ಕಬೀರ್ ಕುಟುಂಬದ ಪರಿಹಾರ ತಡೆಹಿಡಿಯಿರಿ
ಚಿಕ್ಕಮಗಳೂರು: ಎಎನ್ಎಫ್ ಸಿಬ್ಬಂದಿ ನವೀನ್ ನಾಯಕ್ ವಿರುದ್ಧ ದಾಖಲಿಸಿರುವ ದೂರು ಹಿಂಪಡೆಯಬೇಕು, ಗೋ ಕಳ್ಳ ಸಾಗಾಟಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು, ಕಬೀರ್ ಕುಟುಂಬಕ್ಕೆ ನೀಡುತ್ತಿರುವ ಪರಿಹಾರ ತಡೆಹಿಡಿಯುವಂತೆ ಆಗ್ರಹಿಸಿ ಜಿಲ್ಲಾ ಬಿಜೆಪಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.
ಪಕ್ಷದ ಜಿಲ್ಲಾ ಕಚೇರಿಯಿಂದ ಮೆರವಣಿಗೆಯಲ್ಲಿ ಹೊರಟ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಧರಣಿ ನಡೆಸಿ, ಅಪರ ಜಿಲ್ಲಾಧಿಕಾರಿ ಅರ್ಚನಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ತನಿಗೋಡು ಚೆಕ್ಪೋಸ್ಟ್ ಬಳಿ ನಡೆದ ಶೂಟೌಟ್ ಪ್ರಕರಣ ಆಕಸ್ಮಿಕ. ಗೋ ಸಾಗಾಟಗಾರರನ್ನು ತೃಪ್ತಿಪಡಿಸಲು ಕಾಂಗ್ರೆಸ್ ಸರ್ಕಾರ ಇಡೀ ಪ್ರಕರಣವನ್ನು ತಿರುಚಲು ಹೊಂಚುಹಾಕಿದೆ. ಆಕಸ್ಮಿಕವಾಗಿ ಶೂಟೌಟ್ ನಡೆದಿದ್ದರೂ ಎಎನ್ಎಫ್ ಸಿಬ್ಬಂದಿ ನವೀನ್ ನಾಯಕ್ ವಿರುದ್ಧ ದೂರು ದಾಖಲಿಸಿರುವುದು ಸರಿಯಲ್ಲ. ನವೀನ್ ನಾಯಕ್ ವಿರುದ್ಧ ದಾಖಲಿಸಿರುವ ದೂರು ಹಿಂಪಡೆಯಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಜಾನುವಾರುಗಳ ಕಳ್ಳ ಸಾಗಣೆ ಮಾಡುತ್ತಿದ್ದವರ ಮೇಲೆ ಕಾನೂನಿನ ಸೂಕ್ತ ಕ್ರಮ ಕೈಗೊಳ್ಳಬೇಕು. ಮೂಲ ಘಟನೆಯನ್ನು ಮರೆಮಾಚಿ ಇತರೆ ವಿಚಾರಗಳಿಗೆ ಹೆಚ್ಚಿನ ಗಮನ ಹರಿಸುತ್ತಿರುವುದು ಸರಿಯಲ್ಲ. ಕಳ್ಳ ಸಾಗಣೆ ಮಾಡಿರುವ ಘಟನೆಯಲ್ಲಿ ಧರ್ಮ, ಜಾತೀಯತೆಯ ಓಲೈಕೆ ಕಂಡುಬರುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟುಮಾಡುತ್ತದೆ.
