ಚಿಕ್ಕಮಗಳೂರು

ಸೂರಿ ಆಡಂಬರಕ್ಕೆ ಮಾರು ಹೋಗದ ಸಾಹಿತಿ

Published On :


ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ  ನ.18
ಹೊಸ ಪ್ರತಿಭೆಗಳ ಸಾಹಿತ್ಯ ಸೃಷ್ಟಿಗೆ ಆಸರೆಯಾಗಿದ್ದ ಅಜ್ಜಂಪುರ ಜಿ.ಸೂರಿ ಬಹುಮುಖ ಪ್ರತಿಭೆಯ ಹೃದಯಶೀಲ ಸಾಹಿತಿ, ಸಂಘಟಕ ಎಂದು ಕಡೂರು ತಾಲೂಕು ಕಸಾಪ ಅಧ್ಯಕ್ಷ ಹೊಸೂರು ಪುಟ್ಟರಾಜು ಹೇಳಿದರು.
ಕನ್ನಡ ರಾಜ್ಯೋತ್ಸವ ಮಾಸಾಚರಣೆ ಅಂಗವಾಗಿ ಜಿಲ್ಲಾ ಕಸಾಪ, ಅಜ್ಜಂಪುರ ಜಿ. ಸೂರಿ ಪ್ರತಿಷ್ಠಾನ ನಗರದ ಯುರೇಕಾ ಅಕಾಡೆಮಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಿ. ಅಜ್ಜಂಪುರ ಜಿ. ಸೂರಿ ಬದುಕು- ಬರಹ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ವಿನಯವಂತಿಕೆ, ವಿಶಾಲ ಮನೋಭಾವ, ಸಹೃದಯ ಸದ್ಭಾವನೆ, ಆತಿಥ್ಯದ ಸತ್ಕಾರ ಗುಣ ಎಲ್ಲವೂ ಮೇಳೈಸಿದ್ದ ಇವರು 1939ರ ಏಪ್ರಿಲ್ 17ರಂದು ಅಜ್ಜಂಪುರದಲ್ಲಿ ಜನಿಸಿದರು. ತತ್ತ್ವಪದದ ಮೂಲಕ ಅಧ್ಯಾತ್ಮ ಸಾಧಕರಾಗಿದ್ದ ತಂದೆ ಬಳೆಗಾರ ಗೋವಿಂದಪ್ಪ ಆಯುರ್ವೇದ ಪಂಡಿತರಾಗಿದ್ದು, ಬಾಲ್ಯದಿಂದಲೇ ಸೂರಿ ಅವರ ಮೇಲೆ ಸಾಹಿತ್ಯದ ಪ್ರಭಾವ ಬೀರಿದ್ದರು. ಬಾಲ್ಯದಲ್ಲೇ ಕುಟುಂಬ ನಿರ್ವಹಣೆಯ ಹೊಣೆ ನಿಭಾಯಿಸಲು ಸರ್ಕಾರಿ ಕಚೇರಿ ಸೇರಿದ್ದು,  ವೃತ್ತಿಯೊಂದಿಗೆ ಪ್ರವೃತ್ತಿಯನ್ನೂ ಬೆಸೆದು ಸಾಹಿತ್ಯ ಸೃಷ್ಟಿಗೆ ಮುಂದಾದ ಸೂರಿ ಅವರ ಹಾಡು- ನಾಟಕಗಳು ಕೃಷಿ ಇಲಾಖೆಯ ಕಾರ್ಯಕ್ರಮ- ಸಾಧನೆಗಳನ್ನು ರೈತರಿಗೆ ತಲುಪಿಸುವಲ್ಲಿ ಬಳಕೆಯಾದವೆಂದರು.
106 ಉತ್ತಮ ಕೃತಿ ರಚನೆ: ಆಡಂಬರಕ್ಕೆ ಮಾರು ಹೋಗದೆ ಸಾತ್ವಿಕತೆ, ಪ್ರೀತಿ, ಸ್ನೇಹಕ್ಕೆ ಬೆಲೆ ಕೊಡುತ್ತಿದ್ದ ಸೂರಿ, 106 ಉತ್ತಮ ಕೃತಿ ರಚಿಸಿದ್ದು, ಅದರಲ್ಲಿ 33 ಸ್ವಂತ ಕೃತಿಗಳಾಗಿದ್ದವು. 20 ಕಥಾ ಸಂಕಲನ ಹಾಗೂ ಕಾದಂಬರಿಗಳಿದ್ದರೆ,
