ಶೂಟೌಟ್ ಪ್ರಕರಣ: ಸಿಬಿಐ ತನಿಖೆಗೆ ಆಗ್ರಹ
ಹಲ್ಲೆ ನಡೆಸಿದವರ ಗಡಿಪಾರಿಗೆ ಒತ್ತಾಯ ಟಿ ಕೋಮು ಸೌಹಾರ್ದ ವೇದಿಕೆಯಿಂದ ಶೃಂಗೇರಿ ಚಲೋ ನಾಳೆ
ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಏ.22
ಕಳೆದ ನಾಲ್ಕು ದಿನಗಳ ಹಿಂದೆ ನಕ್ಸಲ್ ನಿಗ್ರಹಪಡೆ ಸಿಬ್ಬಂದಿ ಗುಂಡೇಟಿನಿಂದ ಯುವಕ ಮೃತಪಟ್ಟ ಪ್ರಕರಣ ಹಲವು ಸಂಘಟನೆ, ರಾಜಕೀಯ ಪಕ್ಷಗಳಿಗೆ ಪ್ರತಿಭಟನೆ, ಚರ್ಚೆಗೆ ಗ್ರಾಸವಾಗಿದೆ.
ಶೃಂಗೇರಿ ತಾಲೂಕಿನ ತನಿಕೋಡು ಅರಣ್ಯ ತಪಾಸಣಾ ಕೇಂದ್ರದ ಬಳಿ ಎಎನ್ಎಫ್ ಸಿಬ್ಬಂದಿ ಗುಂಡಿಗೆ ಯುವಕ ಬಲಿಯಾಗಿದ್ದು, ಈ ಘಟನೆ ನಡೆದ ಕೆಲ ಸಮಯದ ನಂತರ ಶೃಂಗೇರಿ ಪಟ್ಟಣದಲ್ಲಿ ಮೃತ ಯುವಕನ ಸಂಬಂಧಿಕರ ವಾಹನಗಳ ಮೇಲೆ ಗುಂಪೊಂದು ಕಲ್ಲು ತೂರಾಟ ನಡೆಸಿರುವುದನ್ನು ಜಿಲ್ಲಾ ಕಾಂಗ್ರೆಸ್ ಸೇರಿದಂತೆ, ಜಿಲ್ಲಾ ಬ್ಯಾರಿಗಳ ಒಕ್ಕೂಟ ಹಾಗೂ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಖಂಡಿಸಿವೆ.
ತಾಲಿಬಾನ್ ಸಂಸ್ಕೃತಿ: ಕಬೀರ್ ಮೃತ ದೇಹವನ್ನು ತೆಗೆದುಕೊಂಡು ಹೋಗಲು ಬಂದಿದ್ದ ಸಂದರ್ಭದಲ್ಲಿ ಅವರ ಸಂಬಂಧಿಕರ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ, ಹಲ್ಲೆ ನಡೆಸಿರುವುದನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್ ತಾಲಿಬಾನ್ ಸಂಸ್ಕೃತಿ ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಆರೋಪಿಸಿದರು.
ಮೃಗಗಳ ರೀತಿಯಲ್ಲಿ ವರ್ತಿಸಿದ್ದಾರೆ. ಸುಸಂಸ್ಕೃತ ಸಮಾಜದಲ್ಲಿ ಇದನ್ನು ಖಂಡಿಸಬೇಕು. ಹಲ್ಲೆ ನಡೆಸಿರುವವರ ವಿರುದ್ಧ ಎಫ್.ಐ.ಆರ್. ದಾಖಲು ಮಾಡಬೇಕು. ಅವರಿಗೆ ಉಗ್ರ ಶಿಕ್ಷೆಯ ಜತೆಗೆ ಗಡಿಪಾರು ಮಾಡಬೇಕು. ಮುಂದೆ ಈ ರೀತಿಯ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಲಾಗಿದೆ ಎಂದರು.