ಕಾನೂನಿನಡಿ ಎಲ್ಲರೂ ಸಮಾನರು. ಆದರೆ, ರಾಜ್ಯ ಸರ್ಕಾರ ಗೋ ಕಳ್ಳ ಸಾಗಣೆ ಮಾಡುತ್ತಿದ್ದವರ ರಕ್ಷಣೆಗೆ ನಿಂತಿರುವುದು ಖಂಡನೀಯ. ಆದ್ದರಿಂದ ತನಿಗೋಡು ಘಟನೆಯಲ್ಲಿ ಪಾಲ್ಗೊಂಡಿರುವ ಗೋ ಕಳ್ಳ ಸಾಗಣೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಕಬೀರ್ ಸುತ್ತಮುತ್ತಲ ಜಿಲ್ಲೆಗಳಲ್ಲಿ ಗೋವುಗಳನ್ನು ಕದ್ದು ಸಾಗಾಟ ಮಾಡುವ ದಂಧೆ ನಿರಂತರವಾಗಿ ನಡೆಸಿಕೊಂಡು ಬಂದಿದ್ದಾನೆ. ಕಬೀರ್ ವಿರುದ್ಧ ಮಂಗಳೂರು, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಹಾಸನ ಜಿಲ್ಲೆಗಳಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿರುತ್ತವೆ. ಕಬೀರ್ನನ್ನು ಸಭ್ಯ ವ್ಯಕ್ತಿಯಂತೆ ಬಿಂಬಿಸುತ್ತಿರುವುದು ವಿಷಾದನೀಯ ಎಂದರು.
ಕಬೀರ್ ಕುಟುಂಬಕ್ಕೆ ರಾಜ್ಯ ಸರ್ಕಾರ ಈಗಾಗಲೇ 10 ಲಕ್ಷ ಪರಿಹಾರ ಘೋಷಿಸಿದೆ. ಆಕಸ್ಮಾತ್ ಮುಂದೆಯೂ ಗೋ ಕಳ್ಳಗಾರರಿಗೆ ಪರಿಹಾರ ನೀಡುವ ಮತ್ತು ಕಾನೂನು ರಕ್ಷಣೆ ನೀಡುವ ಕ್ರಮದಿಂದ ಸಮಾಜದಲ್ಲಿ ಅಶಾಂತಿ ಮೂಡಿ, ಸೌಹಾರ್ದತೆಗೆ ಧಕ್ಕೆ ಆಗುತ್ತದೆ.
ಆದ್ದರಿಂದ ಪರಿಹಾರವನ್ನು ತಕ್ಷಣ ಹಿಂಪಡೆಯಕು. ಸಂಘ ಪರಿವಾರ ಮತ್ತು ಪೊಲೀಸರ ನಡುವೆ ಒಳಒಪ್ಪಂದವಾಗಿದೆ ಎಂದು ವಿವಿಧ ಸಂಘಟನೆಗಳು ಆರೋಪ ಮಾಡುತ್ತಿದೆ. ಇದು ಹಾಸ್ಯಾಸ್ಪದ, ಕ್ಷುಲ್ಲಕ ಹೇಳಿಕೆ ಎಂದರು.
ಜಿಲ್ಲೆಯಲ್ಲಿ ಕೋಮು ಸೌಹಾರ್ದ ವೇದಿಕೆ ಪ್ರತಿಭಟನೆ ನಡೆಸುತ್ತಿದೆ. ಅದು ಕೇವಲ ನೆಪ ಮಾತ್ರವಾಗಿದ್ದು, ಸೌಹಾರ್ದತೆಯ ಸೊಗಿನಲ್ಲಿ ನಕ್ಸಲ್ ನಿಗ್ರಹ ಪಡೆಯ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಕಾರ್ಯವೆಸಗಿದೆ. ಈ ಸಂಘಟನೆ ನಿಷೇಧಿಸಿ ವೇದಿಕೆಯ ಮುಖಂಡರನ್ನು ಗಡಿಪಾರು ಮಾಡಿ ಜಿಲ್ಲೆಯಲ್ಲಿ ಶಾಂತಿ ಕಾಪಾಡಬೇಕೆಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮ್ ಕುಮಾರ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಪದ್ಮ ಚಂದ್ರಪ್ಪ, ಉಪಾಧ್ಯಕ್ಷೆ ಅನ್ನಪೂರ್ಣ ಚೆನ್ನಕೇಶವ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಜಿಲ್ಲಾ ವಕ್ತಾರ ಎಚ್.ಡಿ. ತಮ್ಮಯ್ಯ, ಸಹ ವಕ್ತಾರ ಪುಟ್ಟೇಗೌಡ, ನಗರಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ನಗರಸಭಾಧ್ಯಕ್ಷ ಪುಷ್ಪರಾಜ್ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

