ಭೂ ಒತ್ತುವರಿ ತೆರವು: ಸರ್ಕಾರಕ್ಕೆ ತರಾಟೆ
ಬೆಂಗಳೂರು: ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ನಿರ್ದಿಷ್ಟ ಕ್ರಿಯಾ ಯೋಜನೆ ರೂಪಿಸದೆ ಕೇವಲ ಅಂಕಿ-ಅಂಶಗಳನ್ನು ಸಲ್ಲಿಸುತ್ತಿರುವ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಸರ್ಕಾರಿ ಭೂಮಿ ಒತ್ತುವರಿ ತೆರವು ಸಂಬಂಧ ಬಾಲಸುಬ್ರಮಣಿಯನ್ ವರದಿ ಜಾರಿ ಕೋರಿ ಸಮಾಜ ಪರಿವರ್ತನ ಸಮುದಾಯ ಹಾಗೂ ನಮ್ಮ ಬೆಂಗಳೂರು ಫೌಂಡೇಷನ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್, ಒಂದು ಲಕ್ಷ ಎಕರೆಯಷ್ಟು ಒತ್ತುವರಿ ತೆರವುಗೊಳಿಸಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಉಳಿದ ಒತ್ತುವರಿ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ. ಈ ಸಂಬಂಧ ಸ್ಪಷ್ಟ ಅಂಕಿ ಅಂಶಗಳಿಲ್ಲ ಎಂದು ವಿವರಿಸಿದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯ ನ್ಯಾ.ಡಿ.ಎಚ್.ವಘೇಲ ಹಾಗೂ ನ್ಯಾ.ಎಚ್.ಎನ್.ಸತ್ಯನಾರಾಯಣ ಅವರಿದ್ದ ವಿಭಾಗೀಯ ಪೀಠ, ನೀವು ಸಲ್ಲಿಸಿರುವ ವರದಿಯಲ್ಲಿ ಅಂಕಿ ಅಂಶಗಳನ್ನು ಬಿಟ್ಟರೆ ಹೆಚ್ಚಿನ ವಿವರಗಳಿಲ್ಲ. ಒತ್ತುವರಿ ತೆರವು ಕಾರ್ಯಾಚರಣೆ ಜಾರಿಯಲ್ಲಿದೆ ಎಂದು ಹೇಳಿದರೆ ಸಾಲದು. ಎಲ್ಲಿ, ಎಷ್ಟು ಪ್ರಮಾಣದ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಪ್ರಶ್ನಿಸಿತು.
ಇದಕ್ಕೆ ಸೂಕ್ತ ಉತ್ತರ ನೀಡದ ಅಡ್ವೊಕೇಟ್ ಜನರಲ್, ಈ ಸಂಬಂಧ ಮಾಹಿತಿ ನೀಡಲು ಕಾಲಾವಕಾಶ ಕೋರಿದರು. ಇದನ್ನು ಪರಿಗಣಿಸಿದ ಪೀಠ, ವಿಚಾರಣೆ ನ. 25ಕ್ಕೆ ಮುಂದೂಡಿದ್ದು, ಸಮಗ್ರ ಕ್ರಿಯಾ ಯೋಜನೆ ಸಲ್ಲಿಸುವಂತೆ ಆದೇಶಿಸಿದೆ.
ಕಾನೂನು ಸಮರ: ನಾವು ನಿಮಗೆ ಒಂದೇ ಬಾರಿಗೆ ಎಲ್ಲಾ ಒತ್ತುವರಿಯನ್ನು ತೆರವುಗೊಳಿಸಿ ಎಂದು ಸೂಚನೆ ನೀಡುತ್ತಿಲ್ಲ. ಆದರೆ, ಇದು ದೀರ್ಘಕಾಲಿಕ ಪ್ರಕ್ರಿಯೆ. ನೀವು ಕೇವಲ ಒತ್ತುವರಿದಾರರಿಗೆ ನೋಟಿಸ್ ನೀಡಿದ್ದೇವೆ ಎಂದು ಸಮರ್ಥಿಸಿಕೊಂಡರೆ ಸಾಲದು. ನೋಟಿಸ್ ದೊರೆತೊಡನೆ ಅವರು ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಇದು ದೀರ್ಘಕಾಲಿಕ ಕಾನೂನು ಸಮರಕ್ಕೆ ಎಡೆ ಮಾಡಿಕೊಡುತ್ತದೆ. ಇದನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ಕೂಡ ನೀವು ಯೋಜನೆ ರೂಪಿಸಬೇಕು ಎಂದು ನ್ಯಾಯಪೀಠ ಸಲಹೆ ನೀಡಿದೆ.