ಸಿಬಿಐ ತನಿಖೆ: ಇದೊಂದು ಆಕಸ್ಮಿಕವಾಗಿ ನಡೆದಿರುವ ಘಟನೆ ಎಂಬುದಾಗಿ ಪೊಲೀಸರು ಹೇಳುವ ಮೂಲಕ ಈ ಪ್ರಕರಣವನ್ನು ತಿರುಚುವ ಪ್ರಯತ್ನ ಮಾಡುತ್ತಿದ್ದಾರೆ. ಘಟನೆ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿದರೆ ಹಲವು ಅನುಮಾನ ಹುಟ್ಟಿಕೊಳ್ಳುತ್ತವೆ. ಪೊಲೀಸರು, ಜಾನುವಾರುಗಳನ್ನು ಸಾಗಿಸುತ್ತಿದ್ದವರನ್ನು ಉದ್ದೇಶ ಪೂರ್ವಕವಾಗಿ ಗುಂಡಿಕ್ಕಿ ಹತ್ಯೆ ಮಾಡಿರುವುದು ಇದರಿಂದ ಸ್ಪಷ್ಟವಾಗಿ ಅರ್ಥವಾಗುತ್ತದೆ ಎಂದು ಜಿಲ್ಲಾ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷ ಕೆ. ಮಹಮದ್ ಸುದ್ದಿಗೋಷ್ಠಿಯಲ್ಲಿ ಸಂಶಯ ವ್ಯಕ್ತಪಡಿಸಿದರು.
ಮೃತ ಯುವಕನ ದೇಹ ತೆಗೆದುಕೊಂಡು ಹೋಗಲು ಬಂದಿದ್ದ ಸಂದರ್ಭದಲ್ಲಿ ಅವರ ಸಂಬಂಧಿಕರ ವಾಹನದ ಮೇಲೆ ಬಜರಂಗದಳದ ಕೆಲವು ಸ್ಥಳೀಯ ಮುಖಂಡರು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಗೊತ್ತಿದ್ದರೂ ಪೊಲೀಸ್ ಇಲಾಖೆ ಯಾರನ್ನೂ ಬಂಧಿಸಿಲ್ಲ. ಪೊಲೀಸರ ವರ್ತನೆ, ಉಡಾಫೆ ಉತ್ತರ ನೋಡಿದರೆ ಜಾನುವಾರು ಸಾಗಿಸುತ್ತಿದ್ದವರನ್ನು ಕೊಲೆ ಮಾಡಲು ಪೊಲೀಸರು ಮತ್ತು ಕೆಲವು ಸಂಘಟನೆಗಳು ಜಂಟಿಯಾಗಿ ರೂಪಿಸಿರುವ ಸಂಚು ಎಂಬ ಅನುಮಾನ ಕಾಡುತ್ತಿದೆ ಎಂದರು.
ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸದ ಶೃಂಗೇರಿ ವೃತ್ತ ನಿರೀಕ್ಷಕರು ಹಾಗೂ ಹತ್ಯೆ ಮಾಡಿರುವ ಎ.ಎನ್.ಎಫ್. ಪೊಲೀಸರನ್ನು ಕೂಡಲೇ ಅಮಾನತುಗೊಳಿಸಬೇಕು. ಸಂಘಪರಿವಾರದೊಂದಿಗೆ ಕೈ ಜೋಡಿಸಿ, ಅವರಿಗೆ ಬೇಕಾದ ಮಾಹಿತಿ ಕೊಡುತ್ತಿರುವ ಶೃಂಗೇರಿಯ ಗುಪ್ತಚರ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಾಗೇಂದ್ರ ಹಾಗೂ ಪೊಲೀಸ್ ಇಲಾಖೆ ವಾಹನ ಚಾಲಕ ಮಹೇಂದ್ರ ಅವರನ್ನು ಕೂಡಲೇ ಅಲ್ಲಿಂದ ವರ್ಗಾವಣೆ ಮಾಡಬೇಕು. ಹಲ್ಲೆ ನಡೆಸಿರುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಶೃಂಗೇರಿ ಚಲೋ: ತನಿಕೋಡು ಬಳಿ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಕೃತ್ಯ ಖಂಡಿಸಿ, ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಏ. 24 ರಂದು ಶೃಂಗೇರಿ ಚಲೋ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಂಡಿದೆ.
ಪೊಲೀಸ್ ಇಲಾಖೆ ಹಾಗೂ ಸಂಘಪರಿವಾರದ ಸಂಘಟನೆಗಳು ಹುಟ್ಟು ಹಾಕಿರುವ ಪ್ರಕರಣ ಇದಾಗಿದೆ. ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಏ. 24 ರಂದು ಬೆಳಗ್ಗೆ 10 ಗಂಟೆಗೆ ಶೃಂಗೇರಿಯ ಹಳೆ ಬಸ್ ನಿಲ್ದಾಣದಿಂದ ತಾಲೂಕು ಕಚೇರಿಯವರಿಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ವೇದಿಕೆ ರಾಜ್ಯ ಕಾರ್ಯದರ್ಶಿ ಕೆ.ಎಲ್. ಅಶೋಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

