ಮಂಗನ ಕಾಯಿಲೆ; ಸಂಶೋಧನೆಗೆ ಪ್ರಸ್ತಾವನೆ
ಶಿವಮೊಗ್ಗ: ಮಂಗನ ಕಾಯಿಲೆ ಮಲೆನಾಡಿನ ಭಾಗದಲ್ಲಿ ಒಂದು ಆತಂಕ ಹುಟ್ಟಿಸುತ್ತಿರುವ ಗುಪ್ತಗಾಮಿನಿ ಕಾಯಿಲೆ. ಹಾಗೆಯೇ ಆರೋಗ್ಯ ಇಲಾಖೆಗೆ ದಿನದಿಂದ ದಿನಕ್ಕೆ ದೊಡ್ಡ ಸವಾಲಾಗಿ ಈ ಕಾಯಿಲೆ ಎದುರುಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗನ ಕಾಯಿಲೆ ಕುರಿತಾಗಿ ಉನ್ನತ ಮಟ್ಟದ ಸಂಶೋಧನೆ ನಡೆಸಿ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯೊಂದಿಗೆ ಕೂಡಿಕೊಂಡು ಜಿಲ್ಲಾ ಪಂಚಾಯಿತಿಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
1970ರ ದಶಕದಲ್ಲಿ ತಜ್ಞ ವೈದ್ಯರ ತಂಡ ಸಂಶೋಧನೆ ನಡೆಸಿ ಮಂಗನ ಕಾಯಿಲೆ ಕುರಿತಂತೆ ಒಂದು ವರದಿ ನೀಡಿತ್ತು. ಜೊತೆಗೆ ಒಂದು ಮಾರ್ಗಸೂಚಿಯನ್ನು ಮಾಡಲಾಗಿತ್ತು. ಅಂದಿನಿಂದ 2014ರ ಇಂದಿನವರೆಗೂ ಅದೇ ಮಾರ್ಗಸೂಚಿಯಂತೆ ನಡೆಯಲಾಗುತ್ತಿದೆ.
ಸಂಶೋಧನೆ ಅಗತ್ಯ: ಖಾಯಿಲೆ ಕಾಣಿಸಿಕೊಂಡ ಭಾಗದ ಜನರಿಗೆ ಮಾಡುವ ವ್ಯಾಕ್ಸಿನೇಶನ್ ಸಹ ಮಾರ್ಗಸೂಚಿಯಂತೆ ಮಾಡಲಾಗುತ್ತಿದೆ. ಎಲ್ಲೆಲ್ಲಿ ವ್ಯಾಕ್ಸಿನೇಷನ್ ಮಾಡಬೇಕೆಂದು ವ್ಯಾಪ್ತಿ ವಿಸ್ತೀರ್ಣವೂ ಆ ಮಾರ್ಗಸೂಚಿಯಂತೆ ನಡೆಸಲಾಗುತ್ತಿದೆ. ಆದರೆ, ಅಂದಿನ ಮಾರ್ಗಸೂಚಿಗೆ ಇಂದಿನ ಖಾಯಿಲೆಯ ವ್ಯಾಪ್ತಿ ಅಗಾಧತೆಗೂ ತುಂಬಾ ವ್ಯತ್ಯಾಸವಿದೆ. ಇಂದು ಮಕ್ಕಳು, ವೃದ್ಧರಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಉನ್ನತಮಟ್ಟದ ಸಂಶೋಧನೆಯಾಗಬೇಕಾಗಿದೆ ಎಂಬುದು ಜಿಪಂ ಸಿಇಓ ಸಸಿಕಾಂತ್ ಸಂಥಿಲ್ ಅಭಿಪ್ರಾಯ.
