ಇಂದು ರೈಲು ಸಂಚಾರಕ್ಕೆ ಹಸಿರು ನಿಶಾನೆ
ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ನ.18
ಕಾಫಿಯ ತವರೂರಿನಲ್ಲಿ ಮಂಗಳವಾರ ನೂತನ ರೈಲು ಸಂಚಾರ ಲೋಕಾರ್ಪಣೆಗೊಳ್ಳಲಿದೆ.
ಕೇಂದ್ರ ಮತ್ತು ರಾಜ್ಯದಲ್ಲೂ ಕಾಂಗ್ರೆಸ್ ಅಧಿಕಾರದಲ್ಲಿದೆ. ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಕಾಂಗ್ರೆಸ್ನ ಕೈಯಲ್ಲಿದೆ. ಇದು, ಕಾಂಗ್ರೆಸ್ ಪಕ್ಷದ ಪಾಲಿಗೆ ಲಕ್ಕಿ ಈಯರ್. ಏಕೆಂದರೆ ಮುಂದಿನ ವರ್ಷದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಅದುದರಿಂದ ಈ ವರ್ಷದಲ್ಲೇ ಅದರಲ್ಲೂ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರ ಹುಟ್ಟು ಹಬ್ಬದ ದಿನದಂದೆ ಕಡೂರು- ಚಿಕ್ಕಮಗಳೂರು ನೂತನ ರೈಲ್ವೆ ಮಾರ್ಗವನ್ನು ಲೋಕಾರ್ಪಣೆ ಮಾಡುವ ಉದ್ದೇಶದಿಂದ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅವರು ಕಾಮಗಾರಿ ಪ್ರಗತಿಯ ಬಗ್ಗೆ ಪ್ರತಿಯೊಂದು ಹಂತದಲ್ಲೂ ಗಮನ ಹರಿಸುತ್ತಾ ಬಂದಿದ್ದರು.
ರೈಲ್ವೆ ಸಚಿವ ಖರ್ಗೆ ಉದ್ಘಾಟನೆ: ಕಾಮಗಾರಿ ಪೂರ್ಣಗೊಳಿಸುವ ಜತೆಗೆ ಈ ಕಾರ್ಯಕ್ರಮದ ಉದ್ಘಾಟನೆಗೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಯವರನ್ನು ಕರೆ ತರುವ ಪ್ರಯತ್ನವೂ ಸಹ ಕಾಂಗ್ರೆಸ್ನಿಂದ ನಡೆದಿತ್ತು. ಆದರೆ, ದೆಹಲಿಯಲ್ಲಿ ಇಂದಿರಾಗಾಂಧಿಯವರ ಜನ್ಮ ದಿನಾಚರಣೆ ಕಾರ್ಯಕ್ರಮ ಇರುವುದರಿಂದ ಚಿಕ್ಕಮಗಳೂರಿಗೆ ಬರಲು ಅವರಿಗೆ ಆಗುತ್ತಿಲ್ಲ. ಈ ಕಾರ್ಯಕ್ರಮದಲ್ಲಿ ಕರ್ನಾಟಕದವರೇ ಆದ ಕೇಂದ್ರದ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ, ಕೇಂದ್ರದ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಎಂ. ವೀರಪ್ಪ ಮೊಯ್ಲಿ ಹಾಗೂ ಕೇಂದ್ರದ ಸಾರಿಗೆ ಸಚಿವ ಆಸ್ಕರ್ ಫರ್ನಾಂಡೀಸ್ ಅವರು ಭಾಗವಹಿಸುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ. ಅಭಯಚಂದ್ರ ಜೈನ್, ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಚಿಕ್ಕಮಗಳೂರು ರೈಲ್ವೆ ನಿಲ್ದಾಣದಲ್ಲಿ ಮಧ್ಯಾಹ್ನ 1.30 ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ರೈಲು ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ.
ರಾಜಕೀಯ ಕ್ರೆಡಿಟ್: ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರದಲ್ಲಿರುತ್ತದೆಯೋ ಆ ಪಕ್ಷದವರು ಹೊಸ ಯೋಜನೆಯ ಉದ್ಘಾಟನೆಯ ಕ್ರೆಡಿಟ್ ಪಡೆದುಕೊಳ್ಳುವುದು ಸಹಜ. ಇದು, ಪ್ರತಿಪಕ್ಷದವರ ಕಣ್ಣು ಕೆಂಪಾಗಿಸುವುದು ಕೂಡ ಅಷ್ಟೇ ಸತ್ಯ.
ಕಡೂರು- ಚಿಕ್ಕಮಗಳೂರು ರೈಲ್ವೆ ಮಾರ್ಗದ ಉದ್ಘಾಟನಾ ಸಮಾರಂಭದ ದಿನಾಂಕ ನಿಗದಿಯಾಗುತ್ತಿದ್ದಂತೆ ಕೆಲವು ರಾಜಕೀಯ ಪಕ್ಷದವರು ಹಾಗೂ ಸಂಘಟನೆಯವರು ಈ ರೈಲ್ವೆ ನಿಲ್ದಾಣಕ್ಕೆ ನಾಮಕರಣ ಮಾಡಲು ಹೊರಟಿದ್ದರು. ಆದರೆ, ಅದ್ಯಾವುದರ ಬಗ್ಗೆ ರೈಲ್ವೆ ಇಲಾಖೆ ತಲೆ ಕೆಡಿಸಿಕೊಳ್ಳದೆ ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳುತ್ತಾ ಬಂದಿತು. ಈ ಭರದಲ್ಲಿ ಜನಪ್ರತಿನಿಧಿಗಳನ್ನು ಮರೆತಿರುವಂತೆ ಕಂಡು ಬಂದಿತು.
ಕಾರ್ಯಕ್ರಮಕ್ಕೆ 24 ಗಂಟೆಗೆ ಬಾಕಿ ಇದ್ದಗಲೂ ಕೂಡ ಕೆಲವು ಜನಪ್ರತಿನಿಧಿಗಳಿಗೆ ರೈಲ್ವೆ ಇಲಾಖೆಯಿಂದ ಆಹ್ವಾನ ಪತ್ರಿಕೆಗಳು ಬಂದಿರಲಿಲ್ಲ. ಇದು, ಆಡಳಿತ ಪಕ್ಷದವರ ವಿರುದ್ಧ ಪ್ರತಿಪಕ್ಷದವರು ಬೆರಳು ಮಾಡಿ ತೋರಿಸುವಂತೆ ಮಾಡಿತು.
ಒಳ್ಳೆಯ ಕೆಲಸದಲ್ಲಿ ಪಾಲು ನಿರೀಕ್ಷಿಸುವುದು ರಾಜಕೀಯ ಪಕ್ಷದವರ ಹಳೆಯ ಚಾಳಿ. ಅದು, ಏನೇ ಇರಲಿ ಚಿಕ್ಕಮಗಳೂರು ಜಿಲ್ಲೆಯ ಪಾಲಿಗೆ ಮಂಗಳವಾರ (19-11-2013) ಐತಿಹಾಸಿಕ ದಿನ.
ಈ ದಿನದಿಂದ ಚಿಕ್ಕಮಗಳೂರಿನಿಂದ ಪ್ರತಿ ದಿನ ಪ್ಯಾಸೆಂಜರ್ ರೈಲು ಸಂಚಾರಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

