ಕಬೀರ್ ಹತ್ಯೆ: ತಪ್ಪಿತಸ್ಥರ ಬಂಧನಕ್ಕೆ ಒತ್ತಾಯ
ಕ.ಪ್ರ.ವಾರ್ತೆ ಶೃಂಗೇರಿ ಏ. 23
ಸಮೀಪದ ತನಿಕೋಡು ಅರಣ್ಯ ತಪಾಸಣಾ ಕೇಂದ್ರದಲ್ಲಿ ಇತ್ತೀಚೆಗೆ ಎಎನ್ಎಫ್ ಪಡೆ ಕಬೀರ್ ಎಂಬಾತನನ್ನು ಗುಂಡು ಹಾರಿಸಿ ಹತ್ಯೆ ನಡೆಸಿರುವುದನ್ನು ಖಂಡಿಸಿ, ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ಕೋಮು ಸೌಹಾರ್ದ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಗುರುವಾರ ಬೆಳಗ್ಗೆ ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಮೆರವವಣಿಗೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕೋಮು ಸೌಹಾರ್ದ ವೇದಿಕೆಯ ಅಧ್ಯಕ್ಷ ಸುರೇಶ್ ಚಾಲನೆ ನೀಡಿದರು.
ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ಸಾಗಿತು. ಹತ್ಯೆ ನಡೆಸಿದ ಎಎನ್ಎಫ್ ಪೇದೆ ವಿರುದ್ಧ, ಮೃತನ ಕುಟಂಬದವರ ವಿರುದ್ಧ ಹಲ್ಲೆ ನಡೆಸಿದ ಸಂಘ ಪರಿವಾರದ ಕಾರ್ಯಕರ್ತರ ವಿರುದ್ಧ ಘೋಷಣೆ ಕೂಗಿದರು.
ನಂತರ ತಾಲೂಕು ಕಚೇರಿ ಎದುರು ಸಮಾವೇಶಗೊಂಡು ಪ್ರತಿಭಟನಾ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೋಮು ಸೌಹಾರ್ದ ವೇದಿಕೆ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಅಶೋಕ್, ನಕ್ಸಲ್ ನಿಗ್ರಹ ಪಡೆ ನಕ್ಸಲ್ರ ಹೆಸರಲ್ಲಿ ಕಬೀರ್ ಎಂಬ ಅಮಾಯಕ ಯುವಕನನ್ನು ಗುಂಡಿಕ್ಕಿ ಕಗ್ಗೊಲೆ ಮಾಡಿದ್ದಾರೆ. ಇದು ಎನ್ಕೌಂಟರ್ ಅಲ್ಲ. ಎಎನ್ಎಫ್ ಹಾಗೂ ಸಂಘ ಪರಿವಾರ ನಡುವೆ ಅನೈತಿಕ ಸಂಪರ್ಕದಿಂದ ಉದ್ದೇಶಪೂರ್ವಕವಾಗಿ ನಡೆಸಿರುವ ಪೂರ್ವಯೋಜಿತ ಕೃತ್ಯವಾಗಿದೆ. ಎಎನ್ಎಫ್ ಪಡೆ ಗಿರಿಜನರ, ಅಮಾಯಕ ಹತ್ಯಾಕಾಂಡ ನಡೆಸುತ್ತಿದೆ ಎಂದು ಆರೋಪಿಸಿದರು.
ಬೆಂಗಳೂರಿನ ಪ್ರಗತಿಪರ ಚಿಂತಕ ನಗರಿಬಾಬಯ್ಯ ಮಾತನಾಡಿ, ಅಮಾಯಕರನ್ನು ಗುಂಡಿಕ್ಕಿ ಕೊಲ್ಲುವ ಅಧಿಕಾರ ಯಾರಿಗೂ ಇಲ್ಲ. ದೇಶದಲ್ಲಿ ತಪ್ಪಿತಸ್ಥರನ್ನು ವಿಚಾರಿಸಲು, ಶಿಕ್ಷಿಸಲು ಕಾನೂನು ಇದೆ. ಬಂದೂಕು ನೀಡಿರುವುದು ಆತ್ಮರಕ್ಷಣೆಗಾಗಿ. ಅಮಾಯಕರ ಮೇಲೆ ಗುಂಡು ಹಾರಿಸಲು ಅಲ್ಲ. ಬಡ, ಅಮಾಯಕರ ಕುಟುಂಬದ ಭವಿಷ್ಯದ ಬಗ್ಗೆ ಯೋಚಿಸಬೇಕಿತ್ತು. ಈ ದೇಶದಲ್ಲಿ ಮನುವಾದ ಸಂವಿಧಾನಕ್ಕಿಂತ ದೊಡ್ಡದೇ, ಅನ್ಯಾಯದ ವಿರುದ್ಧ ಹೋರಾಡುವುದು ತಪ್ಪೇ ಎಂದು ಪ್ರಶ್ನಿಸಿದರು.
ಉಡುಪಿ ಜಿಲ್ಲಾ ಕೋಮು ಸೌಹಾರ್ದ ವೇದಿಕೆಯ ಜಿ. ರಾಜಶೇಖರ್ ಮಾತನಾಡಿ, ಮೃತ ಕಬೀರ್ನನ್ನು ನಕ್ಸಲ್ ಎಂದು ಅನುಮಾನದಿಂದ ಗುಂಡು ಹಾರಿಸಲಾಯಿತು ಎಂಬ ಜಿಲ್ಲಾ ಎಸ್ಪಿಯವರ ಹೇಳಿಕೆ ಬಾಲಿಶವಾದುದು. ಪೊಲೀಸರ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ. ಅಮಾಯಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ, ಎನ್ಕೌಂಟರ್ ನಡೆಸಿ ಅಮಾಯಕರನ್ನು ಕೊಲ್ಲುತ್ತಿದ್ದಾರೆ ಎಂದರು.
ಪ್ರಗತಿಪರ ಹೋರಾಟಗಾರ ಕಲ್ಕುಳಿ ವಿಠಲ ಹೆಗ್ಡೆ ಮಾತನಾಡಿ, ಕಬೀರನ ಶವ ನೋಡಲು ಬಂದವರ ಮೇಲೆ ಪೊಲೀಸರ ಎದುರೇ ಹಲ್ಲೆ ನಡೆಸಿರುವುದು ನಾಚಿಕೆಗೇಡು. ಘಟನೆಗೆ ಕಾರಣನಾದ ಪೇದೆಯನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಆಗ ಸತ್ಯಾಸತ್ಯತೆ ಹೊರಬರುತ್ತದೆ ಎಂದರು.
ಕೆಪಿಸಿಸಿ ಕಿಸಾನ್ ಘಟಕದ ರಾಜ್ಯ ಉಪಾಧ್ಯಕ್ಷ ಸಚಿನ್ ಮೀಗಾ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್, ಗೌಸ್ ಮೊಯಿದೀನ್, ಅಬ್ದುಲ್ ವಹಾಬ್, ಯೂಸೂಫ್ ಹಾಜಿ, ಸುರೇಶ್ ಸಕ್ರಬೈಲ್, ರೈತ ಸಂಘದ ದುಗ್ಗಪ್ಪ ಗೌಡ, ದಿನಕರ, ಸುರೇಶ್ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು. ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