8 ಬಾನುಲಿ ನಾಟಕ, 3 ಚಿಂತನ ಕೃತಿ, 2 ಆಧ್ಯಾತ್ಮಿಕ ಕೃತಿ, ಆರೋಗ್ಯ ಮತ್ತಿತರ ವಿಚಾರ ಕೃತಿಗಳು ಇವೆ. 44 ಅನುವಾದಿತ ಕೃತಿಗಳನ್ನು ಈ ಮಣ್ಣಿಗೆ ಅನುಗುಣವಾಗಿ ಭಾವಾಂತರಿಸುವಲ್ಲಿ ಜಿ. ಸೂರಿ ಅವರ ಸಾಮರ್ಥ್ಯ ಎದ್ದು ಕಾಣುತ್ತದೆ. 80ರ ದಶಕದಲ್ಲಿ ರಾಜ್ಯದ 10 ಪ್ರಮುಖ ನಿಯತಕಾಲಿಕೆಗಳಲ್ಲಿ ಏಕಕಾಲದಲ್ಲಿ ಇವರ ಧಾರವಾಹಿಗಳು ಪ್ರಕಟವಾಗುತ್ತಿದ್ದವೆಂಬುದು ಒಂದು ದಾಖಲೆ ಎಂದರು.
ಸುಗಮ ಸಂಗೀತ ಗಂಗಾ ಕಾರ್ಯದರ್ಶಿ ಮಂಜುನಾಥ ಕಾಮತ್ ಹಾಗೂ ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಪರಿಸರ ತಜ್ಞ ಎಂ.ಎನ್. ಷಡಕ್ಷರಿ, ಲೇಖಕ ಮೇಕನಗದ್ದೆ ಲಕ್ಷ್ಮಣಗೌಡ ಮಾತನಾಡಿದರು.
ವಿಶಿಷ್ಟ: ಯುರೇಕಾ ಅಕಾಡೆಮಿ ಪ್ರಾಂಶುಪಾಲ ದೀಪಕ್ ದೊಡ್ಡಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೂರಿ ಅವರ ಸಾಹಿತ್ಯ ಸೇವೆ, ಸಂಘಟನಾ ಚಾತುರ್ಯ ವಿಶಿಷ್ಟವಾದದ್ದು. ಪುರಾತನ ಇತಿಹಾಸ ಪರಂಪರೆ ಹೊಂದಿರುವ ಕನ್ನಡ ಸಾಹಿತ್ಯಕ್ಕೆ ಭದ್ರ ಬುನಾದಿ ಇದ್ದು, ಯಾವುದೇ ಕಾರಣಕ್ಕೂ ಕನ್ನಡ ಸಾಯುವುದಿಲ್ಲ. ಜನಪದ, ವಚನ, ದಾಸ ಸಾಹಿತ್ಯ ಸೇರಿದಂತೆ ವೈವಿಧ್ಯಮ ಪ್ರಕಾರ ಹೊಂದಿರುವ ಕನ್ನಡ ಸಾಹಿತ್ಯವನ್ನು ಅರ್ಥ ಮಾಡಿಕೊಂಡು ಪ್ರಸಾರ ಮಾಡಲು ಪ್ರಯತ್ನಿಸಬೇಕೆಂದರು.
ಬಿಡಿಆರ್ ಕಾಲೇಜು ಪ್ರಾಂಶುಪಾಲ ಸೋಮಶೇಖರ್ ಸ್ವಾಗತಿಸಿದರು. ಸಾಹಿತಿ ಕುಂದೂರು ಅಶೋಕ್ ನಿರೂಪಿಸಿದರು. ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನದ ಅಧ್ಯಕ್ಷ ಸೂರಿ ಶ್ರೀನಿವಾಸ ವಂದಿಸಿದರು.  
ಜಿಲ್ಲಾ ಕಸಾಪ ಅಧ್ಯಕ್ಷ ನಾ.ಸು. ಶಿವಸ್ವಾಮಿ ಆಶಯ ಭಾಷಣ ಮಾಡಿದರು. ತೀರ್ಥಹಳ್ಳಿ ಜಗದೀಶ್ ಕವನ ವಾಚಿಸಿದರೆ, ಶಶಿ, ಸುರೇಶ್, ನಾಗರಾಜರಾವ್ರ ಗಾಯನ ಗಮನ ಸೆಳೆಯಿತು. ಎಲ್ಲ ಪ್ರೇಕ್ಷಕರಿಗೂ ಅಜ್ಜಂಪುರ ಜಿ. ಸೂರಿ ಪ್ರತಿಷ್ಠಾನದ ವತಿಯಿಂದ ಪ್ರಭು ಮತ್ತು ಶಶಿಧರ್ ಪುಸ್ತಕ ಕೊಡುಗೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.