ಚಿಕ್ಕಮಗಳೂರು

ವಿದ್ಯುತ್ ಮಾರ್ಗ ಸ್ಥಳಾಂತರಕ್ಕೆ ಆಗ್ರಹ

Published On :

ನರಸಿಂಹರಾಜಪುರ: ಕಟ್ಟಿನಮನೆ ಪ್ರೌಢ ಶಾಲೆಯ ಆಟದ ಮೈದಾನದಲ್ಲಿ ವಿದ್ಯುತ್ ಮಾರ್ಗವಿದ್ದು ಇದರಿಂದ ಅಪಾಯವಾಗುವ ಮುನ್ನವೇ ಮಾರ್ಗ ಬದಲಾಯಿಸಿ ಎಂದು ಕಟ್ಟಿನಮನೆ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳು ಆಗ್ರಹಿಸಿದ್ದಾರೆ.
ಬುಧವಾರ ಕಾನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜೋಗಿಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜೋಗಿಮಕ್ಕಿ, ಕಟ್ಟಿನಮನೆ, ಹರಾವರಿ ಹಾಗೂ ದಾವಣ ಶಾಲೆಗೆ ಸೇರಿದ ಮಕ್ಕಳ ಗ್ರಾಮ ಸಭೆಯಲ್ಲಿ ಈ ನಾಲ್ಕು ಶಾಲೆಗಳ ಮಕ್ಕಳು ತಮ್ಮ ಶಾಲೆಯ ಸಮಸ್ಯೆಗಳನ್ನು ಎಳೆ,ಎಳೆಯಾಗಿ ಬಿಡಿಸಿಟ್ಟರು.
ವಿದ್ಯುತ್ ಲೈನ್ ಸ್ಥಳಾಂತರಿಸಿ: ಕಟ್ಟಿನಮನೆ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಪ್ರವೀಣ್ ಸಭೆಯಲ್ಲಿ ಮಾತನಾಡಿ, ಕಟ್ಟಿನಮನೆ ಸರ್ಕಾರಿ ಪ್ರೌಢ ಶಾಲೆಯ ಆಟದ ಮೈದಾನದಲ್ಲೇ ವಿದ್ಯುತ್ ತಂತಿಗಳು ಹಾದು ಹೋಗಿವೆ. ಇತ್ತೀಚಿಗೆ ಶೃಂಗೇರಿಯಲ್ಲಿ ಕ್ರೀಡಾಕೂಟದ ಸಂದರ್ಭದಲ್ಲಿ ಮಕ್ಕಳಿಗೆ ವಿದ್ಯುತ್ ತಗುಲು ಮೃತಪಟ್ಟಿದ್ದರಿಂದ ನಮಗೂ ಭಯವಾಗಿದೆ. ತಕ್ಷಣ ವಿದ್ಯುತ್ ಲೈನ್ ಸ್ಥಳಾಂತರ ಮಾಡಿ ಎಂದು ಮನವಿ ಮಾಡಿದನು.
ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ತಾಲೂಕು ಪಂಚಾಯ್ತಿ ಉಪಾಧ್ಯಕ್ಷೆ ಸುಮಿತ್ರ ಮಕ್ಕಳ ಪ್ರಶ್ನೆಗೆ ಉತ್ತರಿಸಿ, ಈಗಾಗಲೇ ಕೆಡಿಪಿ ಸಭೆಯಲ್ಲೂ ವಿಷಯ ಪ್ರಸ್ತಾಪ ಮಾಡಿದ್ದೇನೆ. ಕಟ್ಟಿನಮನೆಯ ಶಾಲೆಯ ಎಸ್.ಡಿ.ಎಂ.ಸಿ. ಸಭೆ ಕರೆದು ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೈದಾನದ ಮಧ್ಯೆ ರಸ್ತೆ: ಕಟ್ಟಿನಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದಾರ್ಥಿನಿ ಸೌಂದರ್ಯ ಮಾತನಾಡಿ, ನಮ್ಮ ಶಾಲೆಗೆ ಆಟದ ಮೈದಾನದ ಮಧ್ಯೆ ರಸ್ತೆ ಹಾದು ಹೋಗಿದೆ. ಇದರಿಂದಾಗ ಅಟವಾಡಲು ತೊಂದರೆ ಆಗುತ್ತಿದೆ. ಆದ್ದರಿಂದ ರಸ್ತೆ ಸ್ಥಳಾಂತರಿಸಿ ಎಂದಳು.
ದಾವಣ ಶಾಲೆಯ ವಿದ್ಯಾರ್ಥಿನಿ ಅನನ್ಯ, ಕಟ್ಟಿನಮನೆ ಪ್ರೌಢ ಶಾಲೆಯ ವಿದ್ಯಾರ್ಥಿ ಕೌಸಿಕ್ ಮಾತನಾಡಿದರು.
ಶೇ.80 ಬೇಡಿಕೆ ಈಡೇರಿಕೆ: ಕಾನೂರು ಗ್ರಾಮ ಪಂಚಾಯ್ತಿ ಪಿ.ಡಿ.ಓ. ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ವರ್ಷ ನವಂಬರ್‌ನಲ್ಲಿ ಮಕ್ಕಳ ಗ್ರಾಮ ಸಭೆ ಮಾಡುತ್ತಿದ್ದು ಮಕ್ಕಳ ಬೇಡಿಕೆಯನ್ನು ಶೇ.80ರಷ್ಚು ನೆರವೇರಿಸಿದ್ದೇವೆ ಎಂದರು. ಮಕ್ಕಳ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಕಟ್ಟಿನಮನೆ ಪ್ರೌಢ ಶಾಲೆಯ ವಿದ್ಯಾರ್ಥಿ ಶಿಜಿತ್ ವಹಿಸಿದ್ದರು. ಕಾನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಂಜಿತ, ಗ್ರಾಮ ಪಂಚಾಯ್ತಿ ಸದಸ್ಯರಾದ ಸಂದ್ಯಾ, ನಾಗೇಶ್, ನಾಗರಾಜ್, ಸಿ.ಆರ್.ಪಿ. ಕುಮಾರ್, ಶಾಲಾ ಮುಖ್ಯೋಪಾಧ್ಯಾಯ ಸೋಮಶೇಖರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.