ಕೇಂದ್ರದಲ್ಲಿ ತೃತಿಯ ರಂಗ ಅಧಿಕಾರಕ್ಕೆ
ಶೃಂಗೇರಿ: ದೇಶದಲ್ಲಿ ಯುಪಿಎ ಸರ್ಕಾರ, ಮೋದಿ ವರ್ಚಸ್ಸು ಸೇರಿದಂತೆ ಯಾವುದೇ ರೀತಿಯ ಅಲೆಯಿಲ್ಲ. ಈಗಾಗಲೇ ಕಾಂಗ್ರೆಸ್, ಬಿಜೆಪಿ ಆಡಳಿತದಿಂದ ಜನ ಬೇಸತ್ತಿದ್ದಾರೆ. ಈ ಬಾರಿ ಮತದಾರರು ಬದಲಾವಣೆ ಬಯಸಿದ್ದಾರೆ. ಕೇಂದ್ರದಲ್ಲಿ ತೃತೀಯರಂಗ ಅಧಿಕಾರದ ಗದ್ದುಗೆ ಏರಲಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಜೆಡಿಎಸ್ ಅಭ್ಯರ್ಥಿ ದನಂಜಯಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ರೋಡ್ ಶೋ ನಡಸಿ ನಂತರ ಬಹಿರಂಗ ಸಭೆಯಲ್ಲಿ ಪ್ರಚಾರ ಭಾಷಣ ಮಾಡಿದ ಅವರು, ಸತತ ಬೆಲೆಯೇರಿಕೆ, ಭ್ರಷ್ಚಾಚಾರ, ಸ್ವಜನ ಪಕ್ಷಪಾತ, ಹಗರಣಗಳೇ ಕೇಂದ್ರ ಸರ್ಕಾರದ ಸಾಧನೆಗಳಾಗಿವೆ. ಕಾಂಗ್ರೆಸ್ ಸರ್ಕಾರ ಜನತೆ ಹಿತಕಾಪಾಡುವ ಬದಲು ಜನವಿರೋಧಿ ನೀತಿ ಅನುಸರಿಸಿತು. 10 ವರ್ಷಗಳ ಆಳ್ವಿಕೆಯಲ್ಲಿ ಯಾವುದೇ ಜನಪರ ಕೆಲಸಗಳು ಯಶಸ್ವಿಯಾಗಿಲ್ಲ. ಈ ಭಾಗದ ಸಂಸದರು ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ. ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಗೋರಕ್ ಸಿಂಗ್ ವರದಿ ಅನುಷ್ಠಾನ, ರೈತರ ಸಾಲ ಮನ್ನಾ, ಒತ್ತುವರಿ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ.
ಜನರು ಬೀದಿಪಾಲು: ಅಡಕೆ ಸಾವಿರಾರು ವರ್ಷಗಳ ಹಿಂದಿನಿಂದಲೂ ಬಂದಿರುವ ಸಾಂಪ್ರದಾಯಿಕ ಬೆಳೆಯಾಗಿದೆ. ಮಲೆನಾಡು ಭಾಗದ ವಾಣಿಜ್ಯ ಬೆಳೆಯೂ ಆಗಿದೆ. ಅಂತಹ ಅಡಕೆಯನ್ನೇ ವಿಷಕಾರಿ ಎಂದು ತಲೆಕೆಟ್ಟವರು ನೀಡಿದ ವರದಿಯನ್ನೇ ಆಧರಿಸಿ, ಅಡಕೆ ನಿಷೇಧಿಸಲು ಸುಪ್ರಿಂಕೋರ್ಟ್ಗೆ ಕೇಂದ್ರ ಸರ್ಕಾರ ಪ್ರಮಾಣಪತ್ರ ಸಲ್ಲಿಸಿ ರೈತರ ಬದುಕಿಗೆ ಕೊಡಲಿ ಏಟು ಹಾಕಲು ಹೊರಟಿದೆ. ಡಾ.ಕಸ್ತೂರಿ ರಂಗನ್ ವರದಿ ಜಾರಿಗೊಳಿಸಿ ಪಶ್ಚಿಮಘಟ್ಟದ ಜನರನ್ನು ಬೀದಿಪಾಲು ಮಾಡುತ್ತಿದೆ ಎಂದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ ಮಾತನಾಡಿ, ಬಿಜೆಪಿಯವರು ಮೋದಿ ಹೆಸರಿನಲ್ಲಿ ಬಿಜೆಪಿಗೆ ಮತ ನೀಡಿ ಎನ್ನುತ್ತಿದ್ದಾರೆ. ಇವರಿಗೆ ಮತ ಕೇಳುವ ನೈತಿಕತೆ ಇಲ್ಲ ಎಂದರು.
ಸಭೆಯಲ್ಲಿ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಜಿ.ಎಂ. ಸುರೇಂದ್ರ. ವಿವೇಕ ನಂದ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

