಕರ್ ಅವರ ಪ್ರೇರಣೆಯಿಂದ ಕಳೆದ 5 ವರ್ಷಗಳಿಂದ ರಕ್ತದಾನ ಶಿಬಿರವನ್ನು ತಮ್ಮ ಸಂಘ ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.
ಮಹಿಳೆಯರು ಸೇರಿದಂತೆ ಮೊಗವೀರ ಸಮುದಾಯದ 41 ಯುವಕರು ಶಿಬಿರದಲ್ಲಿ ರಕ್ತದಾನ ಮಾಡಿದರು. ಸಂಘದ ಉಪಾಧ್ಯಕ್ಷ ಬಿ. ನಾರಾಯಣ್, ಕಾರ್ಯದರ್ಶಿ ಎಸ್. ನಾರಾಯಣ್, ಕೃಷ್ಣ ಕಾಂಚನ್, ಸಂತೋಷ್, ಅಣ್ಣಪ್ಪ ಸುವರ್ಣ, ರಮ್ಯ, ಮಿಥ್ಯಶ್ರೀ, ದಿವ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.