ರಾಷ್ಟ್ರೀಯ ರೋಗ ಸೋಂಕು ಸಂಶೋಧನಾ ಕೇಂದ್ರದ ಮಾರ್ಗದರ್ಶನದಲ್ಲಿ ತಜ್ಞ ವೈದ್ಯರು, ಸಂಶೋಧಕರು ಸೋಂಕು ಕಾಣಿಸಿಕೊಳ್ಳುವ ಪ್ರದೇಶದಲ್ಲಿ ಬೀಡುಬಿಟ್ಟು ಸಂಶೋಧನೆ ನಡೆಸಬೇಕಾಗುತ್ತದೆ, ಆ ಮೂಲಕ ಪರಿಹಾರ ನಿರೀಕ್ಷಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಜೀವನ್ಮರಣದ ಹೋರಾಟ:
ಸತ್ತ ಮಂಗಗಳಿಂದ ಹೊರಬಿದ್ದ ಉಣ್ಣೆಗಳು ಕಾಡಿನಲ್ಲಿ ಮೇಯಲು ಬಂದ ದನಕರುಗಳು ಹಾಗೂ ಜನಸಾಮಾನ್ಯರಿಗೆ ಕಡಿದಾಗ ಈ ರೋಗ ಹರಡಲು ಕಾರಣವಾಗುತ್ತವೆ.
1957ರಲ್ಲಿ ಕ್ಯಾಸನೂರು ಕಾಡಲ್ಲಿ ಪತ್ತೆಯಾದ ಈ ರೋಗವು ನಂತರ ಶಿಕಾರಿಪುರ ತಾಲೂಕಿನಲ್ಲಿ ಕಾಣಿಸಿಕೊಂಡಿತು. ನಂತರ ಹೊಸನಗರ, ಸಾಗರದಲ್ಲಿ ವ್ಯಾಪಿಸಿ, ಇದೀಗ ತೀರ್ಥಹಳ್ಳಿ ತಾಲೂಕಿನ ಮಲೆನಾಡು ಭಾಗವನ್ನು ಆವರಿಸಿಕೊಂಡಿದೆ. ಪ್ರಮುಖವಾಗಿ ಶಿವಮೊಗ್ಗ ಜಿಲ್ಲೆಯ ಮಲೆನಾಡು ವ್ಯಾಪ್ತಿಯ ಜನರನ್ನು ಈ ಬಾಧೆ ಕಂಗೆಡಿಸಿದೆ.
ವ್ಯಾಕ್ಸಿನ್ ಪರಿಣಾಮ ಶೇ.60 ಮಾತ್ರ:
ಸದ್ಯ ಮಂಗನ ಕಾಯಿಲೆಯಿಂದ ಮುಂಜಾಗರೂಕತೆಯಾಗಿ ಸಾರ್ವಜನಿಕರಿಗೆ ನೀಡುತ್ತಿರುವ ವ್ಯಾಕ್ಸಿನ್ ಶೇ.60ರಷ್ಟು ಮಾತ್ರ ಪರಿಣಾಮಕಾರಿ. ಹೀಗೆಂದು ಆರೋಗ್ಯ ಇಲಾಖೆ ಅಧಿಕಾರಿಗಳೇ ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೇ, ಆರೋಗ್ಯ ಇಲಾಖೆ ಸಚಿವರಿಗೂ ಈ ವಿಷಯ ಮನವರಿಕೆ ಮಾಡಿಕೊಟ್ಟಿದ್ದು, ಪರ್ಯಾಯ ಆಲೋಚನೆಯ ಅಗತ್ಯತೆ ಇದೆ ಎಂದೂ ಸಹ ತಿಳಿಸಲಾಗಿದೆ.
ಅಲ್ಲದೇ ವ್ಯಾಕ್ಸಿನೇಷನ್ನ್ ಬಳಕೆಗೆ ಮೂರು ತಿಂಗಳಷ್ಟೇ ಯೋಗ್ಯ. ಸುಮಾರು 25 ಸಾವಿರ ಜನರಿಗೆ ವ್ಯಾಕ್ಸಿನೇಷನ್ ಮಾಡುವ ಅಗತ್ಯವಿದೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ವ್ಯಾಕ್ಸಿನೇಷನ್ ಮಾಡುವುದು ಮತ್ತು ವ್ಯಾಕ್ಸಿನೇಷನ್ ಮಾಡಿಸಿಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸುವುದೂ ಸಹ ಕ್ಲಿಷ್ಟಕರ ಸ್ಥಿತಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

