ಚಿಕ್ಕಮಗಳೂರು

ಮೋದಿ ಪ್ರಧಾನಿಯಾದರೆ ದೇಶದಲ್ಲಿ ಅಶಾಂತಿ

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಏ.15
ಬಹಿರಂಗ ಚುನಾವಣಾ ಪ್ರಚಾರ ಕೊನೆಗೊಳ್ಳಲು 5 ಗಂಟೆ ಬಾಕಿ ಇರುವಾಗ ಇಲ್ಲಿನ ಜಿಲ್ಲಾ ಆಟದ ಮೈದಾನದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಮೋದಿ, ಮಹಾ ಸುಳ್ಳುಗಾರ, ಭಂಡ, ಈ ದೇಶದ ಪ್ರಧಾನ ಮಂತ್ರಿಯಾಗಲೂ ನಾಲಾಯಕ್. ಬಿಜೆಪಿಯವರು ಮನಷ್ಯತ್ವ ಇಲ್ಲದವರು ಎಂದು ಸಿದ್ದರಾಮಯ್ಯ ಅವರು ಟೀಕಿಸಿದರು.
ಬಿಜೆಪಿ ಒಂದು ಕೆಟ್ಟ ಹಾಗೂ ಭ್ರಷ್ಟ ಸರ್ಕಾರ. ಕರ್ನಾಟಕ ರಾಜ್ಯದ ರಾಜಕೀಯದ ಇತಿಹಾಸದಲ್ಲಿ ಇಂತಹ ಸರ್ಕಾರ ಜನರು ಕಂಡಿರಲಿಲ್ಲ. ಅಕ್ರಮ ಗಣಿಗಾರಿಕೆ, ಭೂ ಹಗರಣ, ಡಿನೋಟಿಫೀಕೇಷನ್, ಅಕ್ರಮ ಕೃತ್ಯಗಳಲ್ಲಿ ಬಿಜೆಪಿಯ ಶಾಸಕರು, ಸಚಿವರು ತೊಡಗಿದ್ದರು. ಸ್ವತಃ ಬಿ.ಎಸ್. ಯಡಿಯೂರಪ್ಪ ಅವರು 24 ದಿನ ಜೈಲು ವಾಸ ಅನುಭವಿಸಿದ್ದರು. ರಾಜ್ಯದಲ್ಲಿ ಯಾವುದೇ ಮುಖ್ಯಮಂತ್ರಿಗೆ ಇಂತಹ ಸ್ಥಿತಿ ಬಂದಿರಲಿಲ್ಲ ಎಂದರು.
ಮಹಾ ಸುಳ್ಳುಗಾರ:  ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಚಿಕ್ಕಮಗಳೂರು ಜಿಲ್ಲೆಗೆ ಕೊಟ್ಟಿರುವ ಕೊಡುಗೆಯಾದರೂ ಏನೆಂದು ಮೋದಿ ಅವರು ಪ್ರಶ್ನೆ ಮಾಡಿದ್ದಾರೆ. ಬಾಂಗ್ಲಾ ದೇಶದ ಯುದ್ಧದ ಸಂದರ್ಭದಲ್ಲಿ ಇಂದಿರಾಗಾಂಧಿ ಅವರು ತೆಗೆದುಕೊಂಡ ತೀರ್ಮಾನದ ಬಗ್ಗೆ ಬಿಜೆಪಿಯ ಹಿರಿಯ ನಾಯಕರಾದ ವಾಜಪೇಯಿ ಅವರು ಇಂದಿರಾಗಾಂಧಿ ಅವರನ್ನು ದುರ್ಗಿ, ದೇವತೆ ಎಂದು ಬಣ್ಣಿಸಿದ್ದರು. ಆ ಇತಿಹಾಸವನ್ನು ಮೋದಿಯವರಿಗೆ ತಿಳಿದಿಲ್ಲ. ಅವರು ಚರಿತ್ರೆ ಓದಿಲ್ಲ ಎಂದರು.
ಮೋದಿ ಆಯ್ಕೆಯಿಂದ ಅಶಾಂತಿ:  ಮೋದಿ ಅವರು ಪ್ರಧಾನಮಂತ್ರಿಯಾದರೆ ದೇಶದಲ್ಲಿ ಅಶಾಂತಿ ನಿರ್ಮಾಣವಾಗುತ್ತದೆ. ಕೋಮುಗಲಭೆ, ರಕ್ತಪಾತದ ಸನ್ನಿವೇಶಗಳು ನಿರ್ಮಾಣಗೊಳ್ಳಲಿವೆ. ಈ ಕಾರಣಕ್ಕಾಗಿಯೇ ಅವರು ಪ್ರಧಾನಮಂತ್ರಿ ಆಗಬಾರದೆಂಬ ಉದ್ದೇಶದಿಂದ ಹೋರಾಟ ಮಾಡುತ್ತಿದ್ದೇವೆ ಎಂದರು.
