ಚಿಕ್ಕಮಗಳೂರು

ಕೇಸ್ ಹಿಂಪಡೆಯಿರಿ, ಇಲ್ದಿದ್ರೆ ರಾಜ್ಯ ಬಂದ್

Published On :

ಎಎನ್‌ಎಫ್ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ ದಾಖಲಿಗೆ  ಮುತಾಲಿಕ್ ಕಿಡಿ

ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಏ.30
ತನಿಕೋಡು ಚೆಕ್ ಪೋಸ್ಟ್‌ನಲ್ಲಿ ನಡೆದಿರುವ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎನ್‌ಎಫ್ ಸಿಬ್ಬಂದಿ ವಿರುದ್ಧ ಹೂಡಿರುವ ಕೊಲೆ ಪ್ರಕರಣ ಕೇಸನ್ನು ಹಿಂದಕ್ಕೆ ಪಡೆಯದೇ ಹೋದರೆ ಮುಂದಿನ ದಿನಗಳಲ್ಲಿ ರಾಜ್ಯ ಬಂದ್‌ಗೆ ಕರೆ ನೀಡಲಾಗುವುದು ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ನಗರದ ಹಿಂದುಪರ ಸಂಘಟನೆಗಳು ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿ ಹಾಗೂ ಓಲೈಕೆ ರಾಜಕಾರಣ ಖಂಡಿಸಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆಯಲ್ಲಿ ಇಲ್ಲಿನ ಆಜಾದ್ ಪಾರ್ಕ್ ವೃತ್ತದಲ್ಲಿ ಮಾತನಾಡಿದ ಮುತಾಲಿಕ್, ಮಲೆನಾಡು ಹಾಗೂ ಕರಾವಳಿಯಲ್ಲಿ ಅಕ್ರಮವಾಗಿ ಗೋ ಸಾಗಾಣಿಕೆ ನಡೆಯುತ್ತಿದೆ. ಇದನ್ನು ತಡೆಯುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಅಕ್ರಮವಾಗಿ ಗೋ ಸಾಗಾಣಿಕೆ ಮಾಡುತ್ತಿದ್ದ ಕಬೀರ್ ಮೇಲೆ ಎಎನ್‌ಎಫ್ ಸಿಬ್ಬಂದಿ ಗುಂಡು ಹಾರಿಸಿದ್ದಾರೆ, ಅಲ್ಪಸಂಖ್ಯಾತರನ್ನು ಓಲೈಸಲು ರಾಜ್ಯ ಸರ್ಕಾರ ಅವರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿದೆ. ಯಾವುದೇ ಕಾರಣಕ್ಕೂ ಅವರ ಕುಟುಂಬಕ್ಕೆ ಪರಿಹಾರ ನೀಡಬಾರದು ಎಂದು ಆಗ್ರಹಿಸಿದರು.
ಬಳಿಕ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಅರ್ಚನಾ ಅವರಿಗೆ ಮನವಿ ಸಲ್ಲಿಸಿ, ಗೋಹತ್ಯೆ ನಿಷೇಧ ಕಾನೂನು ತಿದ್ದುಪಡಿ ಮಸೂದೆ ಹಿಂದೆ ಪಡೆದು ಕಾನೂನುಬಾಹಿರವಾಗಿ ಗೋಹತ್ಯೆ ನಡೆಸಲು ಸರ್ಕಾರ ಅನುವು ಮಾಡಿದೆ. ಮೂಢನಂಬಿಕೆ ಪ್ರತಿಬಂಧಕ ಕಾನೂನು ಮುಖಾಂತರ ಹಿಂದುಗಳ ಧಾರ್ಮಿಕ ನಂಬಿಕೆ ಹತ್ತಿಕ್ಕುವ ಪ್ರಯತ್ನ ನಡೆದಿದೆ. ಅಹಿಂದ ಮಕ್ಕಳ ಪ್ರವಾಸದ ಹೆಸರಿನಲ್ಲಿ ಹಿಂದುಗಳ ವಿಭಜನೆ ಕೆಲಸ ಸರ್ಕಾರದಿಂದ ನಡೆದಿದೆ. ವಿಶ್ವವಿದ್ಯಾನಿಲಯಗಳ ಕುಲಪತಿ ಸ್ಥಾನಕ್ಕೆ ಹಿಂದುತ್ವ ವಿರೋಧಿ ಕುಲಸಚಿವರನ್ನು ನೇಮಕ ಮಾಡಲಾಗಿದೆಂದು ಆರೋಪಿಸಿದ್ದಾರೆ.
ಸಂಘ ಪರಿವಾರ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಗೂ ಗಡಿಪಾರಿಗೆ ಪ್ರಯತ್ನ ನಡೆಯುತ್ತಿದೆ. ಆಲ್ದೂರಿನಲ್ಲಿ ಧ್ವಜಕಟ್ಟೆ ತೆರವು ಮತ್ತು ಅನಾವಶ್ಯಕ ಸುಳ್ಳು ಮೊಕದ್ದಮೆ ದಾಖಲಿಸಿ ಸಂಘಟನೆಯ ಪ್ರಮುಖರನ್ನು ಜೈಲಿಗೆ ತಳ್ಳುವ ಕೆಲಸ ನಡೆದಿದೆ. ಗೋಹತ್ಯೆ ಮಾಡಲು ಅಕ್ರಮವಾಗಿ ಗೋವುಗಳ ಸಾಗಾಣಿಕೆ ಮಾಡಿದ್ದ ಕಬೀರ್ ಹತ್ಯೆ ನಡೆದಿದ್ದು, ಪ್ರಪಂಚದಲ್ಲೇ ಮೊದಲ ಬಾರಿಗೆ ಕಳ್ಳನಿಗೆ 10 ಲಕ್ಷ ಪರಿಹಾರ ನೀಡುವ ಕೆಲಸ ನಡೆದಿದೆ. ಶೂಟೌಟ್ ಪ್ರಕರಣದಲ್ಲಿ ಯಾವುದೇ ವಿಚಾರಣೆ ಮಾಡದೆ ಪೊಲೀಸ್ ಸಿಬ್ಬಂದಿಯನ್ನು ಜೈಲಿಗೆ ಹಾಕುವ ಕೆಲಸ ನಡೆದಿದೆ. ಪ್ರತಿನಿತ್ಯ ಹಿಂದುಗಳ ಮಾನಸಿಕ ಸ್ಥೈರ್ಯ ಕುಗ್ಗಿಸುವ ರೀತಿಯಲ್ಲಿ ಸರ್ಕಾರ ವರ್ತಿಸುತ್ತಿದೆ. ಈ ಧೋರಣೆ ಮುಂದುವರಿದರೆ ತೀವ್ರ ಹೋರಾಟ ರೂಪಿಸಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಬಜರಂಗದಳದ ರಾಜ್ಯ ಸಂಚಾಲಕ ಶರಣ್, ಜಿಲ್ಲಾ ಸಂಚಾಲಕ ಮಹೇಂದ್ರ, ಮುಖಂಡರಾದ ಯೋಗೀಶ್‌ರಾಜ್ ಅರಸ್, ಬಿಜೆಪಿ ನಗರಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಹಾಗೂ ಬಜರಂಗದಳ, ವಿಶ್ವಹಿಂದೂ ಪರಿಷತ್ ಹಾಗೂ ಶ್ರೀರಾಮ ಸೇನೆಯ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.