ಸಕ್ರಮ ಅರ್ಜಿ ಬಾಕಿ: ರಾಜ್ಯದಲ್ಲಿ ಒತ್ತುವರಿಯಾಗಿದೆ ಎನ್ನಲಾದ 11.70 ಲಕ್ಷ ಎಕರೆ ಸರ್ಕಾರಿ ಜಮೀನಿನಲ್ಲಿ, 7.45 ಲಕ್ಷ ಎಕರೆ ಎಕರೆ ಜಮೀನಿನ ಸಕ್ರಮ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳು ವಿಚಾರಣಾ ಹಂತದಲ್ಲಿವೆ. ಈ ಸಂಬಂಧ ನೂತನ ಸಮಿತಿ ರಚನೆಯಾಗದ ಹಿನ್ನೆಲೆಯಲ್ಲಿ ಅರ್ಜಿಗಳು ಬಾಕಿ ಉಳಿದಿವೆ. ಉಳಿದ ಜಮೀನಿನಲ್ಲಿ ಈಗಾಗಲೇ 1 ಲಕ್ಷ ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ. ಉಳಿದ ಒತ್ತುವರಿಯನ್ನು ತೆರವುಗೊಳಿಸಬೇಕಿದೆ ಎಂದು ಅಡ್ವೊಕೇಟ್ ಜನರಲ್ ವರದಿ ಸಲ್ಲಿಸಿದರು.
ಬೃಹತ್ ಒತ್ತುವರಿ ತೆರವುಗೊಳಿಸಿ: ಸರ್ಕಾರ ಸಣ್ಣಪುಟ್ಟ ಭೂ ಒತ್ತುವರಿ ತೆರವುಗೊಳಿಸಿ ನ್ಯಾಯಾಲಯಕ್ಕೆ ಅಂಕಿ ಅಂಶ ನೀಡುತ್ತಿದೆ. 30 ಎಕರೆಗೂ ಹೆಚ್ಚು ಭೂಮಿ ಒತ್ತುವರಿ ಮಾಡಿಕೊಂಡಿರುವರನ್ನು ಬಿಟ್ಟು ಸಣ್ಣ ಪ್ರಮಾಣದ ಒತ್ತುವರಿ ಮಾಡಿಕೊಂಡವರಿಗೆ ನೋಟಿಸ್ ನೀಡಲಾಗುತ್ತಿದೆ. ನ್ಯಾಯಾಲಯದ ಆದೇಶವನ್ನೇ ನೆಪವಾಗಿರಿಸಿಕೊಂಡು ಕೊಳಚೆ ಪ್ರದೇಶಗಳನ್ನು ತೆರವುಗೊಳಿಸಲಾಗುತ್ತಿದೆ. ಆದರೆ, ಬೃಹತ್ ಪ್ರಮಾಣದ ಭೂಮಿ ಒತ್ತುವರಿ ಮಾಡಿಕೊಂಡವರಿಗೆ ಕನಿಷ್ಠ ನೋಟಿಸ್ ಕೂಡ ನೀಡಿಲ್ಲ ಎಂದು ಅರ್ಜಿದಾರರು ಆರೋಪಿಸಿದರು.
ಇದನ್ನು ಪರಿಗಣಿಸಿದ ನ್ಯಾಯಪೀಠ, ಮುಂದಿನ ವಿಚಾರಣೆಯಲ್ಲಿ ಇಲ್ಲಿಯವರೆಗೆ ತೆರವುಗೊಳಿಸಿರುವ 1 ಲಕ್ಷ ಎಕರೆ ಭೂಮಿಯ ತೆರವು ಕುರಿತು ಸಮಗ್ರ ಮಾಹಿತಿ ನೀಡುವಂತೆ ಆದೇಶಿಸಿ ವಿಚಾರಣೆಯನ್ನು ಮುಂದೂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