ಬಿಜೆಪಿಯ ಚುನಾವಣಾ ಪ್ರಣಾಳಿಕೆಯ ಬಗ್ಗೆ ಪ್ರಸ್ತಾಪಿಸಿದ ಸಿದ್ದರಾಮಯ್ಯ,  ಇದೀಗ ಮತ್ತೆ ರಾಮಮಂದಿರ ನಿರ್ಮಾಣದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಹಿಂದುಗಳ ಭಾವನೆ ಕೆರಳಿ, ದ್ವೇಷ ಹುಟ್ಟು ಹಾಕುವುದು. ಬಿಜೆಪಿಯ ದುರುದ್ದೇಶ, ಇದೊಂದು ಕುತಂತ್ರ, ಸಾಮರಸ್ಯ ಹಾಳು ಮಾಡುವ ಕುಟಿಲ ಪ್ರಯ್ನತ್ನ ಎಂದು ಟೀಕಿಸಿದರು.
ಪ್ರಚಾರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಅಭಯಚಂದ್ರ ಜೈನ್, ಶಾಸಕ ಶ್ರೀನಿವಾಸ್, ವಿಧಾನಪರಿಷತ್ ಸದಸ್ಯರಾದ ಮೋಟಮ್ಮ, ಗಾಯತ್ರಿ ಶಾಂತೇಗೌಡ, ಎಂ.ಡಿ. ಲಕ್ಷ್ಮಿನಾರಾಯಣ್, ಕೇಂದ್ರದ ಮಾಜಿ ಸಚಿವರಾದ ಡಿ.ಕೆ.ತಾರಾದೇವಿ, ಸಿ.ಎಂ. ಇಬ್ರಾಹಿಂ, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ, ಮಾಜಿ ಸಂಸದ ಡಿ.ಎಂ. ಪುಟ್ಟೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್, ಮಾಜಿ ಅಧ್ಯಕ್ಷ ಎಂ.ಎಲ್. ಮೂರ್ತಿ ಉಪಸ್ಥಿತರಿದ್ದರು.
ಕೋಟೆ ಕೆರೆಗಳ ಅಭಿವೃದ್ಧಿ
ಕಾಮಗಾರಿ: ಸಿಎಂ ಅತೃಪ್ತಿ
ಚಿಕ್ಕಮಗಳೂರು: ನಗರದ ಬಸವನಹಳ್ಳಿ ಹಾಗೂ ಕೋಟೆ ಕೆರೆಗಳ ಅಭಿವೃದ್ಧಿಗೆ ಲಕ್ಷಾಂತರ ರುಪಾಯಿ ಹಣ ಖರ್ಚಾಗಿದೆ. ಆದರೆ, ಕಾಮಗಾರಿ ಮಾತ್ರ ತೃಪ್ತಿಕರವಾಗಿಲ್ಲ. ಆದುದರಿಂದ ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಯಯ್ಯ ಅವರು ಹೇಳಿದ್ದಾರೆ.
ಈ ಕೆರೆ ಖುದ್ದಾಗಿ ಇಂದು ನೋಡಿದ್ದು, ಲಕ್ಷಾಂತರ ರುಪಾಯಿಯನ್ನು ನುಂಗಿ ಹಾಕಿದ್ದಾರೆ. ಹಣ ಖರ್ಚಾಗಿದೆ. ಆದರೆ, ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಇದರ ಬಗ್ಗೆ ತನಿಖೆ ನಡೆಸಿ ಎಂಜಿನಿಯರ್ ಇರಲೀ, ಸಿ.ಟಿ. ರವಿಯೇ ಇರಲೀ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲ್ಲಿನ ಜಿಲ್ಲಾ ಆಟದ ಮೈದಾನದಲ್ಲಿ ಮಂಗಳವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿಯವರು ಹೇಳಿದರು.
ಬಿಜೆಪಿ ಅಪಪ್ರಚಾರ: ಸಿಎಂ
ಚಿಕ್ಕಮಗಳೂರು: ಅಡಕೆ ವಿಚಾರದಲ್ಲಿ ಬಿಜೆಪಿಯವರು ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಅಡಕೆ ನಿಷೇಧ ಕುರಿತು ಕೇಂದ್ರ ಸರ್ಕಾರದ ಮುಂದೆ ಯಾವುದೇ ಪ್ರಸ್ತಾಪವಿಲ್ಲ. ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಯಾವುದೇ ಸಂದರ್ಭದಲ್ಲೂ ಸಹ ಅಡಕೆ ಬೆಳೆಯನ್ನು ನಿಷೇಧ ಮಾಡುವುದಿಲ್ಲ. ಅದಕ್ಕೆ ರಾಜ್ಯ ಸರ್ಕಾರವೂ ಕೂಡ ಅವಕಾಶ ನೀಡುವುದಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.